ತ್ರಿಪಕ್ಷೀಯ ಆಟಗಾರರ ಸಾಲ ಒಪ್ಪಂದ ಉಲ್ಲಂಘಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಫುಟ್‌ಬಾಲ್ ಆಟಗಾರ ಅನ್ವರ್ ಅಲಿ, ಇಮಾಮಿ ಈಸ್ಟ್ ಬೆಂಗಾಲ್ ಫುಟ್‌ಬಾಲ್ ಕ್ಲಬ್ (ಇಬಿಎಫ್‌ಸಿ) ಮತ್ತು ಡೆಲ್ಲಿ ಎಫ್‌ಸಿಗೆ ₹12.9 ಕೋಟಿ ದಂಡ ವಿಧಿಸಿದ್ದ ಅಖಿಲ ಭಾರತ ಫುಟ್‌ಬಾಲ್ ಒಕ್ಕೂಟದ (ಎಐಎಫ್‌ಎಫ್) ಆದೇಶವನ್ನು ಈಚೆಗೆ ದೆಹಲಿ ಹೈಕೋರ್ಟ್ ಬದಿಗೆ ಸರಿಸಿದೆ.
ದಂಡ ವಿಧಿಸುತ್ತಿರುವುದಕ್ಕೆ ಎಐಎಫ್‌ಎಫ್ ವಿಸ್ತೃತ ಸಕಾರಣ ನೀಡದಿರುವುದು ಮೂಲಭೂತವಾಗಿ ಸಹಜ ನ್ಯಾಯತತ್ವದ ಉಲ್ಲಂಘನೆಯಾಗಿದೆ ಎಂದು ನ್ಯಾಯಮೂರ್ತಿ ಸಂಜೀವ್ ನರುಲಾ ಅವರ ಏಕಸದಸ್ಯ ಪೀಠ ಹೇಳಿದೆ.
ಅನ್ವರ್ ಅಲಿ ಮಾತೃ ಕ್ಲಬ್ ಆದ ದೆಹಲಿ ಎಫ್‌ಸಿ ಮತ್ತು ಮೋಹನ್ ಬಗಾನ್ ಸೂಪರ್ ಜಯಂಟ್ (ಎಂಬಿಎಸ್‌ಜಿ) ನಡುವಿನ ಆಟಗಾರರ ಸಾಲವನ್ನಾಗಿ ನೀಡುವ ಒಪ್ಪಂದದಿಂದ ವಿವಾದ ಸೃಷ್ಟಿಯಾಗಿದೆ. ಈ ಒಪ್ಪಂದ ಭಾಗವಾಗಿ ಆಟಗಾರನನ್ನು ನಾಲ್ಕು ವರ್ಷಗಳ ಕಾಲ ಎಂಬಿಎಸ್‌ಜಿಗೆ ಸಾಲದ ರೂಪದಲ್ಲಿ ನೀಡಲಾಗಿತ್ತು.
ಆದರೆ, 2024ರ ಜುಲೈ 8ರಂದು ಒಪ್ಪಂದ ಉಲ್ಲಂಘಿಸಿದ್ದ ಅನ್ವರ್ ಅಲಿ ಮಾತೃ ಕ್ಲಬ್ ಡೆಲ್ಲಿ ಎಫ್‌ಸಿಗೆ ಮರಳಿದ್ದರು. ತದನಂತರ ಇಮಾಮಿ ಈಸ್ಟ್ ಬೆಂಗಾಲ್ ಎಫ್‌ಸಿಗೆ ಜುಲೈ 10ರಂದು ತಮ್ಮನ್ನು ವರ್ಗಾಯಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಎಐಎಫ್‌ಎಫ್ ಆಟಗಾರರ ಸ್ಥಿತಿ ಸಮಿತಿಯ (ಪಿಎಸ್‌ಸಿ) ಮುಂದೆ ಎಂಬಿಎಸ್‌ಜಿ ಪ್ರಕ್ರಿಯೆ ಆರಂಭಿಸಿತ್ತು. ಇದರ ವಿಚಾರಣೆ ನಡೆಸಿದ್ದ ಎಐಎಫ್‌ಎಫ್, ಎಂಬಿಎಸ್‌ಜಿಗೆ ₹12.9 ಕೋಟಿ ಪರಿಹಾರ ಪಾವತಿಸುವಂತೆ ಅನ್ವರ್ ಅಲಿ, ಡೆಲ್ಲಿ ಎಫ್‌ಸಿ ಮತ್ತು ಇಬಿಎಫ್‌ಸಿಗೆ ಆದೇಶಿಸಿತ್ತು.
ಇದಲ್ಲದೇ, ನಾಲ್ಕು ತಿಂಗಳು ಯಾವುದೇ ಪಂದ್ಯ ಆಡದಂತೆ ಅನ್ವರ್ ಅಲಿಗೆ ಎಐಎಫ್‌ಎಫ್ ನಿಷೇಧ ವಿಧಿಸಿತ್ತು. ಅಲ್ಲದೇ, ಡೆಲ್ಲಿ ಎಫ್‌ಸಿ ಮತ್ತು ಇಬಿಎಫ್‌ಸಿಯು ಎರಡು ವರ್ಗಾವಣೆ ಅವಧಿ ಮುಗಿಯುವವರೆಗೆ ಹೊಸ ಆಟಗಾರರ ನೋಂದಣಿ ಮಾಡುವಂತಿಲ್ಲ ಎಂದು ಆದೇಶಿಸಿತ್ತು. ಇದನ್ನು ಅರ್ಜಿದಾರರು ದೆಹಲಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.