ಕೆಂಟ್‌ ಕಂಪೆನಿಯ ಅಡಿಬರಹ ನಿಷೇಧಿಸಿದ್ದ ಆದೇಶಕ್ಕೆ ದೆಹಲಿ ಹೈಕೋರ್ಟ್‌ ತಡೆ: ಅತಿಶಯೋಕ್ತಿ ಜಾಹೀರಾತಿನ ಭಾಗ ಎಂದ ಪೀಠ

ತನ್ನ ಆರ್‌ಒ ಜಲ ಶುದ್ಧೀಕರಣ ಯಂತ್ರಗಳು ಸ್ವಚ್ಛ ನೀರು ನೀಡುತ್ತವೆ ಎಂಬ ಅಡಿಬರಹಕ್ಕೆ ಸಾಕ್ಷ್ಯ ಇಲ್ಲದಿರುವುದರಿಂದ ಅಡಿಬರಹ ಹಿಂಪಡೆಯುವಂತೆ ಕೆಂಟ್‌ಗೆ ಎಎಸ್‌ಸಿಐ ನಿರ್ದೇಶನ ನೀಡಿತ್ತು.
ಕೆಂಟ್ ಆರ್‌ಒ
ಕೆಂಟ್ ಆರ್‌ಒwww.kent.co.in

"ಕೆಂಟ್ ದೇತಾ ಹೈ ಸಬ್ಸೆ ಶುದ್ಧ್ ಪಾನಿ (ಕೆಂಟ್ ಬೇರಾವುದಕ್ಕಿಂತಲೂ ಹೆಚ್ಚು ಶುದ್ಧ ನೀರು ನೀಡುತ್ತದೆ)" ಎಂಬ ಅಡಿಬರಹವನ್ನು ಹಿಂತೆಗೆದುಕೊಳ್ಳುವಂತೆ ಜಲ ಶುದ್ಧೀಕರಣ ಯಂತ್ರಗಳನ್ನು ತಯಾರಿಸುವ ಕೆಂಟ್ ಆರ್‌ಒ ಗೆ ನಿರ್ದೇಶನ ನೀಡಿದ್ದ ಭಾರತೀಯ ಜಾಹೀರಾತು ಗುಣಮಟ್ಟ ಮಂಡಳಿಯ (ಎಎಸ್‌ಸಿಐ) ಆದೇಶವನ್ನು ದೆಹಲಿ ಹೈಕೋರ್ಟ್ ಇತ್ತೀಚೆಗೆ ತಡೆಹಿಡಿದಿದೆ [ಕೆಂಟ್‌ ಆರ್‌ಒ ಸಿಸ್ಟಮ್ಸ್‌ ಲಿಮಿಟೆಡ್‌ ವರ್ಸಸ್‌ ಪ್ರಧಾನ ಕಾರ್ಯದರ್ಶಿ, ಅಡ್ವರ್ಟೈಸಿಂಗ್ ಸ್ಟ್ಯಾಂಡರ್ಡ್ಸ್ ಕೌನ್ಸಿಲ್ ಆಫ್ ಇಂಡಿಯಾ ಹಾಗೂ ಇನ್ನಿತರರ ನಡುವಣ ಪ್ರಕರಣ].

ಕೆಂಟ್ ಸುಮಾರು 15 ವರ್ಷಗಳಿಂದ ಈ ಅಡಿಬರಹ ಬಳಸುತ್ತಿದ್ದು ಜಾಹೀರಾತುಗಳಲ್ಲಿ ಅತಿಶಯೋಕ್ತಿ ಮತ್ತು ಉತ್ಪ್ರೇಕ್ಷೆಗೆ ಅನುಮತಿ ಇದೆ ಎಂದು ಜನವರಿ 19ರಂದು ಹೊರಡಿಸಿದ ಆದೇಶದಲ್ಲಿ, ನ್ಯಾಯಮೂರ್ತಿ ಪ್ರತಿಭಾ ಎಂ ಸಿಂಗ್ ತಿಳಿಸಿದ್ದಾರೆ.

ಜಾಹೀರಾತು ಎಂಬುದು ವಾಣಿಜ್ಯೋಕ್ತಿಯ ಭಾಗವಾಗಿದ್ದು, ಇದು ಸಂವಿಧಾನದ 19 (1) (ಎ) ವಿಧಿಯಡಿ ಮಾನ್ಯತೆ ಪಡೆದ ಅಂಶವಾಗಿದೆ ಎಂದು ಪೀಠ ಹೇಳಿದೆ.

ಕೆಂಟ್ ವಿರುದ್ಧ ದೂರು ನೀಡಿರುವುದು ಯಾವುದೇ ಗ್ರಾಹಕರಲ್ಲ ಎಂಬ ವಿಚಾರವನ್ನು ನ್ಯಾಯಾಲಯ ಗಣನೆಗೆ ತೆಗೆದುಕೊಂಡಿತು.

ಕೆಂಟ್ ನೀಡುತ್ತದೆ ಅತ್ಯಂತ ಶುದ್ಧ ನೀರು ಎಂಬ ಅತಿಶಯೋಕ್ತಿಯ ಮಾತುಗಳಿಂದ ತನ್ನ ದಾರಿ ತಪ್ಪಿಸಲಾಗಿದೆ ಎಂದು ಯಾವುದೇ ಗ್ರಾಹಕ ಇಲ್ಲವೇ ಗ್ರಾಹಕಿ ದೂರು ನೀಡಿಲ್ಲ. ಅಂತಹ ಅತಿಶಯೋಕ್ತಿ, ಉತ್ಪ್ರೇಕ್ಷೆ, ತಾರಕೋಕ್ತಿಗಳು ಜಾಹೀರಾತಿನ ಭಾಗವಾಗಿದ್ದು ಕಾನೂನಿಗೆ ಅನುಗುಣವಾಗಿದ್ದಾಗ ಅವುಗಳನ್ನು ಸಂಪೂರ್ಣವಾಗಿ ಮೊಟಕುಗೊಳಿಸಲಾಗದು. ಜಾಹೀರಾತು ಕ್ಷೇತ್ರದಲ್ಲಿ ಇಂತಹ ಮೇಲಾಟಕ್ಕೆ ಸದಾ ಮನ್ನಣೆ ಇದ್ದು ಅನುಮತಿಸಲಾಗಿದೆ" ಎಂದು ನ್ಯಾಯಾಲಯ ನುಡಿಯಿತು.

 ನ್ಯಾಯಮೂರ್ತಿ ಪ್ರತಿಭಾ ಎಂ.ಸಿಂಗ್
ನ್ಯಾಯಮೂರ್ತಿ ಪ್ರತಿಭಾ ಎಂ.ಸಿಂಗ್

ಗೃಹೋಪಯೋಗಿ ವಸ್ತುಗಳನ್ನು ತಯಾರಿಸುವ ಟಿಟಿಕೆ ಪ್ರೆಸ್ಟೀಜ್‌ ಕಂಪೆನಿ ಕೆಂಟ್‌ ವಿರುದ್ಧ ಎಎಸ್‌ಸಿಐಗೆ ದೂರು ನೀಡಿತ್ತು. ತನ್ನ ಆರ್‌ ಒ ಜಲ ಶುದ್ಧೀಕರಣ ಯಂತ್ರಗಳು ಸ್ವಚ್ಛ ನೀರು ನೀಡುತ್ತವೆ ಎಂಬ ಅಡಿಬರಹಕ್ಕೆ ಸಾಕ್ಷ್ಯ ಇಲ್ಲದಿರುವುದರಿಂದ ಅಡಿಬರಹ ಹಿಂಪಡೆಯುವಂತೆ ಕೆಂಟ್‌ಗೆ ಎಎಸ್‌ಸಿಐ ಡಿಸೆಂಬರ್ 29, 2023ರಂದು ನಿರ್ದೇಶನ ನೀಡಿತ್ತು.

ಈ ಆದೇಶದ ವಿರುದ್ಧ ಕೆಂಟ್ ಹೈಕೋರ್ಟ್ ಮೊರೆ ಹೋಗಿತ್ತು. ತಾನು ಎಎಸ್‌ಸಿಐನ ಸದಸ್ಯನಲ್ಲವಾದರೂ ತನ್ನ ವಿರುದ್ಧ ಆದೇಶ ಹೊರಡಿಸಿ ವಿವಿಧ ಪ್ರಸಾರ ಮಾಧ್ಯಮಗಳಿಗೆ ತಿಳಿಸಲಾಗಿದೆ. ಅಲ್ಲದೆ ತನ್ನ ಅಡಿಬರಹಕ್ಕೆ ವಾಣಿಜ್ಯ ಚಿಹ್ನೆ ಮತ್ತು ಕೃತಿಸ್ವಾಮ್ಯ ಹಕ್ಕುಗಳಿದ್ದು ಇದು ಜಾಹೀರಾತಿನ ಮಾನ್ಯತೆ ಪಡೆದ ರೂಪ ಎಂದು ಅದು ವಾದಿಸಿತ್ತು.

ಆದರೆ ತಾನು ಉದ್ಯಮ ನಿಯಂತ್ರಕ ಸಂಸ್ಥೆಯಾಗಿದ್ದು ತನ್ನ ಶಿಫಾರಸುಗಳನ್ನು ಸದಸ್ಯರಲ್ಲದವರೂ ಪಾಲಿಸಬೇಕು ಎಂದು ಎಎಸ್‌ಸಿಐ ಸಮರ್ಥಿಸಿಕೊಂಡಿತ್ತು. ಕೆಂಟ್‌ ವಿರುದ್ಧ ಯಾವುದೇ ವಾಹಿನಿ ಅಥವಾ ಸರ್ಕಾರಿ ಅಧಿಕಾರಿಗಳು ಕ್ರಮ ಕೈಗೊಳ್ಳದಿರುವುದರಿಂದ ಅದು ಹೂಡಿರುವ ದಾವೆ ಅಕಾಲಿಕವಾದುದು ಎಂದು ಅದು ವಾದಿಸಿತ್ತು.

ಇಷ್ಟಾದರೂ ಎಎಸ್‌ಸಿಐನ ಅಧಿಕಾರ ವ್ಯಾಪ್ತಿ ಸದಸ್ಯರಲ್ಲದವರಿಗೂ ಅನ್ವಯಿಸುತ್ತದೆಯೇ ಎಂಬುದನ್ನು ಪರಿಗಣಿಸುವ ಅಗತ್ಯವಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.

ಅಲ್ಲದೆ 2007ರಿಂದ ಅಂದರೆ 15 ವರ್ಷಗಳಿಗಿಂತ ಹೆಚ್ಚು ಕಾಲ ಜಾಹೀರಾತನ್ನು ಪ್ರಸಾರ ಮಾಡಲಾಗುತ್ತಿದೆ ಎಂಬ ಅರ್ಜಿದಾರರ ವಾದದ ಪರ ನ್ಯಾಯಾಲಯ ನಿಲ್ಲುತ್ತದೆ. ಇಂತಹ ಸಂದರ್ಭಗಳಲ್ಲಿ ಫಿರ್ಯಾದಿಯ ಜಾಹೀರಾತಿನ ಹಕ್ಕು ಮೊಟಕಾಗುವ ರೀತಿಯಲ್ಲಿ ಎಎಸ್‌ಸಿಐನ ಆದೇಶ ವಾದಿಯ ಮೇಲೆ ಪರಿಣಾಮ ಬೀರುವಂತೆ ನ್ಯಾಯಾಲಯ ಅನುಮತಿಸಲು ಸಾಧ್ಯವಿಲ್ಲ ಎಂದು ಅದು ನುಡಿಯಿತು. ಹೀಗಾಗಿ ಎಎಸ್‌ಸಿಐ ತೀರ್ಪು ತಡೆಹಿಡಿದ ನ್ಯಾ. ಸಿಂಗ್‌ ಮಧ್ಯಂತರ ಆದೇಶ ನೀಡಿದರು.

[ಆದೇಶದ ಪ್ರತಿಯನ್ನು ಇಲ್ಲಿ ಓದಿ]

Attachment
PDF
Ms Kent RO Systems Ltd v The Advertising Standards Council of India through its General Secretary & Or.pdf
Preview

Related Stories

No stories found.
Kannada Bar & Bench
kannada.barandbench.com