ಪೋಕ್ಸೊ ಆರೋಪಿ ಬಿಡುಗಡೆಗೆ ಆಧಾರವಾದ ʼಆಧಾರ್ʼ: ವಿಚಾರಣಾ ನ್ಯಾಯಾಲಯದ ತೀರ್ಪು ಎತ್ತಿಹಿಡಿದ ದೆಹಲಿ ಹೈಕೋರ್ಟ್

ಇತ್ತೀಚಿನ ವರ್ಷಗಳಲ್ಲಿ, ದೇಶದ ಹೈಕೋರ್ಟ್‌ಗಳು ಆರೋಪಿ ಅಥವಾ ಸಂತ್ರಸ್ತರ ವಯಸ್ಸನ್ನು ನಿರ್ಧರಿಸಲು ಆಧಾರ್ ಕಾರ್ಡ್ಅನ್ನು ಪುರಾವೆಯಾಗಿ ಅವಲಂಬಿಸುವ ಸಂದರ್ಭಗಳಲ್ಲಿ ವ್ಯತಿರಿಕ್ತ ಎನಿಸುವಂತಹ ತೀರ್ಪುಗಳನ್ನು ನೀಡಿವೆ.
Aadhaar
Aadhaar

ಸಂತ್ರಸ್ತೆ ಪ್ರಾಪ್ತ ವಯಸ್ಸಿಗೆ ಬಂದಿದ್ದಳು ಎಂಬುದಕ್ಕೆ ಸಾಕ್ಷ್ಯ ಒದಗಿಸಿದ್ದ ಆಧಾರ್‌ ಕಾರ್ಡ್‌ ಅವಲಂಬಿಸಿ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ (ಪೋಕ್ಸೊ ಕಾಯ್ದೆ) ಅಡಿಯಲ್ಲಿ ಆರೋಪಿಯನ್ನು ಬಿಡುಗಡೆ ಮಾಡಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ದೆಹಲಿ ಹೈಕೋರ್ಟ್ ಎತ್ತಿಹಿಡಿದಿದೆ [ದೆಹಲಿ ಸರ್ಕಾರ ಮತ್ತು ರೋಹಿತ್‌ ಕುಮಾರ್‌ ನಡುವಣ ಪ್ರಕರಣ].

ಆಧಾರ್ ಕಾರ್ಡ್ ನಲ್ಲಿ ಬಾಲಕಿಯ ವಯಸ್ಸು 21 ವರ್ಷ ಎಂದಿತ್ತು. ಆದರೆ, ಪೊಲೀಸ್ ದೂರಿನಲ್ಲಿ ಬಾಲಕಿಯ ತಾಯಿ ಆಕೆಗೆ 16 ವರ್ಷ ಎಂದು ಹೇಳಿದ್ದರು. ವಿಚಾರಣಾ ನ್ಯಾಯಾಲಯವು ಪೋಕ್ಸೋ ಆರೋಪಿಗಳನ್ನು ಬಿಡುಗಡೆ ಮಾಡಲು ಈ ಆಧಾರ್ ಕಾರ್ಡ್‌ನಲ್ಲಿ ಉಲ್ಲೇಖಿಸಲಾಗಿದ್ದ ಜನ್ಮ ದಿನಾಂಕವನ್ನು ಅವಲಂಬಿಸಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ಹೈಕೋರ್ಟ್‌ ನ್ಯಾಯಮೂರ್ತಿ ದಿನೇಶ್ ಕುಮಾರ್ ಶರ್ಮಾ ಅವರು ವಿಚಾರಣಾ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದರು.

Also Read
ಬ್ಯಾಂಕ್‌ ಖಾತೆಗೆ ಆಧಾರ್‌ ಲಿಂಕ್‌: ಸುಪ್ರೀಂ ತೀರ್ಪು ಮರು ಪರಿಶೀಲನಾ ಮನವಿ ಸಲ್ಲಿಕೆಗೆ ಅಲಾಹಾಬಾದ್‌ ಹೈಕೋರ್ಟ್‌ ಸಹಮತ

ಮತ್ತೊಂದು ಜನ್ಮ ದಿನಾಂಕವನ್ನು ಉಲ್ಲೇಖಿಸಿದ್ದ ಶಾಲಾ ದಾಖಲೆಯನ್ನು ನೀಡಲಾಗಿತ್ತಾದರೂ ಅದನ್ನು ಅನುಮೋದಿಸುವ ಜನನ ಪ್ರಮಾಣಪತ್ರ ಅಥವಾ ಸ್ಥಳೀಯ ಸಂಸ್ಥೆಗಳು ನೀಡುವ ಸಂಬಂಧಿತ ದಾಖಲೆಗಳು ಇಲ್ಲ ಎನ್ನುವ ಅಂಶವನ್ನು ನ್ಯಾಯಾಲಯವು ಗಮನಿಸಿತು. ಇದಲ್ಲದೆ, ವಯಸ್ಸನ್ನು ವೈದ್ಯಕೀಯವಾಗಿ ನಿರ್ಧರಿಸುವ ಎಲುಬಿನ ಪರೀಕ್ಷೆಯನ್ನೂ ಪ್ರಕರಣದಲ್ಲಿ ನಡೆಸಿಲ್ಲ ಎಂಬ ಅಂಶವನ್ನೂ ಪರಿಗಣಿಸಿತು.

ಈ ಹಿನ್ನೆಲೆಯಲ್ಲಿ ಜನ್ಮ ದಿನಾಂಕವನ್ನು ಉಲ್ಲೇಖಿಸಿದ ಬೇರೆ ದಾಖಲೆಗಳು ಇಲ್ಲದಿದ್ದಾಗ ವಿಚಾರಣಾ ನ್ಯಾಯಾಲಯ ಸಂತ್ರಸ್ತೆಯ ವಯಸ್ಸು ಖಚಿತಪಡಿಸಿಕೊಳ್ಳಲು ಆಧಾರ್‌ ಕಾರ್ಡ್‌ ಅವಲಂಬಿಸಿದ್ದು ಸೂಕ್ತವಾಗಿದೆ ಎಂದಿತು.

ಸಂತ್ರಸ್ತೆ-ಬಾಲಕಿಯನ್ನು ಅಪಹರಿಸಿ, ಅತ್ಯಾಚಾರ ಮಾಡಿ, ಆರೋಪಿಯನ್ನು ಮದುವೆಯಾಗುವಂತೆ ಒತ್ತಾಯಿಸಲಾಗಿದೆ ಎಂದು ಆಪಾದಿಸಲಾಗಿತ್ತು. ಬಾಲಕಿಯ ತಾಯಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿತ್ತು. ಆದರೆ, ಆರೋಪಿಗಳು ಅಪಹರಣ ಅಥವಾ ಲೈಂಗಿಕ ದೌರ್ಜನ್ಯ ನಡೆಸಿರುವುದನ್ನು ಬಾಲಕಿ ನಿರಾಕರಿಸಿದ್ದಳು.

Related Stories

No stories found.
Kannada Bar & Bench
kannada.barandbench.com