ಕಾಂಗ್ರೆಸ್ ಮುಖಂಡರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾಡ್ರಾ ಮತ್ತು ಆಮ್ ಆದ್ಮಿ ಪಕ್ಷದ ತೆರಿಗೆ ಮೌಲ್ಯಮಾಪನವನ್ನು ಮುಖರಹಿತ ಮೌಲ್ಯಮಾಪನ ವ್ಯವಸ್ಥೆಯಿಂದ ಕೇಂದ್ರ ವೃತ್ತಕ್ಕೆ ಆದಾಯ ತೆರಿಗೆ ಇಲಾಖೆ ವರ್ಗಾಯಿಸಿರುವುದನ್ನು ಶುಕ್ರವಾರ ದೆಹಲಿ ಹೈಕೋರ್ಟ್ ಎತ್ತಿ ಹಿಡಿದಿದೆ.
ಮಾರ್ಚ್ 15ರಂದು ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಮೂರ್ತಿಗಳಾದ ಮನಮೋಹನ್ ಮತ್ತು ದಿನೇಶ್ ಕುಮಾರ್ ಶರ್ಮಾ ಅವರ ನೇತೃತ್ವದ ವಿಭಾಗೀಯ ಪೀಠವು ಇಂದು ಪ್ರಕಟಿಸಿತು. ವಿಸ್ತೃತ ಆದೇಶ ಇನ್ನಷ್ಟೇ ಪ್ರಕಟವಾಗಬೇಕಿದೆ.
ಗಾಂಧಿ ಪರಿವಾರ ಮತ್ತು ಆಪ್ ಮಾತ್ರವಲ್ಲದೇ ಸಂಜಯ್ ಗಾಂಧಿ ಸ್ಮಾರಕ ಟ್ರಸ್ಟ್, ರಾಜೀವ್ ಗಾಂಧಿ ಫೌಂಡೇಶನ್, ರಾಜೀವ್ ಗಾಂಧಿ ದತ್ತಿ ಟ್ರಸ್ಟ್, ಯಂಗ್ ಇಂಡಿಯನ್ ಮತ್ತು ಜವಾಹರ್ ಭವನ್ ಟ್ರಸ್ಟ್‌ಗಳ ತೆರಿಗೆ ಮೌಲ್ಯಮಾಪನವನ್ನು ವರ್ಗಾವಣೆ ಮಾಡಿರುವುದನ್ನೂ ನ್ಯಾಯಾಲಯ ಎತ್ತಿ ಹಿಡಿದಿದೆ. ಸರ್ಕಾರೇತರ ಸಂಸ್ಥೆಗಳಾದ ಇವುಗಳು ಗಾಂಧಿ ಕುಟುಂಬದೊಂದಿಗೆ ನಂಟು ಹೊಂದಿವೆ.
ಶಸ್ತ್ರಾಸ್ತ್ರ ದಲ್ಲಾಳಿ ಸಂಜಯ್ ಭಂಡಾರಿ ಪ್ರಕರಣದಲ್ಲಿನ ಶೋಧ ಮತ್ತು ಜಪ್ತಿ ಆಧರಿಸಿ ತೆರಿಗೆ ಮೌಲ್ಯಮಾಪನವನ್ನು ವರ್ಗಾವಣೆ ಮಾಡಲಾಗಿದೆ. ಆದರೆ, ಸಂಜಯ್‌ಗೂ ತಮಗೂ ಯಾವುದೇ ಸಂಬಂಧ ಇಲ್ಲ ಎಂದು ಆದಾಯ ತೆರಿಗೆ ಇಲಾಖೆಯ ಮುಖ್ಯ ಆಯುಕ್ತರ ನಿರ್ಧಾರವನ್ನು ಗಾಂಧಿಗಳು ಪ್ರಶ್ನಿಸಿದ್ದರು.
ಒಂದೇ ನಗರದ ವ್ಯಾಪ್ತಿಯೊಳಗಿನ ಪ್ರಕರಣಗಳನ್ನು ವರ್ಗಾವಣೆ ಮಾಡಲಾಗಿದೆ. ಒಂದು ನಗರದಿಂದ ಮತ್ತೊಂದು ನಗರಕ್ಕೆ ವರ್ಗಾವಣೆ ಮಾಡಿದರೆ ಮಾತ್ರ ತೆರಿಗೆ ಪಾವತಿದಾರರ ವಾದ ಆಲಿಸಬೇಕಾಗುತ್ತದೆ ಎಂದು ಆದಾಯ ತೆರಿಗೆ ಇಲಾಖೆಯು ತನ್ನ ಕ್ರಮವನ್ನು ನ್ಯಾಯಾಲಯದಲ್ಲಿ ಸಮರ್ಥಿಸಿಕೊಂಡಿತು.