ರೆಜಿಮೆಂಟ್‌ನ ಧಾರ್ಮಿಕ ಆಚರಣೆಯಲ್ಲಿ ಭಾಗಿಯಾಗದ ಕ್ರೈಸ್ತ ಸೇನಾಧಿಕಾರಿ ವಜಾ ಆದೇಶ ಎತ್ತಿಹಿಡಿದ ದೆಹಲಿ ಹೈಕೋರ್ಟ್

ತನ್ನ ಮೇಲಧಿಕಾರಿಯ ಕಾನೂನುಬದ್ಧ ಆಜ್ಞೆಗಿಂತ ಹೆಚ್ಚಾಗಿ ಸೇನಾಧಿಕಾರಿ ತನ್ನ ಧರ್ಮವನ್ನು ನೆಚ್ಚಿಕೊಂಡಿದ್ದು ಇದು ಅಶಿಸ್ತಿಗೆ ಸಮ ಎಂದು ನ್ಯಾಯಾಲಯ ಹೇಳಿದೆ.
Indian Soldiers, Armed Forces
Indian Soldiers, Armed ForcesImage for representative purpose
Published on

ತಮ್ಮ ರೆಜಿಮೆಂಟ್‌ನ ದೇವಸ್ಥಾನ ಮತ್ತು ಗುರುದ್ವಾರದ ಧಾರ್ಮಿಕ ಆಚರಣೆಗಳಲ್ಲಿ ಭಾಗವಹಿಸಲು ನಿರಾಕರಿಸಿದ್ದ ಕ್ರೈಸ್ತ ಧರ್ಮೀಯರಾದ ಲೆಫ್ಟಿನೆಂಟ್ ಸ್ಯಾಮ್ಯುಯೆಲ್ ಕಮಲೇಶನ್ ಅವರನ್ನು ಭಾರತೀಯ ಸೇನೆಯಿಂದ ವಜಾಗೊಳಿಸಿದ ಆದೇಶವನ್ನು ದೆಹಲಿ ಹೈಕೋರ್ಟ್ ಇತ್ತೀಚೆಗೆ ಎತ್ತಿಹಿಡಿದಿದೆ.

ತನ್ನ ಧಾರ್ಮಿಕ ನಂಬಿಕೆಗಳನ್ನು ಆಚರಿಸುವ ಹಕ್ಕು ಅಧಿಕಾರಿಗೆ ಇದ್ದರೂ ಆತ ತನ್ನ ಪಡೆಗಳ ಕಮಾಂಡರ್‌ ಅಧಿಕಾರಿಯಾಗಿ ಹೆಚ್ಚುವರಿ ಜವಾಬ್ದಾರಿಗಳನ್ನು ನಿರ್ವಹಿಸಬೇಕು ಎಂದು ನ್ಯಾಯಮೂರ್ತಿಗಳಾದ ನವೀನ್ ಚಾವ್ಲಾ ಮತ್ತು ಶಾಲಿಂದರ್ ಕೌರ್ ಅವರಿದ್ದ ಪೀಠ ತಿಳಿಸಿದೆ.

Also Read
ಪ. ಬಂಗಾಳ ಪಂಚಾಯತ್ ಚುನಾವಣೆ: ಸೇನಾಪಡೆ ನಿಯೋಜನೆಗೆ ತಡೆ ನೀಡಲು ಸುಪ್ರೀಂ ಕೋರ್ಟ್‌ ನಕಾರ

"ನಮ್ಮ ಸಶಸ್ತ್ರ ಪಡೆಗಳಲ್ಲಿರುವ ರೆಜಿಮೆಂಟ್‌ಗಳು ಐತಿಹಾಸಿಕವಾಗಿ ಧರ್ಮ ಅಥವಾ ಪ್ರದೇಶಕ್ಕೆ ಸಂಬಂಧಿಸಿದ ಹೆಸರುಗಳನ್ನು ಹೊಂದಿರಬಹುದಾಗಿದ್ದರೂ ಇದು ಸಂಸ್ಥೆಯ ಅಥವಾ ಈ ರೆಜಿಮೆಂಟ್‌ಗಳಲ್ಲಿ ನಿಯೋಜಿಸಲಾದ ಸಿಬ್ಬಂದಿಯ ಜಾತ್ಯತೀತ ನೀತಿಯನ್ನು ಹಾಳುಗೆಡವದು. ಹೊರಗಿನವರಿಗೆ ಧಾರ್ಮಿಕ ಸ್ವರೂಪದ್ದು ಎನಿಸಬಹುದಾದ ಸಮರ ಘೋಷಗಳು ಕೂಡ ಇವೆ. ಆದರೆ ಅವು ಯೋಧರಲ್ಲಿ ಒಗ್ಗಟ್ಟು ಮತ್ತು ಏಕತೆಯನ್ನು ಬೆಳೆಸುವ ಉದ್ದೇಶದಿಂದ ಸಂಪೂರ್ಣವಾಗಿ ಪ್ರೇರಕ ಕಾರ್ಯವನ್ನು ನಿರ್ವಹಿಸುತ್ತವೆ" ಎಂದು ನ್ಯಾಯಾಲಯ ಹೇಳಿದೆ.

2017ರಲ್ಲಿ ಸಿಖ್ ಸ್ಕ್ವಾಡ್ರನ್‌ಗೆ ನಿಯೋಜಿತರಾದ ಲೆಫ್ಟಿನೆಂಟ್ ಕಮಲೇಶನ್, ಕಡ್ಡಾಯ ರೆಜಿಮೆಂಟಲ್ ಪೆರೇಡ್‌ಗಳ ಸಮಯದಲ್ಲಿ ಧಾರ್ಮಿಕ ಕಟ್ಟಡಗಳ ಗರ್ಭಗುಡಿ ಪ್ರವೇಶಿಸಲು ನಿರಾಕರಿಸಿದ್ದರಿಂದ ಶಿಸ್ತುಕ್ರಮ ಎದುರಿಸಿದ್ದರು. ತಾನು ಪಾಲಿಸುವ ಕ್ರೈಸ್ತ ಧರ್ಮಕ್ಕೆ ಗೌರವ ಸಲ್ಲಿಸುವ ಸಲುವಾಗಿ ಮಾತ್ರವಲ್ಲದೆ ದೇವಾಲಯದ ಗರ್ಭಗುಡಿಯನ್ನು ಪ್ರವೇಶಿಸುವ ಮೂಲಕ ಉಳಿದ ಧರ್ಮೀಯರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರದೆ ಇರಲು ಕೂಡ ಹೀಗೆ ಮಾಡಿರುವೆ. ಇದರಿಂದ ತನ್ನ ಪಡೆ ವಿರುದ್ಧ ಅಪರಾಧ ಎಸಗಿಲ್ಲ ಮತ್ತು ಇದು ತನ್ನ ಪಡೆಯೊಂದಿಗಿನ ಬಲವಾದ ಬಾಂಧವ್ಯದ ಮೇಲೆಯೂ ಪರಿಣಾಮ ಬೀರಿಲ್ಲ ಎಂದು ವಾದಿಸಿದ್ದರು.

ಆದರೆ ಕಮಾಂಡರ್‌ ಅಧಿಕಾರಿಗಳು ಭರವಸೆ ನೀಡಿದರೂ ಕ್ರೈಸ್ತ ಧರ್ಮದ ಭಾವನೆಗಳಿಗೆ ಧಕ್ಕೆ ತರುವುದಿಲ್ಲ ಎಂದು ಪಾದ್ರಿಗಳೊಂದಿಗೆ ನಡೆಸಿದ ಸಮಾಲೋಚನೆಗಳು ಹೇಳಿದ್ದರೂ ಕಮಲೇಶನ್‌ ತಮ್ಮ ನಿಲುವು ಬದಲಿಸಲಿಲ್ಲ. ಹೀಗಾಗಿ ಅವರನ್ನು 2021ರಲ್ಲಿ ವಜಾಗೊಳಿಸಲಾಗಿತ್ತು. ಕಮಲೇಶನ್‌ ನಿರಾಕರಣೆಯಿಂದಾಗಿ ಪಡೆಯ ಒಗ್ಗಟ್ಟು ಮತ್ತು ಅದರ ನೈತಿಕತೆ ದುರ್ಬಲಗೊಂಡಿತು ಸೇನೆ ಹೇಳಿತ್ತು.

ವಾದ ಆಲಿಸಿದ ಪೀಠ ಪ್ರಸ್ತುತ ಪ್ರಕರಣದಲ್ಲಿನ ಪ್ರಶ್ನೆ ಧಾರ್ಮಿಕ ಸ್ವಾತಂತ್ರ್ಯದ್ದಲ್ಲ, ಬದಲಾಗಿ ಉನ್ನತ ಅಧಿಕಾರಿಯ ಕಾನೂನುಬದ್ಧ ಆಜ್ಞೆಯನ್ನು ಪಾಲಿಸಲಾಗಿದೆಯೇ ಎಂಬುದಾಗಿದೆ ಎಂದು ತೀರ್ಪು ನೀಡಿದೆ. ಸೇನಾ ಕಾಯಿದೆಯ ಸೆಕ್ಷನ್ 41ರ ಪ್ರಕಾರ ಉನ್ನತ ಅಧಿಕಾರಿಯ ಆದೇಶವನ್ನು ಪಾಲಿಸದೆ ಇರುವುದು ಅಪರಾಧವಾಗಿದೆ ಎಂದು ಅದು ತಿಳಿಸಿದೆ.

ಹೀಗಾಗಿ ತನ್ನ ಮೇಲಧಿಕಾರಿಯ ಕಾನೂನುಬದ್ಧ ಆಜ್ಞೆಗಿಂತ ಹೆಚ್ಚಾಗಿ ಸೇನಾಧಿಕಾರಿ ತನ್ನ ಧರ್ಮವನ್ನು ನೆಚ್ಚಿಕೊಂಡಿದ್ದು ಇದು ಅಶಿಸ್ತಿಗೆ ಸಮ ಎಂದು ನ್ಯಾಯಾಲಯ ತೀರ್ಪು ನೀಡಿತು.

Also Read
ಮಾಡಾಳು ಲಂಚ ಪ್ರಕರಣ: ಎಸ್‌ಐಟಿ ಅಥವಾ ಸಿಬಿಐ ತನಿಖೆ ಕೋರಿದ್ದ ಶ್ರೀರಾಮ ಸೇನೆ ಅರ್ಜಿ ಇತ್ಯರ್ಥಪಡಿಸಿದ ಹೈಕೋರ್ಟ್‌

ಗರ್ಭಗುಡಿಯನ್ನು ಪ್ರವೇಶಿಸಲು ನಿರಾಕರಿಸುವುದು ಸೇನಾ ನೀತಿಯನ್ನು ದುರ್ಬಲಗೊಳಿಸುತ್ತದೆ ಮತ್ತು ಹಾನಿಗೊಳಿಸುತ್ತದೆ ಎಂಬ ಸೇನೆಯ ನಿಲುವನ್ನು ಪೀಠ ಇದೇ ವೇಳೆ ಒಪ್ಪಿಕೊಂಡಿತು. ಸಶಸ್ತ್ರ ಪಡೆಗಳ ಜಾತ್ಯತೀತ ರಚನೆಗೆ ಹಾನಿಕಾರಕವಾದ ಅನಗತ್ಯ ವಿವಾದಗಳಿಗೆ ಕಾರಣವಾಗಬಹುದಾದ್ದರಿಂದ, ಕೋರ್ಟ್ ಮಾರ್ಷಲ್ ನಡೆಸದಿರುವ ಸೇನೆಯ ನಿರ್ಧಾರಕ್ಕೂ ಅದು ತಲೆದೂಗಿತು.

ಕಮಲೇಶನ್‌ ಪರ ಹಿರಿಯ ವಕೀಲ ಗೋಪಾಲ್‌ ಶಂಕರ್‌ ನಾರಾಯಣನ್‌ ಮತ್ತವರ ತಂಡ ವಾದ ಮಂಡಿಸಿತು. ಕೇಂದ್ರ ಸರ್ಕಾರವನ್ನು ಹೆಚ್ಚುವರಿ ಸಾಲಿಸಿಟರ್ ಜನರಲ್ ಚೇತನ್ ಶರ್ಮಾ , ಕೇಂದ್ರ ಸರ್ಕಾರದ ಸ್ಥಾಯಿ ವಕೀಲ ರಿಪುದಮನ್ ಭಾರದ್ವಾಜ್ ಮತ್ತಿತರರು ಪ್ರತಿನಿಧಿಸಿದ್ದರು.

Kannada Bar & Bench
kannada.barandbench.com