ಕಳೆದ ಫೆಬ್ರುವರಿಯಲ್ಲಿ ದೆಹಲಿಯಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಫೇಸ್‌ಬುಕ್ ಭಾರತದ ವ್ಯವಸ್ಥಾಪಕ ನಿರ್ದೇಶಕ ಅಜಿತ್ ಮೋಹನ್ ಅವರಿಗೆ ದೆಹಲಿ ಸರ್ಕಾರದ “ಶಾಂತಿ ಮತ್ತು ಸಾಮರಸ್ಯ ಸಮಿತಿ” ನೋಟಿಸ್ ಜಾರಿಗೊಳಿಸಿರುವುದನ್ನು ಪ್ರಶ್ನಿಸಿ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಅವರ ನೇತೃತ್ವದ ಪೀಠವು ಇಂದು ಅರ್ಜಿ ವಿಚಾರಣೆ ನಡೆಸಲಿದೆ. ಹಿರಿಯ ವಕೀಲರಾದ ಹರೀಶ್ ಸಾಳ್ವೆ ಮತ್ತು ಮುಕುಲ್ ರೋಹ್ಟಗಿ ಅವರು ಫೇಸ್‌ಬುಕ್ ಪ್ರತಿನಿಧಿಸಲಿದ್ದು, ವಕೀಲ ಮಯಾಂಕ್ ಪಾಂಡೆ ಅರ್ಜಿ ಸಲ್ಲಿಸಿದ್ದಾರೆ. ಫೇಸ್‌ಬುಕ್ ಭಾರತದ ಮುಖ್ಯಸ್ಥ ಅಜಿತ್ ಮೋಹನ್ ಅವರು ದೆಹಲಿಯ “ಶಾಂತಿ ಮತ್ತು ಸಾಮರಸ್ಯ ಸಮಿತಿ”ಗೆ ತಮಗೆ ಸಮನ್ಸ್ ನೀಡುವ ಮೂಲಕ ವಿಚಾರಣೆಗೆ ಹಾಜರಾಗುವಂತೆ ಸೂಚಿಸುವ ಅಧಿಕಾರವಿಲ್ಲ. ಇದೇ ಪ್ರಕರಣ ಸಂಸದೀಯ ಸಮಿತಿಯ ಮುಂದಿದೆ ಎಂದು ವಾದಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಂಸದೀಯ ಸ್ಥಾಯಿ ಸಮಿತಿಯ ಮುಂದೆ ಹಾಜರಾಗಿ ವಿವರಣೆ ನೀಡಲಾಗಿದೆ ಎಂದು ಅಜಿತ್ ಮೋಹನ್ ಹೇಳಿದ್ದು, ದೆಹಲಿ ಸರ್ಕಾರದ ನೋಟಿಸ್ ವಜಾಗೊಳಿಸುವಂತೆ ಮನವಿ ಮಾಡಿದ್ದಾರೆ. ದೆಹಲಿಯ ಪೊಲೀಸ್ ವ್ಯವಸ್ಥೆ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಒಳಪಟ್ಟಿದೆ ಎಂದೂ ಅವರು ಹೇಳಿದ್ದಾರೆ.
ಮೇಲ್ನೋಟಕ್ಕೆ ಫೇಸ್‌ಬುಕ್ ಅಪರಾಧಿ ಎಂದು ಆಮ್ ಆದ್ಮಿ ಪಕ್ಷದ ಸದಸ್ಯರು ಮಾಧ್ಯಮ ಗೋಷ್ಠಿಯಲ್ಲಿ ಹೇಳಿದ್ದಾರೆ. ಇದರ ಜೊತೆಗೆ ಪೂರಕ ಆರೋಪ ಪಟ್ಟಿ ಸಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ. ಆದರೆ, ಹೀಗೆ ಆರೋಪಿಸಲು ದೆಹಲಿ ಸರ್ಕಾರಕ್ಕೆ ಯಾವುದೇ ಅಧಿಕಾರವಿಲ್ಲ ಎಂದು ಮನವಿಯಲ್ಲಿ ಹೇಳಲಾಗಿದೆ.
ಸಮಿತಿಯ ಮುಂದೆ ಹಾಜರಾಗುವಂತೆ ದೆಹಲಿ ಸರ್ಕಾರವು ಎರಡು ಸಮನ್ಸ್ ಜಾರಿಗೊಳಿಸಿದೆ. ಇದನ್ನು ಉಲ್ಲಂಘಿಸಿದರೆ ಅದು “ಚುನಾಯಿತ ಪ್ರತಿನಿಧಿಗಳ ಹಕ್ಕು ಉಲ್ಲಂಘಿಸಿದಂತೆ” ಎಂದು ಹೇಳಲಾಗಿದೆ.
ಶಾಸನ ಸಭೆಯ ಚಟುವಟಿಕೆಗಳಿಗೆ ಅಡ್ಡಿಪಡಿಸದ ಹೊರತು ವ್ಯಕ್ತಿಯೊಬ್ಬರ ವಿರುದ್ಧ ದಬ್ಬಾಳಿಕೆಯ ಮೂಲಕ ಕ್ರಮಕೈಗೊಳ್ಳುವಂತೆ ಸೂಚಿಸುವ ಕಾನೂನಾತ್ಮಕ ಅಧಿಕಾರ ಯಾವುದೇ ರಾಜ್ಯದ ವಿಧಾನಸಭೆ ಅಥವಾ ಸರ್ಕಾರ ರಚಿಸಿದ ಸಮಿತಿಗೆ ಇರುವುದಿಲ್ಲ ಎಂದು ಅರ್ಜಿದಾರರು ವಿವರಿಸಿದ್ದಾರೆ.
ಬಳಕೆದಾರರಿಗೆ ಮುಕ್ತವಾಗಿ ಅಭಿವ್ಯಕ್ತಿಸಲು ಅವಕಾಶ ಮಾಡಿಕೊಟ್ಟಿರುವ ಫೇಸ್‌ಬುಕ್ ಪ್ಲಾಟ್‌ಫಾರ್ಮ್‌ಗೆ ಸಮನ್ಸ್ ಜಾರಿಗೊಳಿಸುವುದು ಫೇಸ್‌ಬುಕ್ ಸೇವಾ ಬಳಕೆದಾರರ ವಾಕ್ ಸ್ವಾತಂತ್ರ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಮನವಿಯಲ್ಲಿ ಹೇಳಲಾಗಿದೆ.
ಸದಸ್ಯೇತರರನ್ನು ಪ್ರಶ್ನೆಗೆ ಉತ್ತರಿಸಲು ರಾಜ್ಯ ಸರ್ಕಾರದ ಸಮಿತಿ ಆಹ್ವಾನಿಸುವುದು ಪ್ರಶ್ನಾರ್ಹವಾಗಿದ್ದು, ಇದು ಸದಸ್ಯೇತರರಿಗೆ ಸಾಂವಿಧಾನಿಕವಾಗಿ ದೊರೆತಿರುವ ಮೂಲಭೂತ ಹಕ್ಕಾದ ಪರಿಚ್ಛೇದ 19(1)(a) ಮತ್ತು 21ರ ಉಲ್ಲಂಘನೆಯಲ್ಲವೇ ಎಂದು ಪ್ರಶ್ನಿಸಲಾಗಿದೆ.
ಎನ್ ರವಿ ಮತ್ತು ಇತರರು ವರ್ಸಸ್ ತಮಿಳುನಾಡು ವಿಧಾನಸಭೆ ಸ್ಪೀಕರ್ ವಿರುದ್ಧದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಪರಿಚ್ಛೇದ 19(1)(a) ಮತ್ತು 21 ಒಂದು ಕಡೆ ಮತ್ತು ಪರಿಚ್ಛೇದ 194(3) ಇನ್ನೊಂದು ಕಡೆ ಇರುವುದರಿಂದ ಇದರ ಕುರಿತು ವಿಸ್ತೃತ ಚರ್ಚೆ ಅಗತ್ಯ ಎಂದು ಹೇಳಿದ್ದು, ಪ್ರಕರಣವನ್ನು ಏಳು ನ್ಯಾಯಮೂರ್ತಿಗಳ ಪೀಠಕ್ಕೆ ವರ್ಗಾಯಿಸಿದೆ.