ಪುನಿಯಾ, ಪೋಗಟ್‌ಗೆ ಏಷ್ಯನ್‌ ಗೇಮ್ಸ್‌ಗೆ ನೇರ ಪ್ರವೇಶ: ಐಒಎ ನಿರ್ಧಾರ ಎತ್ತಿಹಿಡಿದ ದೆಹಲಿ ಹೈಕೋರ್ಟ್‌

ಪೋಗಟ್ ಮತ್ತು ಪುನಿಯಾ ಅವರಿಗೆ ಟ್ರಯಲ್ಸ್‌ನಿಂದ ವಿನಾಯಿತಿ ನೀಡಿರುವ ತಾತ್ಕಾಲಿಕ ಸಮಿತಿಯ ನಿರ್ಣಯವು ಮನಸೋಇಚ್ಛೆಯಿಂದ ಕೂಡಿರುವುದಾಗಲಿ, ಅಡ್ಡದಾರಿಯದ್ದಾಗಲಿ ಅಲ್ಲ ಎಂದ ನ್ಯಾಯಾಲಯ.
Bajrang Punia and Vinesh Phogat
Bajrang Punia and Vinesh PhogatFacebook

ಕುಸ್ತಿ ಪಟುಗಳಾದ ಬಜರಂಗ್ ಪುನಿಯಾ ಮತ್ತು ವಿನೇಶಾ ಪೋಗಟ್‌ ಅವರಿಗೆ ಏಷ್ಯನ್‌ ಗೇಮ್ಸ್‌ಗೆ ನೇರ ಪ್ರವೇಶ ನೀಡಿರುವ ಭಾರತೀಯ ಒಲಿಂಪಿಕ್‌ ಒಕ್ಕೂಟದ (ಐಒಎ) ನಿರ್ಧಾರವನ್ನು ದೆಹಲಿ ಹೈಕೋರ್ಟ್‌ ಶನಿವಾರ ಪುರಸ್ಕರಿಸಿದೆ.

ಪುನಿಯಾ ಮತ್ತು ಪೋಗಟ್‌ಗೆ ಟ್ರಯಲ್ಸ್‌ನ ಅವಶ್ಯಕತೆಯಿಲ್ಲದೆ ನೇರವಾಗಿ ಏಷ್ಯನ್‌ ಗೇಮ್ಸ್‌ಗೆ ಆಯ್ಕೆ ಮಾಡಿದ್ದ ಒಕ್ಕೂಟದ ನಿರ್ಧಾರವನ್ನು ಆಕ್ಷೇಪಿಸಿ ಕುಸ್ತಿ ಪಟುಗಳಾದ ಅಂತಿಮ್‌ ಪಂಘಲ್‌ ಮತ್ತು ಸುಜೀತ್‌ ಕಲ್ಕಲ್‌ ಅವರು ಸಲ್ಲಿಸಿದ್ದ ಮನವಿಯನ್ನು ನ್ಯಾ. ಸುಬ್ರಮೊಣಿಯಂ ಪ್ರಸಾದ್ ಅವರಿದ್ದ ಪೀಠ ಶನಿವಾರ ವಜಾಗೊಳಿಸಿತು.

ಪೋಗಟ್ ಮತ್ತು ಪುನಿಯಾ ಅವರಿಗೆ ಟ್ರಯಲ್ಸ್‌ನಿಂದ ವಿನಾಯಿತಿ ನೀಡಿರುವ ತಾತ್ಕಾಲಿಕ ಸಮಿತಿಯ ನಿರ್ಣಯವು ಮನಸೋಇಚ್ಛೆಯಿಂದ ಕೂಡಿರುವುದಾಗಲಿ, ಬೇಕಾಬಿಟ್ಟಿ ನಿರ್ಧಾರವಾಗಲಿ ಅಥವಾ ಅಡ್ಡದಾರಿಯದ್ದಾಗಲಿ ಅಲ್ಲ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ಹೇಳಿದೆ.

ನ್ಯಾ. ಸುಬ್ರಮೊಣಿಯಂ ಪ್ರಸಾದ್ ಅವರು ತಮ್ಮ ಆದೇಶದಲ್ಲಿ, "ಈ ನ್ಯಾಯಾಲಯವು ಕುಸ್ತಿ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಅರ್ಜಿದಾರರ ಮನವಿಯ ಅರ್ಹತೆಯ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ಆದರೆ, ಸಮಿತಿಯು ಕೈಗೊಂಡಿರುವ ನಿರ್ಣಯದ ಮೇಲಿನ ಮನವಿಯನ್ನು ಈ ನ್ಯಾಯಾಲಯವು ಆಲಿಸುವ ಇಚ್ಛೆ ಹೊಂದಿಲ್ಲ. ಏಕೆಂದರೆ ಆ ನಿರ್ಣಯವು ಮನಸೋಇಚ್ಛೆಯಿಂದ ಕೂಡಿರುವುದಾಗಲಿ ಅಥವಾ ತಪ್ಪಿನಿಂದ ಕೂಡಿರುವದಾಗಲಿ ಅಲ್ಲ... ದೇಶದ ಹಿತಾಸಕ್ತಿಯ ವಿರುದ್ಧ ಭಾರತೀಯ ಕುಸ್ತಿ ಒಕ್ಕೂಟವು ನಿರ್ಣಯ ಕೈಗೊಂಡಿದೆ ಎಂದಾಗಲಿ ಅಥವಾ ಬಾಹ್ಯ ಸನ್ನಿವೇಶಗಳಿಂದ ನಿರ್ಧಾರ ಕೈಗೊಂಡಿದೆ ಎಂದಾಗಲಿ, ಇಲ್ಲವೇ ಕೆಲವರಿಗೆ ಅನುಕೂಲ ಮಾಡಿಕೊಡಲು ನಿರ್ಣಯ ಕೈಗೊಂಡಿದೆ ಎಂದಾಗಲಿ ಹೇಳಲು ಸಾಧ್ಯವಿಲ್ಲ, ಅರ್ಜಿದಾರರು ಸಹ ಇಂತಹ ಯಾವುದೇ ಅರೋಪ ಮಾಡಿಲ್ಲ," ಎಂದು ದಾಖಲಿಸಿದ್ದಾರೆ.

ಮೇಲಿನ ಈ ಅವಲೋಕನಗಳೊಂದಿಗೆ ನ್ಯಾಯಾಲಯವು ಅರ್ಜಿದಾರರ ಮನವಿಯನ್ನು ವಜಾಗೊಳಿಸಿತು.

Related Stories

No stories found.
Kannada Bar & Bench
kannada.barandbench.com