ಕಾಂಗ್ರೆಸ್‌ ವಕ್ತಾರೆ ಶಮಾ ವಿರುದ್ಧ ಬಿಜೆಪಿಯ ಸಂಜೂ ವರ್ಮಾ ಅವಹೇಳನಕಾರಿ ಹೇಳಿಕೆಗೆ ದೆಹಲಿ ಹೈಕೋರ್ಟ್‌ ಕಿಡಿ

ಶಮಾ ಮೊಹಮ್ಮದ್ ವಿರುದ್ಧ ಸಂಜೂ ವರ್ಮಾ ಅವರು ‘ಬೇವಕೂಫ್ ಔರತ್’ (ಮೂರ್ಖ ಮಹಿಳೆ) ಎಂಬ ಪದವನ್ನು ಬಳಸಿದ್ದಲ್ಲದೆ ‘ಶಮಾ ಮೊಹಮ್ಮದ್ ಓರ್ವ ನಾಚಿಗೆಗೇಡಿ’, ‘ಮದರಸಾದಲ್ಲಿ ಕಲಿತ ಮತಾಂಧೆ’ ಎಂಬ ಹೇಳಿಕೆಗಳನ್ನು ನೀಡಿದ್ದರು.
Shama Mohamed, Delhi High Court
Shama Mohamed, Delhi High CourtFacebook
Published on

ಕಾಂಗ್ರೆಸ್ ವಕ್ತಾರೆ ಡಾ. ಶಮಾ ಮೊಹಮ್ಮದ್ ವಿರುದ್ಧ ಭಾರತೀಯ ಜನತಾ ಪಕ್ಷದ (ಬಿಜೆಪಿ) ವಕ್ತಾರೆ ಸಂಜೂ ವರ್ಮಾ ಅವಹೇಳನಕಾರಿ ಪದಗಳನ್ನು ಬಳಸಿದ್ದ ವಿಡಿಯೋ ಸಂವಾದವೊಂದನ್ನು ಯೂಟ್ಯೂಬ್‌ನಿಂದ ತೆಗೆದುಹಾಕುವಂತೆ ದೆಹಲಿ ಹೈಕೋರ್ಟ್ ಇತ್ತೀಚೆಗೆ ನ್ಯೂಸ್ 18ಗೆ ಆದೇಶಿಸಿದೆ.

ಇದೇ ವೇಳೆ, ನ್ಯಾಯಮೂರ್ತಿ ವಿಕಾಸ್ ಮಹಾಜನ್ ಅವರು ಶಮಾ ಮೊಹಮದ್ ಅವರ ಪ್ರತಿಷ್ಠೆಗೆ ಹಾನಿಯುಂಟು ಮಾಡುವಂತಹ ಹನ್ನೆರಡು ವಿಡಿಯೋಗಳನ್ನು ಸಹ X ಖಾತೆಗಳಿಂದ ತೆಗೆದು ಹಾಕುವಂತೆ X ಕಾರ್ಪ್‌ ಸಂಸ್ಥೆಗೆ ಆದೇಶಿಸಿದ್ದಾರೆ.

ಶಮಾ ಮೊಹಮ್ಮದ್ ವಿರುದ್ಧ ಸಂಜೂ ವರ್ಮಾ ಅವರು ‘ಬೇವಕೂಫ್ ಔರತ್’ (ಮೂರ್ಖ ಮಹಿಳೆ) ಎಂಬ ಪದವನ್ನು ಬಳಸಿದ್ದಲ್ಲದೆ ‘ಶಮಾ ಮೊಹಮ್ಮದ್ ಅತೀವ ನಾಚಿಗೆಗೇಡಿ’, ‘ಆಕೆ ಡಾಕ್ಟರ್ ಕೂಡ ಅಲ್ಲ’, ‘ಶಮಾ ಮದರಸಾದಲ್ಲಿ ಕಲಿತ ಮತಾಂಧೆ’ ಎಂದು ಹೇಳಿಕೆಗಳನ್ನು ನೀಡಿದ್ದರು.

ಕಾಂಗ್ರೆಸ್‌ನ ರಾಷ್ಟ್ರೀಯ ವಕ್ತಾರೆ ಮತ್ತು ವೃತ್ತಿಯಲ್ಲಿ ದಂತವೈದ್ಯರಾಗಿರುವ ಶಮಾ ಮೊಹಮ್ಮದ್ ಅವರ ವ್ಯಕ್ತಿತ್ವಕ್ಕೆ ಹಾನಿ ಮಾಡುವ ಅಂಶಗಳನ್ನು ಈ ಹೇಳಿಕೆಗಳು ಹೊಂದಿವೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು. ಇಂತಹ ಅಜಾಗರೂಕ ಹೇಳಿಕೆಗಳಿಗಾಗಿ ಬಿಜೆಪಿ ವಕ್ತಾರೆಯನ್ನು ತರಾಟೆಗೆ ತೆಗೆದುಕೊಂಡ ನ್ಯಾಯಾಲಯವು, "ಮೇಲೆ ಹೇಳಲಾದ ಪೋಸ್ಟ್‌ಗಳಲ್ಲಿ 'ಮದರಸಾ ತಳಿ ಮತಾಂಧೆ' "ಸುಳ್ಳಿನ ಮೂಲಕ ಜಾತಿ ವಿಷವನ್ನು ಹರಡಲು ಬಯಸುವ ಇಸ್ಲಾಮಿಸ್ಟ್‌", 'ಮದ್ರಸಾದಲ್ಲಿ ಕಲಿತ ಮತಾಂಧ ಶಮಾ' ಎಂಬಂತಹ ಟೀಕೆಗಳಿವೆ. ಈ ಟೀಕೆಗಳನ್ನು ಯಾವುದೇ ಸಮರ್ಥನೆ ಇಲ್ಲದೆ ಅಜಾಗರೂಕ ರೀತಿಯಲ್ಲಿ ಮಾಡಲಾಗಿರುವುದು ಕಂಡುಬರುತ್ತದೆ. ಸುದ್ದಿ ವಾಹಿನೆಗಳ ಚರ್ಚೆಯಲ್ಲಿ ಅನುಸರಿಸಬೇಕಾದ ಮೂಲಭೂತ ಶಿಷ್ಟಾಚಾರಗಳು ಮತ್ತು ನಡವಳಿಕೆಯನ್ನು ಸಹ ಕಡೆಗಣಿಸಲಾಗಿದೆ" ಎಂದು ಚಾಟಿ ಬೀಸಿತು.

ಸಂವಿಧಾನದ 19(1)(ಎ) ನೀಡಿರುವ ಹಕ್ಕುಗಳು ಸಾರ್ವಜನಿಕ ಹಿತಾಸಕ್ತಿ, ಸಭ್ಯತೆ, ನೈತಿಕತೆಗೆ ಒಳಪಟ್ಟಂತೆ ಸಮಂಜಸ ನಿರ್ಬಂಧಗಳನ್ನು ಒಳಗೊಂಡಿದೆ. ಮಾನಹಾನಿ, ಅಪರಾಧ ಪ್ರಚೋದನೆಯಂತಹ ಕಾರ್ಯಗಳನ್ನು ಎಸಗಲು ಈ ಹಕ್ಕುಗಳನ್ನು ಬಳಸಲಾಗದು ಎಂದು ನ್ಯಾಯಾಲಯವು ಹೇಳಿದೆ.

"ಈ ಸ್ವಾತಂತ್ರ್ಯವನ್ನು ಎಚ್ಚರಿಕೆಯಿಂದ ಬಳಸಬೇಕಾಗಿದೆ. ಇತರ ನಾಗರಿಕರ ಹಕ್ಕುಗಳನ್ನು ಉಲ್ಲಂಘಿಸಲು ಮತ್ತು ಅವರ ಸಾರ್ವಜನಿಕ ಹಿತಾಸಕ್ತಿಗಳಿಗೆ ಧಕ್ಕೆ ತರಲು ಅನುಮತಿಸಲಾಗುವುದಿಲ್ಲ. ಅದರಲ್ಲಿಯೂ ವಿಶೇಷವಾಗಿ, ರಾಜಕೀಯ ಕಾರ್ಯಕರ್ತರ ವಿಷಯದಲ್ಲಿ, ಅವರು ತಮ್ಮ ಸಾರ್ವಜನಿಕ ವ್ಯಕ್ತಿತ್ವವನ್ನು ರೂಪಿಸಲು ಜೀವಿತಾವಧಿಯನ್ನು ಕಳೆದಿರುತ್ತಾರೆ. ಯಾವುದೇ ರಾಜಕೀಯ ಘಟಕಗಳು/ವ್ಯಕ್ತಿಗಳು ಕ್ಷುಲ್ಲಕ ಲಾಭಕ್ಕಾಗಿ ಆಧಾರರಹಿತ, ಮಾನಹಾನಿಕರ ಹೇಳಿಕೆಗಳ ಮೂಲಕ ಇದಕ್ಕೆ ಧಕ್ಕೆ ತರಲು ಅನುಮತಿಸಲಾಗದು,” ಎಂದು ನ್ಯಾಯಾಲಯ ವಿವರಿಸಿದೆ.

ಸುದ್ದಿ ವಾಹಿನಿಯಲ್ಲಿ ಆಗಸ್ಟ್ 20 ರಂದು ನಡೆದ ಸುದ್ದಿ ಚರ್ಚೆಗೆ ಸಂಬಂಧಿಸಿದಂತೆ ಶಮಾ ಅವರು ಸಂಜೂ ವರ್ಮಾ ಮತ್ತು ನ್ಯೂಸ್ 18 ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಪಶ್ಚಿಮ ಬಂಗಾಳದ ಆರ್‌ ಜಿ ಕರ್ ಆಸ್ಪತ್ರೆ ಕೊಲೆ ಮತ್ತು ಅತ್ಯಾಚಾರದ ಬಗ್ಗೆ ವಾಹಿನಿಯಲ್ಲಿ ನಡೆದ ಚರ್ಚೆಯ ವೇಳೆ ವರ್ಮಾ ತಮ್ಮೆಡೆಗೆ ಅನುಚಿತವಾಗಿ ನಡೆದುಕೊಂಡಿದ್ದಾರೆ ಎಂದು ಶಮಾ ಆರೋಪಿಸಿದ್ದಾರೆ. ತನ್ನ ವಿರುದ್ಧ ದುರುದ್ದೇಶಪೂರಿತ ಮತ್ತು ಕೆಟ್ಟ ಪದಗಳನ್ನು ಸಂಜೂ ವರ್ಮಾ ಬಳಸಿದ್ದಾರೆ ಎಂದು ಅಪಾದಿಸಿದ್ದಾರೆ.

ಅಲ್ಲದೆ ಇಂತಹ ನಿಂದನೀಯ, ಹಿಂಸಾತ್ಮಕ ಮತ್ತು ಮಾನಹಾನಿಕರ ಹೇಳಿಕೆಗಳನ್ನು ಬಳಸಲು ಅವಕಾಶ ನೀಡುವ ಇತಿಹಾಸವನ್ನು ಸುದ್ದಿ ವಾಹಿನಿ ಹೊಂದಿದೆ ಎಂದು ನ್ಯೂಸ್‌18 ವಿರುದ್ಧ ಅಪಾದನೆಯನ್ನು ಶಮಾ ಮಾಡಿದ್ದಾರೆ. ವಾಹಿನಿಯು ತಾನು ಎಸಗಿರುವ ಇಂತಹ ಚಟುವಟಿಕೆಗಳಿಗಾಗಿ ರಾಷ್ಟ್ರೀಯ ಪ್ರಸರಣ ಮತ್ತು ಡಿಜಿಟಲ್‌ ಮಾನದಂಡಗಳ ಪ್ರಾಧಿಕಾರ ವಿಧಿಸಿದ್ದ ದಂಡವನ್ನೂ ಈ ಹಿಂದೆ ತೆತ್ತಿದೆ ಎನ್ನುವ ಅಂಶವನ್ನು ನ್ಯಾಯಾಲಯದ ಗಮನಕ್ಕೆ ಶಮಾ ಪರ ವಕೀಲರು ತಂದರು.

Kannada Bar & Bench
kannada.barandbench.com