ಪ್ರಮುಖ ಮಹಿಳಾ ಕುಸ್ತಿಪಟುಗಳು ಸಲ್ಲಿಸಿದ್ದ ಲೈಂಗಿಕ ಕಿರುಕುಳ ದೂರಿನ ಆಧಾರದ ಮೇಲೆ ಬಿಜೆಪಿ ಸಂಸದ ಮತ್ತು ಭಾರತೀಯ ಕುಸ್ತಿ ಒಕ್ಕೂಟದ (ಡಬ್ಲ್ಯುಎಫ್‌ಐ) ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಮಹಿಳೆಯರ ಘನತೆಗೆ ಧಕ್ಕೆ ತಂದ, ಹಿಂಬಾಲಿಸುವಿಕೆ, ಕಿರುಕುಳ ನೀಡಿದ ಅಪರಾಧಗಳಿಗಾಗಿ ಐಪಿಸಿ ಸೆಕ್ಷನ್‌ಗಳಡಿ ದೆಹಲಿ ಪೊಲೀಸರು ಗುರುವಾರ ಆರೋಪಟ್ಟಿ ಸಲ್ಲಿಸಿದ್ದಾರೆ.
ಸಿಂಗ್ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಕೋರಿ ಕುಸ್ತಿಪಟುಗಳು ದೆಹಲಿಯ ರೌಸ್ ಅವೆನ್ಯೂ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿರುವ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಈ ಹಿಂದೆ ಅರ್ಜಿ ಸಲ್ಲಿಸಿದ್ದರು. ರಾಷ್ಟ್ರ ರಾಜಧಾನಿಯ ಜಂತರ್ ಮಂತರ್‌ನಲ್ಲಿ ಸಿಂಗ್ ವಿರುದ್ಧ ಅವರು ಪ್ರತಿಭಟನೆ ನಡೆಸುತ್ತಿದ್ದ ಹೊತ್ತಿನಲ್ಲಿ ಆರೋಪಪಟ್ಟಿ ದಾಖಲಿಸಲು ಕ್ರಮ ಕೈಗೊಳ್ಳಲಾಗಿತ್ತು. ಈ ಹಿಂದೆ ಕುಸ್ತಿಪಟುಗಳು ನ್ಯಾಯಾಂಗದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕು ಮತ್ತು ನ್ಯಾಯಾಲಯ ತನಿಖೆಯ ಸ್ಥಿತಿಗತಿ ವರದಿ ಕೇಳಬೇಕು ಎಂದು ಒತ್ತಾಯಿಸಿದ್ದರು.
ಐಪಿಸಿ ಸೆಕ್ಷನ್ 354 (ಮಹಿಳೆಯರ ಘನತೆಗೆ ಧಕ್ಕೆ ತರುವುದು), 354 ಎ (ಲೈಂಗಿಕ ಸನ್ನೆಯ ಟೀಕೆ), 354 ಡಿ (ತಿಳಿಯದಂತೆ ಹಿಂಬಾಲಿಸುವುದು) ಮತ್ತು 506 (1) (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಅಪರಾಧಗಳಿಗೆ ಸಂಬಂಧಿಸಿದಂತೆ ಬ್ರಿಜ್ ಭೂಷಣ್ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗಿದೆ ಎಂದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಅತುಲ್ ಶ್ರೀವಾಸ್ತವ ಗುರುವಾರ ಬಾರ್ & ಬೆಂಚ್‌ಗೆ ದೃಢಪಡಿಸಿದ್ದಾರೆ.
ಆದರೆ, ಬ್ರಿಜ್ ಭೂಷಣ್ ವಿರುದ್ಧದ ಆರೋಪಗಳನ್ನು ಅಪ್ರಾಪ್ತೆ ಕುಸ್ತಿಪಟು ಹಿಂಪಡೆದಿರುವ ಹಿನ್ನೆಲೆಯಲ್ಲಿ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ (ಪೋಕ್ಸೊ ಕಾಯಿದೆ) ಅಡಿ ದಾಖಲಿಸಿರುವ ಪ್ರಕರಣವನ್ನು ರದ್ದುಗೊಳಿಸುವಂತೆ ಪೊಲೀಸರು ವರದಿ ಸಲ್ಲಿಸಿದ್ದಾರೆ.
ಸಿಂಗ್ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಕೋರಿ ಕುಸ್ತಿಪಟುಗಳು ಈ ಹಿಂದೆ ಸುಪ್ರೀಂ ಕೋರ್ಟ್‌ಗೆ ಕೂಡ ಅರ್ಜಿ ಸಲ್ಲಿಸಿದ್ದರು. ಎಫ್‌ಐಆರ್ ದಾಖಲಾಗಿದ್ದು ತನಿಖೆ ಪ್ರಗತಿಯಲ್ಲಿದೆ ಹಾಗೂ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗುತ್ತಿದೆ ಎಂದು ದೆಹಲಿ ಪೊಲೀಸರು ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದರು. ಇದನ್ನು ಪರಿಗಣಿಸಿ ಹಾಗೂ ತಾನು ಈ ಹಿಂದೆ ನಿರ್ದೇಶಿಸಿದ್ದಂತೆ ಕುಸ್ತಿಪಟುಗಳಿಗೆ ಭದ್ರತೆ ಒದಗಿಸಲಾಗಿದೆ ಎಂಬುದನ್ನು ಗಮನಿಸಿ ಸರ್ವೋಚ್ಚ ನ್ಯಾಯಾಲಯ ಪ್ರಕರಣವನ್ನು ಅಂತ್ಯಗೊಳಿಸಿತ್ತು.
ಪರಿಹಾರ ಅಗತ್ಯವಿದ್ದರೆ ಅರ್ಜಿದಾರರು ಸೂಕ್ತ ನ್ಯಾಯವ್ಯಾಪ್ತಿ ಇರುವ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಇಲ್ಲವೇ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಬಹುದು ಎಂದು ಆ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ತಿಳಿಸಿತ್ತು.