ದೆಹಲಿ ಗಲಭೆಗೆ ಸಂಬಂಧಿಸಿದಂತೆ ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯಿದೆ (ಯುಎಪಿಎ) ಅಡಿ ಆರೋಪಿಗಳಾಗಿರುವ ಆಸೀಫ್ ಇಕ್ಬಾಲ್ ತನ್ಜಾ, ದೇವಾಂಗನಾ ಕಲಿತಾ ಮತ್ತು ನತಾಷಾ ನರ್ವಾಲ್ ಅವರಿಗೆ ದೆಹಲಿ ಹೈಕೋರ್ಟ್ ಮಂಗಳವಾರ ಜಾಮೀನು ನೀಡಿದ್ದನ್ನು ಪ್ರಶ್ನಿಸಿ ದೆಹಲಿ ಪೊಲೀಸರು ಸುಪ್ರೀಂ ಕೋರ್ಟ್‌ನಲ್ಲಿ ಬುಧವಾರ ಮೇಲ್ಮನವಿ ಸಲ್ಲಿಸಿದ್ದಾರೆ.
ನ್ಯಾಯಮೂರ್ತಿಗಳಾದ ಸಿದ್ಧಾರ್ಥ್ ಮೃದುಲ್ ಮತ್ತು ಅನೂಪ್ ಜೆ ಭಂಭಾನಿ ಅವರು ಮಂಗಳವಾರ ನೀಡಿದ ತೀರ್ಪು ಪ್ರಶ್ನಿಸಿ ದೆಹಲಿ ಪೊಲೀಸರು ಬುಧವಾರ ಮೇಲ್ಮನವಿ ಸಲ್ಲಿಸಿದ್ದಾರೆ.
ಯುಎಪಿಎ ಸೆಕ್ಷನ್‌ಗಳಾದ 15, 17 ಅಥವಾ 18ರ ಅಡಿ ಪ್ರಸಕ್ತ ಪ್ರಕರಣಕ್ಕೆ ಸಂಬಂಧಿಸಿದಂತೆ ಇರುವ ದಾಖಲೆಗಳನ್ನು ಪರಿಶೀಲಿಸಿದಾಗ ಮೇಲ್ನೋಟಕ್ಕೆ ಯಾವುದೇ ಅಪರಾಧ ಎಸಗಿಲ್ಲ ಎಂದು ಹೈಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿತ್ತು.
ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಲ್ಲಿ ಆಸೀಫ್ ಇಕ್ಬಾಲ್ ತನ್ಹಾ ಅವರು ಪರ್ಷಿಯನ್ ಭಾಷೆಯ ಅಂತಿಮ ವರ್ಷದ ಪದವಿ ವಿದ್ಯಾರ್ಥಿಯಾಗಿದ್ದಾರೆ. ಕಳೆದ ವರ್ಷ ಮೇನಲ್ಲಿ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಯುಎಪಿಎ ಅಡಿ ಬಂಧಿತರಾಗಿದ್ದ ಆಸೀಫ್ ಅವರು ಅಂದಿನಿಂದಲೂ ಸೆರೆವಾಸದಲ್ಲಿದ್ದರು.
ಪೌರತ್ವ ತಿದ್ದುಪಡಿ ಕಾಯಿದೆ ಜಾರಿಯಾದ ನಂತರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಾನೂನು ಸುವ್ಯವಸ್ಥೆಗೆ ಭಂಗ ತರಲು ಈ ಮೂವರೂ ಇನ್ನಿಲ್ಲದಂತೆ ಯತ್ನಿಸಿದ್ದರು ಎಂದು ದೆಹಲಿ ಪೊಲೀಸರು ಆರೋಪಿಸಿದ್ದರು. ಪಿಂಜ್ರಾ ತೋಡ್ ಸದಸ್ಯರು ದೆಹಲಿ ಈಶಾನ್ಯ ಭಾಗದಲ್ಲಿ ಮಹಿಳೆಯರನ್ನು ಸಜ್ಜುಗೊಳಿಸಿ ಸೀಲಾಂಪುರದ ಮದೀನಾ ಮಸೀದಿಯ ಬಳಿ 24/7 ಅವಧಿಯ ಪ್ರತಿಭಟನಾ ಸ್ಥಳ ರೂಪಿಸಿದ್ದರು. ಕೇಂದ್ರ ಸರ್ಕಾರಕ್ಕೆ ಮುಜುಗರ ಉಂಟು ಮಾಡಲು ಅಮೆರಿಕ ಅಧ್ಯಕ್ಷರ ಭೇಟಿ ವೇಳೆ ರಾಷ್ಟ್ರ ರಾಜಧಾನಿಯಲ್ಲಿ ಕೋಮುಗಲಭೆ ನಡೆಸುವುದಕ್ಕಿಂತಲೂ ಮಿಗಿಲಾದ ಘಟನೆ ಇನ್ನೊಂದಿಲ್ಲ ಎಂದು ಎಣಿಸಿ ʼಚಕ್ಕಾ ಜಾಮ್ʼ ಏರ್ಪಡಿಸಿ ಹಿಂಸಾಚಾರ ಪ್ರಚೋದಿಸಲು ಆ ದಿನವನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು ಎಂದು ಪೊಲೀಸರು ತಿಳಿಸಿದ್ದರು.