ಕೋವಿಡ್ ವೈರಾಣು ಹತ್ತಿಕ್ಕುವುದಕ್ಕಾಗಿ ದೇಶೀಯ ಲಸಿಕೆ ಕೋವ್ಯಾಕ್ಸಿನ್ ಅಭಿವೃದ್ಧಿಪಡಿಸಲು ಮಾಡಲಾದ ಹೂಡಿಕೆ ಮತ್ತು ವೆಚ್ಚದ ಬಗ್ಗೆ ಮಾಹಿತಿ ಹಕ್ಕು ಕಾಯಿದೆಯಡಿ (ಆರ್‌ಟಿಐ) ವಿವರಗಳನ್ನು ಒದಗಿಸಲು ನಿರಾಕರಿಸಿದ್ದ ಕೇಂದ್ರ ಸರ್ಕಾರದ ಧೋರಣೆ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಜನವರಿ ತಿಂಗಳಲ್ಲಿ ವಿಚಾರಣೆ ನಡೆಸುವುದಾಗಿ ದೆಹಲಿ ಹೈಕೋರ್ಟ್ ಸೋಮವಾರ ಹೇಳಿದೆ.
ಇದೊಂದು ಮಹತ್ವದ ವಿಷಯವಾಗಿದ್ದು, ಯಾವುದೇ ಆದೇಶ ಹೊರಡಿಸುವ ಮುನ್ನ ನ್ಯಾಯಾಲಯ ಇದನ್ನು ಪರಿಗಣಿಸಬೇಕಾಗುತ್ತದೆ ಎಂದಿರುವ ನ್ಯಾಯಮೂರ್ತಿ ಪ್ರತಿಭಾ ಎಂ ಸಿಂಗ್ ಜನವರಿ 9ರಂದು ಪ್ರಕರಣ ಪಟ್ಟಿ ಮಾಡುವಂತೆ ಆದೇಶಿಸಿದ್ದಾರೆ.
ಕೇಂದ್ರ ಮಾಹಿತಿ ಆಯೋಗದ (ಸಿಐಸಿ) ಆದೇಶ ಪ್ರಶ್ನಿಸಿ ವಕೀಲ ಮತ್ತು ಲೇಖಕ ಟಿ ಪ್ರಶಾಂತ್ ರೆಡ್ಡಿ ಅವರು ಹೈಕೋರ್ಟ್‌ನಲ್ಲಿ ಮೂರು ಅರ್ಜಿಗಳನ್ನು ಸಲ್ಲಿಸಿದ್ದಾರೆ.
ಮಾಹಿತಿ ನಿರಾಕರಿಸಿರುವ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR), ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ (MoHFW) ಹಾಗೂ ಜೈವಿಕ ತಂತ್ರಜ್ಞಾನ ಕೈಗಾರಿಕಾ ಸಂಶೋಧನಾ ಸಹಾಯಕ ಮಂಡಳಿಯ (BIRAC) ಸಾರ್ವಜನಿಕ ಮಾಹಿತಿ ಅಧಿಕಾರಿಗಳ ನಿಲುವನ್ನು ಸಿಐಸಿ ಎತ್ತಿಹಿಡಿದಿತ್ತು.
ಕೋವಿಡ್ ಲಸಿಕೆಗಳ ಖರೀದಿ ಮತ್ತು ಮುಂಗಡ ಖರೀದಿಗೆ ನೀಡಲಾದ ಆರ್ಡರ್ಗಳ ಬಗ್ಗೆ ರೆಡ್ಡಿ ಅವರು ಸಚಿವಾಲಯದಿಂದ ಮಾಹಿತಿ ಕೇಳಿದ್ದರು. ಅಲ್ಲದೆ ಕೇಂದ್ರ ಸರ್ಕಾರದ 'ಮಿಷನ್ ಕೋವಿಡ್ ಸುರಕ್ಷಾ' ಅಡಿಯಲ್ಲಿ ಎರಡು ಖಾಸಗಿ ಘಟಕಗಳಿಗೆ ಹಣ ಒದಗಿಸಲು ಮಾಡಿಕೊಂಡ ಒಪ್ಪಂದದ ಪ್ರತಿಗಳನ್ನು ಬಿಐಆರ್‌ಎಸಿಯಿಂದ ಅವರು ಬಯಸಿದ್ದರು. ಜೊತೆಗೆ ಐಸಿಎಂಆರ್ ಮತ್ತು ಭಾರತ್ ಬಯೋಟೆಕ್ ನಡುವಿನ ಸಂಶೋಧನಾ ಸಹಯೋಗ ಒಪ್ಪಂದದ ಪ್ರತಿ ಮತ್ತು ಲಸಿಕೆಗೆ ಸಂಬಂಧಿಸಿದ ಒಟ್ಟು ವೆಚ್ಚ ಹಾಗೂ ಹೂಡಿಕೆಯ ವಿವರಗಳನ್ನು ಅಪೇಕ್ಷಿಸಿದ್ದರು.
ಆದರೆ ಮಾಹಿತಿ ಹಕ್ಕು ಕಾಯಿದೆಯ ಸೆಕ್ಷನ್ 8 (1) (ಎ) ಮತ್ತು 8 (1) (ಡಿ)ಯನ್ನು ಪ್ರಸ್ತಾಪಿಸಿ ಅರ್ಜಿದಾರರಿಗೆ ಮಾಹಿತಿ ನಿರಾಕರಿಸಲಾಗಿತ್ತು.