[ದೆಹಲಿ ಅತ್ಯಾಚಾರ ಪ್ರಕರಣ] ದೆಹಲಿ ಪೊಲೀಸರಿಂದ ತನಿಖೆಯ ಪ್ರಗತಿಯ ಬಗ್ಗೆ ವರದಿ ಕೇಳಿದ ಹೈಕೋರ್ಟ್

ಪ್ರಕರಣದ ತನಿಖೆಯು ಇನ್ನೂ ಆರಂಭಿಕ ಹಂತದಲ್ಲಿರುವುದರಿಂದ ಈ ಸಮಯದಲ್ಲಿ ಹೈಕೋರ್ಟ್‌ನ ಮಧ್ಯಪ್ರವೇಶ ಅಪೇಕ್ಷಣೀಯವಲ್ಲ ಎಂದು ನ್ಯಾ. ಖನ್ನಾ ಅಭಿಪ್ರಾಯಪಟ್ಟರು.
[ದೆಹಲಿ ಅತ್ಯಾಚಾರ ಪ್ರಕರಣ] ದೆಹಲಿ ಪೊಲೀಸರಿಂದ ತನಿಖೆಯ ಪ್ರಗತಿಯ ಬಗ್ಗೆ ವರದಿ ಕೇಳಿದ ಹೈಕೋರ್ಟ್
Delhi Police

ದೆಹಲಿ ಕಂಟೋನ್ಮೆಂಟ್‌ ಪ್ರದೇಶದಲ್ಲಿ ನಡೆದ ಅಪ್ರಾಪ್ತ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯ ಪ್ರಗತಿಯ ಬಗ್ಗೆ ಸ್ಥಿತಿಗತಿ ವರದಿ ಸಲ್ಲಿಸುವಂತೆ ದೆಹಲಿ ಹೈಕೋರ್ಟ್‌ ಮಂಗಳವಾರ ದೆಹಲಿ ಪೊಲೀಸರಿಗೆ ಸೂಚಿಸಿದೆ.

ಪ್ರಕರಣದ ವಿಚಾರಣೆಯನ್ನು ನ್ಯಾ. ಯೋಗೇಶ್‌ ಖನ್ನಾ ಅವರ ಏಕಸದಸ್ಯ ಪೀಠದ ಮುಂದೆ ಪಟ್ಟಿ ಮಾಡಲಾಗಿತ್ತು. ಸಂತ್ರಸ್ತೆಯ ಪೋಷಕರನ್ನು ನ್ಯಾಯಾಲಯದಲ್ಲಿ ಪ್ರತಿನಿಧಿಸಿದ ವಕೀಲ ಜಿತೇಂದ್ರ ಕುಮಾರ್‌ ಅವರು ಪೋಷಕರನ್ನು ಪೊಲೀಸ್‌ ಠಾಣೆಗೆ ಕರೆದೊಯ್ದು ಹಿಂಸಿಸಿದ್ದು, ಪ್ರಕರಣದಲ್ಲಿ ರಾಜಿಗೊಳಗಾಗುವಂತೆ ಒತ್ತಡ ಹೇರಲಾಗಿತ್ತು ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಮುಂದುವರೆದು, ಅಪರಾಧ ನಡೆದ ಸ್ಥಳದಲ್ಲಿ ಯಾವುದೇ ಕಾವಲನ್ನು ಹಾಕಲಾಗಿಲ್ಲ, ಅಲ್ಲಿಗೆ ಈಗಲೂ ಜನರು ಮುಕ್ತವಾಗಿ ಹೋಗಬಹುದಾಗಿದೆ. ಇದಕ್ಕೆ ಪುರಾವೆಯನ್ನು ಘಟನೆ ನಡೆದ ಸ್ಮಶಾನದ ವ್ಯಾಪ್ತಿಯಲ್ಲಿರುವ ಸಿಸಿಟಿವಿ ಕ್ಯಾಮೆರಾಗಳ ಮೂಲಕ ನೀಡಬಹುದು ಎಂದು ತಿಳಿಸಿದರು.

ಇದೇ ವೇಳೆ, ಸಂತ್ರಸ್ತೆಯ ಪೋಷಕರಿಗೆ ಹಾಗೂ ಪ್ರಕರಣದ ಸಾಕ್ಷಿಗಳಿಗೆ ಜೀವ ಬೆದರಿಕೆಯಿದ್ದು ರಕ್ಷಣೆ ಒದಗಿಸುವಂತೆ ನ್ಯಾಯಾಲಯವನ್ನು ಕೋರಲಾಯಿತು. ಘಟನೆಯ ಸಂಬಂಧ ನ್ಯಾಯಾಲಯದ ಉಸ್ತುವಾರಿಯಲ್ಲಿ ವಿಶೇಷ ತನಿಖಾ ದಳದಿಂದ (ಎಸ್‌ಐಟಿ) ತನಿಖೆ ನಡೆಸಲು ಮನವಿ ಮಾಡಲಾಯಿತು.

ದೆಹಲಿ ಸರ್ಕಾರದ ಪರವಾಗಿ ಹಾಜರಿದ್ದ ವಕೀಲ ಸಂಜಯ್‌ ಲಾವ್ ಅವರು, ಅರ್ಜಿದಾರರಿಗೆ ರಕ್ಷಣೆ ನೀಡಲು ಓರ್ವ ಪೊಲೀಸ್ ಅಧಿಕಾರಿಯನ್ನು ನಿಯೋಜಿಸಿರುವುದಾಗಿ ತಿಳಿಸಿದರು. ಪ್ರಕರಣವನ್ನು ಇದಾಗಲೇ ಅಪರಾಧ ದಳಕ್ಕೆ ವರ್ಗಾಯಿಸಲಾಗಿದ್ದು ಅದು ವಿಶೇಷ ತನಿಖಾ ತಂಡವನ್ನು ರಚಿಸಿ ತನಿಖೆ ಕೈಗೊಂಡಿರುವ ಮಾಹಿತಿ ನೀಡಿದರು.

ಅಂತಿಮವಾಗಿ ನ್ಯಾ. ಖನ್ನಾ ಅವರು, ಪ್ರಕರಣದ ತನಿಖೆಯು ಇನ್ನೂ ಆರಂಭಿಕ ಹಂತದಲ್ಲಿರುವುದರಿಂದ ಈ ಸಮಯದಲ್ಲಿ ಹೈಕೋರ್ಟ್‌ನ ಮಧ್ಯಪ್ರವೇಶ ಅಪೇಕ್ಷಣೀಯವಲ್ಲ ಎಂದು ಅಭಿಪ್ರಾಯಪಟ್ಟರು. ತನಿಖೆಯ ಪ್ರಗತಿಯ ಬಗ್ಗೆ ಸ್ಥಿತಿಗತಿ ವರದಿ ಸಲ್ಲಿಸುವಂತೆ ದೆಹಲಿ ಪೊಲೀಸರಿಗೆ ಸೂಚಿಸಿದರು.

Related Stories

No stories found.
Kannada Bar & Bench
kannada.barandbench.com