ಬಂಧನ ವಾರಂಟ್ ಹೊರಡಿಸುವ ಗ್ರಾಹಕ ಆಯೋಗಗಳ ಅಧಿಕಾರ ಎತ್ತಿಹಿಡಿದ ದೆಹಲಿ ಹೈಕೋರ್ಟ್

ಗ್ರಾಹಕ ಸಂರಕ್ಷಣಾ ಕಾಯಿದೆ ಪ್ರಕಾರ, ಆಯೋಗಗಳು ತಮ್ಮ ನಿರ್ದೇಶನ ಜಾರಿಗೊಳಿಸಲು ಪ್ರಥಮ ದರ್ಜೆ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಸಮನಾ ಅಧಿಕಾರ ಹೊಂದಿವೆ ಎಂದು ನ್ಯಾಯಮೂರ್ತಿ ಸಂಜೀವ್ ನರುಲಾ ಅವರು ತಿಳಿಸಿದರು.
Consumer Protection
Consumer Protection
Published on

ಗ್ರಾಹಕರ ರಕ್ಷಣಾ ಕಾಯಿದೆಯಡಿ ಬಂಧನ ವಾರಂಟ್‌ ಹೊರಡಿಸುವ ಗ್ರಾಹಕ ಆಯೋಗಗಳ ಅಧಿಕಾರವನ್ನು ದೆಹಲಿ ಹೈಕೋರ್ಟ್ ಇತ್ತೀಚೆಗೆ ಎತ್ತಿಹಿಡಿದಿದೆ  [ರಾಕೇಶ್ ಖನ್ನಾ ಮತ್ತು ನವೀನ್ ಕುಮಾರ್ ಅಗರ್‌ವಾಲ್‌ ಇನ್ನಿತರರ ನಡುವಣ ಪ್ರಕರಣ] .

ಗ್ರಾಹಕ ಸಂರಕ್ಷಣಾ ಕಾಯಿದೆ ಪ್ರಕಾರ, ಆಯೋಗಗಳು ತಮ್ಮ ನಿರ್ದೇಶನ ಜಾರಿಗೊಳಿಸಲು ಪ್ರಥಮ ದರ್ಜೆ ನ್ಯಾಯಾಂಗ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯಕ್ಕೆ ಸಮನಾದ ನ್ಯಾಯಾಂಗ ಅಧಿಕಾರ ಹೊಂದಿವೆ ಎಂದು ನ್ಯಾಯಮೂರ್ತಿ ಸಂಜೀವ್ ನರುಲಾ ಅವರು ತಿಳಿಸಿದರು.

ಹಾಗಾಗಿ ಗ್ರಾಹಕ ಆಯೋಗಗಳು ಬಂಧನ ವಾರೆಂಟ್‌ ಹೊರಡಿಸುವುದು ಗ್ರಾಹಕರ ರಕ್ಷಣಾ ಕಾಯಿದೆಯ ಶಾಸನಬದ್ಧ ಚೌಕಟ್ಟಿನ ವ್ಯಾಪ್ತಿಯಲ್ಲೇ ಇರುತ್ತದೆ ಎಂದು ಸೆಪ್ಟೆಂಬರ್ 25ರ ಆದೇಶ ಹೇಳಿದೆ.

ದೆಹಲಿ ರಾಜ್ಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ತನ್ನ ವಿರುದ್ಧ ಹೊರಡಿಸಿದ ಬಂಧನ ವಾರಂಟ್‌ಗಳನ್ನು ಎತ್ತಿಹಿಡಿದ ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ (ಎನ್‌ಸಿಡಿಆರ್‌ಸಿ) ಆದೇಶ  ಪ್ರಶ್ನಿಸಿ ಕಂಪನಿಯೊಂದರ ನಿರ್ದೇಶಕರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ತೀರ್ಪು ನೀಡಿದೆ.

ಸೇವಾ ನ್ಯೂನತೆ ಮತ್ತು ಅನ್ಯಾಯದ ವ್ಯಾಪಾರದಲ್ಲಿ ತೊಡಗಿಸಿಕೊಳ್ಳಲಾಗಿದೆ ಎಂದು ಆರೋಪಿಸಿ ಪ್ರತಿವಾದಿ ನವೀನ್ ಕುಮಾರ್ ಅಗರ್‌ವಾಲ್‌ ಅವರು ವಿಎಕ್ಸ್ಎಲ್ ರಿಯಾಲ್ಟರ್ಸ್ ಪ್ರೈವೇಟ್ ಕಂಪನಿಯ ನಿರ್ದೇಶಕ ರಾಕೇಶ್ ಖನ್ನಾ ವಿರುದ್ಧ ರಾಜ್ಯ ಆಯೋಗದೆದುರು ದೂರು ಸಲ್ಲಿಸಿದ್ದರು.   

ಅಗರ್‌ವಾಲ್‌ ಪರವಾಗಿ ಆದೇಶ  ನೀಡಿದ ಆಯೋಗ, ರಾಕೇಶ್ ಖನ್ನಾ ವಿರುದ್ಧ ಬಂಧನ ವಾರಂಟ್ ಹೊರಡಿಸಿತ್ತು. ಈ ಆದೇಶ ಪ್ರಶ್ನಿಸಿ ಖನ್ನಾ ರಾಜ್ಯ ಆಯೋಗ ಹಾಗೂ ಎನ್‌ಸಿಡಿಆರ್‌ಸಿಗೆ ಮನವಿ ಮಾಡಿದ್ದರು. ವಾರೆಂಟ್‌ ಹೊರಡಿಸುವ ಆದೇಶವನ್ನು ಎನ್‌ಸಿಡಿಆರ್‌ಸಿ ಎತ್ತಿ ಹಿಡಿದಿತ್ತು. ನಂತರ ಪ್ರಕರಣ ಹೈಕೋರ್ಟ್‌ ಅಂಗಳ ತಲುಪಿತ್ತು.

ವಾದ ಪ್ರತಿವಾದ ಆಲಿಸಿದ ಹೈಕೋರ್ಟ್‌ ರಾಜ್ಯ ಆಯೋಗ ತನ್ನ ಆದೇಶ ಜಾರಿಗೊಳಿಸಲು ನ್ಯಾಯವ್ಯಾಪ್ತಿ ಮತ್ತು ಅಧಿಕಾರ ಎರಡನ್ನೂ ಹೊಂದಿದೆ ಈ ಅಧಿಕಾರ ಬಂಧನ ವಾರಂಟ್‌ಹೊರಡಿಸುವ ಅಧಿಕಾರವನ್ನು ಒಳಗೊಂಡಿದೆ ಎಂದಿದೆ.

ಬಂಧನ ವಾರಂಟ್‌ಗಳನ್ನು ಗ್ರಾಹಕರ ರಕ್ಷಣಾ ಕಾಯಿದೆಯ ನಿರ್ದಿಷ್ಟ ಸೆಕ್ಷನ್‌ಗಳ ಅಡಿಯಲ್ಲಿ ನೀಡಲಾಗುತ್ತದೆಯೇ ವಿನಾ ಸಿಪಿಸಿ ಅಡಿ ಅಲ್ಲ. ಈ ಹಿನ್ನೆಲೆಯಲ್ಲಿ ಈ ವಾರಂಟ್‌ಗಳನ್ನು ನೀಡುವುದು ಆಯೋಗದ ಅಧಿಕಾರ ವ್ಯಾಪ್ತಿಗೆ ಒಳಪಡುತ್ತದೆ,” ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಅಪರಾಧಗಳ ವಿಚಾರಣೆ ವೇಳೆ ತಮ್ಮ ಆದೇಶ ಜಾರಿಯಾಗುವಂತೆ ನೋಡಿಕೊಳ್ಳುವುದಕ್ಕಾಗಿ ಎನ್‌ಸಿಡಿಆರ್‌ಸಿ, ಎಸ್‌ಸಿಡಿಆರ್‌ಸಿ ಮತ್ತು ಡಿಸಿಡಿಆರ್‌ಸಿಗಳಿಗೆ ಪ್ರಥಮ ದರ್ಜೆ ನ್ಯಾಯಾಂಗ ಮ್ಯಾಜಿಸ್ಟ್ರೇಟ್  ನ್ಯಾಯಾಲಯದ ಅಧಿಕಾರವನ್ನು ಗ್ರಾಹಕ ಸಂರಕ್ಷಣಾ ಕಾಯಿದೆಯ ಸೆಕ್ಷನ್ 72 ನೀಡುತ್ತದೆ ಎಂದು ಆದೇಶದಲ್ಲಿ ವಿವರಿಸಲಾಗಿದೆ.

Kannada Bar & Bench
kannada.barandbench.com