ಕಲಾ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಗುರುತಿಸಿ ಇಬ್ಬರು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರೂ ಸೇರಿದಂತೆ ಮೂವರು ಕಲಾವಿದರಿಗೆ ನೀಡಲಾಗಿದ್ದ ವಸತಿಯನ್ನು ಖಾಲಿ ಮಾಡುವಂತೆ ಅವರಿಗೆ ಕೇಂದ್ರ ಸರ್ಕಾರ ನೀಡಿರುವ ನೋಟಿಸ್‌ಗೆ ದೆಹಲಿ ಹೈಕೋರ್ಟ್ ತಡೆಯಾಜ್ಞೆ ನೀಡಿದೆ (ಭಾರತಿ ಶಿವಾಜಿ ವರ್ಸಸ್ ಇತರರು ವರ್ಸಸ್ ಭಾರತ ಸರ್ಕಾರ).
ಕಲಾವಿದರ ನಿವೇದನೆಯನ್ನು ಕೇಂದ್ರ ಸರ್ಕಾರ ಪರಿಗಣಿಸುವುದಕ್ಕೆ ಆದೇಶ ಅನ್ವಯಿಸುವುದಿಲ್ಲ ಎಂದು ಹೈಕೋರ್ಟ್ ಹೇಳಿದೆ. “ಮುಂದಿನ ವಿಚಾರಣೆಯವರೆಗೆ ಪ್ರಶ್ನಾರ್ಹವಾದ 09.10.2020 ರ ಆದೇಶದ ಕಾರ್ಯಾಚರಣೆಗೆ ತಡೆ ವಿಧಿಸಲಾಗಿದೆ” ಎಂದು ನ್ಯಾಯಮೂರ್ತಿ ನವೀನ್ ಚಾವ್ಲಾ ಅವರಿದ್ದ ಏಕಸದಸ್ಯ ಪೀಠ ಹೇಳಿದೆ.
ಕಲಾವಿದರಾದ ಭಾರತಿ ಶಿವಾಜಿ, ವಿ. ಜಯರಾಮ ರಾವ್ ಮತ್ತು ಬನಶ್ರೀ ರಾವ್ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಕೇರಳ ಮತ್ತು ವಿದೇಶದಲ್ಲಿ ಶಾಸ್ತ್ರೀಯ ನೃತ್ಯ ಪ್ರಕಾರವಾದ ಮೋಹಿನಿಯಟ್ಟಂನಲ್ಲಿ ಅಪ್ರತಿಮ ಸಾಧನೆ ಮಾಡಿರುವ ಭಾರತಿ ಶಿವಾಜಿ ಅವರ ಕಲೆ ಗುರುತಿಸಿ ಅವರಿಗೆ ಪದ್ಮಶ್ರೀ, ಸಂಗೀತ ನಾಟಕ ಅಕಾಡೆಮಿ ಮತ್ತು ಸಾಹಿತ್ಯ ಕಲಾ ಪರಿಷತ್ ಸಮ್ಮಾನ್ ನೀಡಿ ಗೌರವಿಸಲಾಗಿದೆ.
ವಿ ಜಯರಾಮ್ ರಾವ್ ಮತ್ತು ಬನಶ್ರೀ ರಾವ್ ನೃತ್ಯ ದಂಪತಿಯಾಗಿದ್ದು, ಕೂಚಿಪೂಡಿ ನೃತ್ಯ ಕಲೆಯಲ್ಲಿ ಮೇರು ಸಾಧನೆ ಮಾಡಿರುವ ಜಯರಾಮ್ ರಾವ್ ಅವರಿಗೆ ಪದ್ಮಶ್ರೀ, ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ-ಪುರಸ್ಕಾರಗಳು ದೊರೆತಿವೆ.
ಬನಶ್ರೀ ರಾವ್ ಅವರು ಪ್ರಸಿದ್ಧ ಗುರುವಾಗಿದ್ದು, ರಾಷ್ಟ್ರಪತಿಯಿಂದ ಕೊಡಮಾಡಲಾಗುವ ಕೂಚಿಪೂಡಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ದೆಹಲಿ ರಾಜ್ಯ ಸರ್ಕಾರದ ಪ್ರಶಸ್ತಿ ಮತ್ತು ಆಂಧ್ರ ಪ್ರದೇಶ ಸಮ್ಮಾನ್‌ಗೂ ಅವರು ಪಾತ್ರರಾಗಿದ್ದಾರೆ. ಈ ಎಲ್ಲಾ ಮೂವರು ಕಲಾವಿದರು ಕಳೆದ 33 ವರ್ಷಗಳಿಂದ ದೆಹಲಿಯಲ್ಲಿನ ಏಷ್ಯನ್ ಗೇಮ್ಸ್ ವಿಲೇಜ್ ಸಂಕೀರ್ಣದಲ್ಲಿ ತಮಗೆ ಹಂಚಿಕೆಯಾಗಿರುವ ವಸತಿಯಲ್ಲಿ ನೆಲೆಸಿದ್ದಾರೆ.
2020ರ ಅಕ್ಟೋಬರ್‌ನಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಒಕ್ಕಲೆಬ್ಬಿಸುವ ನೋಟಿಸ್‌ನ ಮುಂದುವರಿದ ಭಾಗವಾಗಿ ಡಿಸೆಂಬರ್ 31ರಂದು ಅರ್ಜಿದಾರರನ್ನು ಸ್ಥಳ ಖಾಲಿ ಮಾಡುವಂತೆ ಆದೇಶಿಸಲಾಗಿತ್ತು. ಇದನ್ನು ಪಾಲಿಸಲು ವಿಫಲವಾದರೆ ಸಾರ್ವಜನಿಕ ಸ್ಥಳಗಳ (ಅನಧಿಕೃತ ನಿವಾಸಿಗಳ ತೆರವುಗೊಳಿಸುವಿಕೆ) ಕಾಯಿದೆ – 1971ರ ಅಡಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ. ಅರ್ಜಿದಾರರು 2014ರಿಂದ ಆ ಸ್ಥಳದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದಾರೆ ಎಂದು ಕೇಂದ್ರ ಸರ್ಕಾರದ ಒಕ್ಕಲೆಬ್ಬಿಸುವ ಆದೇಶದಲ್ಲಿ ಹೇಳಲಾಗಿದೆ.
ನಿರ್ದಿಷ್ಟ ಕಲಾಪ್ರಕಾರಗಳಿಗಾಗಿ ಜೀವನವನ್ನೇ ಮುಡಿಪಾಗಿಡುವ ಮೂಲಕ ಕಲಾವಿದರು ದೇಶವನ್ನು ಪ್ರತಿನಿಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತೆರವುಗೊಳಿಸುವ ನೋಟಿಸ್ ನೈತಿಕ ಮತ್ತು ಕಾನೂನಾತ್ಮಕವಾಗಿ ತಮಗೆ ಆಘಾತ ಉಂಟು ಮಾಡಿದೆ ಎಂದು ಅರ್ಜಿದಾರರು ಹೇಳಿದ್ದಾರೆ.
ನಿರ್ದಿಷ್ಟ ಕಲಾಪ್ರಕಾರಗಳಲ್ಲಿ ಅಸಾಧಾರಣ ಸಾಧನೆ ಮಾಡುವ ಮೂಲಕ ತಮ್ಮನ್ನು ಕಲೆಗೆ ಮುಡಿಪಾಗಿಸಿಕೊಂಡಿರುವುದಕ್ಕಾಗಿ ಹಂಚಿಕೆ ಮಾಡಲಾಗಿರುವ ವಸತಿಯಿಂದ ತಮ್ಮನ್ನು ಒಕ್ಕಲೆಬ್ಬಿಸುವ ಆದೇಶವು ನ್ಯಾಯಸಮ್ಮತ ನಿರೀಕ್ಷೆಯ ಉಲ್ಲಂಘನೆಯಾಗಿದೆ ಎಂದು ಅರ್ಜಿದಾರರು ವಾದಿಸಿದ್ದಾರೆ. ಇದರ ಜೊತೆಗೆ ತಮ್ಮನ್ನು ಒಕ್ಕಲೆಬ್ಬಿಸುತ್ತಿರುವುದಕ್ಕೆ ಸಕಾರಣಗಳನ್ನು ನೀಡದೇ ಇರುವುದು ಸಾರ್ವತ್ರಿಕ ನ್ಯಾಯದ ತತ್ವಗಳ ಉಲ್ಲಂಘನೆಯಾಗಿದೆ ಎಂದೂ ವಾದಿಸಿದ್ದಾರೆ.
ಅರ್ಜಿದಾರರಿಗೆ ವಯಸ್ಸಾಗಿದ್ದು, ಸಾಂಕ್ರಾಮಿಕತೆಯ ಸಂದರ್ಭದಲ್ಲಿ ಅವರಿಗೆ ಒಕ್ಕಲೆಬ್ಬಿಸುವ ನೋಟಿಸ್ ನೀಡಿರುವುದು ನ್ಯಾಯಿಕ ಅನುಪಾತದ ಸಿದ್ಧಾಂತಕ್ಕೆ (ಅಪರಾಧ ಮತ್ತು ಶಿಕ್ಷೆಯ ನಡುವಿನ ಅಸಮತೋಲಿತ ಅನುಪಾತ) ವಿರುದ್ಧವಾಗಿದೆ ಎಂದು ನ್ಯಾಯಾಲಯಕ್ಕೆ ವಿವರಿಸಲಾಗಿದೆ. ಅರ್ಜಿದಾರರು ವೃತ್ತಿಪರರಂತೆ ಹೆಚ್ಚಿನ ಹಣ ಸಂಪಾದನೆ ಮಾಡಿಕೊಂಡಿಲ್ಲ. ಅಲ್ಲದೇ ಅವರಿಗೆ ದೇಶದ ಯಾವುದೇ ಮೂಲೆಯಲ್ಲೂ ಪರ್ಯಾಯ ವಸತಿ ವ್ಯವಸ್ಥೆ ಇಲ್ಲ ಎಂದು ಒತ್ತಿ ಹೇಳಲಾಗಿದೆ.
ಅರ್ಜಿದಾರರ ಪರ ವಾದಿಸಿದ ಹಿರಿಯ ವಕೀಲ ಪ್ರಶಾಂತೊ ಸೇನ್ ಜೊತೆಗೆ ವಕೀಲರಾದ ಪ್ರಣಯ ಗೋಯಲ್, ಅಮನ್ ರಾಜ್ ಗಾಂಧಿ, ಅಭಿರತ್ ಠಾಕೂರ್, ಧವಲ್ ದೇಸಾಯಿ ಅವರಿಗೆ ವಾಡಿಯಾ ಗಾಂಧಿ ಮತ್ತು ಕಂಪೆನಿ ವಿವರಣೆ ನೀಡಿತ್ತು. ಜನವರಿ 22ಕ್ಕೆ ಅರ್ಜಿ ವಿಚಾರಣೆ ಮುಂದೂಡಲಾಗಿದೆ.