ದೆಹಲಿಯಲ್ಲಿ ವಾಯು ಮಾಲಿನ್ಯ ಹೆಚ್ಚಾಗುತ್ತಿರುವುದರಿಂದ ಅದನ್ನು ನಿಯಂತ್ರಿಸುವ ಸಂಬಂಧ ನೆರೆಹೊರೆಯ ಪ್ರದೇಶಗಳಿಂದ ಟ್ರಕ್‌ಗಳು ರಾಷ್ಟ್ರ ರಾಜಧಾನಿಗೆ ಪ್ರವೇಶ ಮಾಡುವುದಕ್ಕೆ ನಿರ್ಬಂಧ ವಿಧಿಸಿರುವ ತನ್ನ ಈ ಹಿಂದಿನ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆಯೇ ಎಂದು ಪರಿಶೀಲಿಸಲು ಹದಿಮೂರು ವಕೀಲರನ್ನು ಶುಕ್ರವಾರ ಸುಪ್ರೀಂ ಕೋರ್ಟ್ ಆಯುಕ್ತರನ್ನಾಗಿ (ಕಮಿಷನರ್‌ಗಳು) ನೇಮಿಸಿದೆ.
ದೆಹಲಿ ವಾಯು ಮಾಲಿನ್ಯ ಸಮಸ್ಯೆಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಅಭಯ್ ಶ್ರೀನಿವಾಸ್ ಓಕ ಮತ್ತು ಅಗಸ್ಟಿನ್ ಜಾರ್ಜ್ ಮಸೀಹ್ ಅವರ ವಿಭಾಗೀಯ ಪೀಠ ನಡೆಸಿತು.
ದೆಹಲಿಯ ನೆರೆಹೊರೆಯಿಂದ ರಾಜಧಾನಿಗೆ ಪ್ರವೇಶಿಸುವ ಡೀಸೆಲ್‌ನಿಂದ ಚಾಲನೆಯಾಗುವ ಮಾಲಿನ್ಯಕಾರಕ ಟ್ರಕ್‌ಗಳ ಪ್ರವೇಶವನ್ನು ನಿರ್ಬಂಧಿಸಲು ಸೂಕ್ತ ಪರಿಶೀಲನಾ ವ್ಯವಸ್ಥೆ ಜಾರಿಗೊಳಿಸಿರುವ ಕುರಿತು ಇಂದು ನ್ಯಾಯಾಲಯವು ಕಳಕಳಿ ವ್ಯಕ್ತಪಡಿಸಿತು.
ದೆಹಲಿ ಪ್ರವೇಶಕ್ಕೆ ನಿರ್ಬಂಧ ವಿಧಿಸುವ 113 ಪ್ರವೇಶ ಪಾಯಿಂಟ್‌ಗಳನ್ನು ಗುರುತಿಸಲಾಗಿದೆ. ಈ ಪೈಕಿ 13 ಪಾಯಿಂಟ್‌ಗಳಲ್ಲಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು.
13 ಪಾಯಿಂಟ್‌ಗಳಲ್ಲಿ ಪರಿಶೀಲನೆ ನಡೆಸಲು ಮತ್ತು ಟ್ರಕ್ ನಿರ್ಬಂಧವನ್ನು ಯಥಾವತ್ತಾಗಿ ಜಾರಿಗೊಳಿಸಲಾಗಿದೆಯೇ ಎಂಬುದನ್ನು ಪರಿಶೀಲಿಸಲು ಸ್ವಯಂಪ್ರೇರಿತವಾಗಿ ಮುಂದೆ ಬಂದಿರುವ 13 ವಕೀಲರನ್ನು ವಕೀಲ ಕಮಿಷನರ್‌ಗಳನ್ನಾಗಿ ನ್ಯಾಯಾಲಯ ನೇಮಿಸಿತು.
“ವಕೀಲ ಕಮಿಷನರ್‌ಗಳು ಫೋಟೊಗಳನ್ನು ತೆಗೆಯಲು ಮತ್ತು ನಾಳೆ ವಿಸ್ತೃತವಾದ ವರದಿ ಸಲ್ಲಿಸಲು ಅನುಮತಿಸಲಾಗಿದೆ. ಈ ವಿಚಾರವನ್ನು ಸೋಮವಾರದ ವಿಚಾರಣೆಯಲ್ಲಿ ಪರಿಗಣಿಸಲಾಗುವುದು” ಎಂದು ಪೀಠ ಹೇಳಿದೆ.
ಅಲ್ಲದೇ, ಎಲ್ಲಾ ಪ್ರವೇಶ ಪಾಯಿಂಟ್‌ಗಳಲ್ಲಿ ನಿಗಾ ಇಡುವ ಸಂಬಂಧ ದೆಹಲಿ ಸರ್ಕಾರವು ಕಡ್ಡಾಯವಾಗಿ ಕ್ರಮಕೈಗೊಳ್ಳಬೇಕು. 13 ಪ್ರವೇಶ ಪಾಯಿಂಟ್‌ಗಳಿಗೆ ಸೀಮಿತವಾಗಬಾರದು ಎಂದೂ ಆದೇಶದಲ್ಲಿ ಹೇಳಿದೆ.