ಸುಪ್ರೀಂ ಕೋರ್ಟ್‌ನಿಂದ ಜಾಮೀನು ಅರ್ಜಿ ಹಿಂಪಡೆದ ದೆಹಲಿ ಗಲಭೆ ಆರೋಪಿ ಸಲೀಂ ಮಲಿಕ್

ಉದ್ರೇಕಕಾರಿ ಭಾಷಣ ಮಾಡಲಾದ ಚಾಂದ್ ಬಾಗ್ ಪ್ರತಿಭಟನೆಯ ಸಂಘಟಕರಾಗಿದ್ದ ಆರೋಪಕ್ಕೆ ಸಂಬಂಧಿಸಿದಂತೆ 2022ರ ಅಕ್ಟೋಬರ್‌ನಲ್ಲಿ ಮಲಿಕ್ ಅವರ ಜಾಮೀನು ಅರ್ಜಿಯನ್ನು ವಿಚಾರಣಾ ನ್ಯಾಯಾಲಯ ತಿರಸ್ಕರಿಸಿತ್ತು.
ಸುಪ್ರೀಂ ಕೋರ್ಟ್‌ನಿಂದ ಜಾಮೀನು ಅರ್ಜಿ ಹಿಂಪಡೆದ ದೆಹಲಿ ಗಲಭೆ ಆರೋಪಿ ಸಲೀಂ ಮಲಿಕ್

ಫೆಬ್ರವರಿ 2020ರ ದೆಹಲಿ ಗಲಭೆ ಪಿತೂರಿ ಪ್ರಕರಣದ ಆರೋಪಿ ಸಲೀಂ ಮಲಿಕ್ ಅವರು ಶುಕ್ರವಾರ ಸುಪ್ರೀಂ ಕೋರ್ಟ್‌ನಿಂದ ತಮ್ಮ ಜಾಮೀನು ಅರ್ಜಿಯನ್ನು ಹಿಂತೆಗೆದುಕೊಂಡರು [ಸಲೀಂ ಮಲಿಕ್ ಅಲಿಯಾಸ್‌ ಮುನ್ನಾ ಮತ್ತು ದೆಹಲಿ ಸರ್ಕಾರ ನಡುವಣ ಪ್ರಕರಣ].

ನ್ಯಾಯಮೂರ್ತಿಗಳಾದ ಬೇಲಾ ಎಂ ತ್ರಿವೇದಿ ಮತ್ತು ಪಂಕಜ್ ಮಿತ್ತಲ್‌ ಅವರಿದ್ದ ಪೀಠ ಜಾಮೀನು ಹಿಂಪಡೆಯಲು ಅವಕಾಶ ನೀಡಿತು.

ಗಲಭೆಯಂತಹ ಹಿಂಸಾಚಾರಕ್ಕೆ ಇಳಿಯಲು ಮತ್ತು ರಾಷ್ಟ್ರ ರಾಜಧಾನಿಯನ್ನು ದಹಿಸುವ ಕುರಿತಂತೆ ಬಹಿರಂಗವಾಗಿ ಚರ್ಚಿಸಿದ ಸಭೆಗಳಲ್ಲಿ ಮಲಿಕ್ ಭಾಗವಹಿಸಿದ್ದನ್ನು ಗಮನಿಸಿದ ದೆಹಲಿ ಹೈಕೋರ್ಟ್ ಏಪ್ರಿಲ್ 22ರಂದು ಮಲಿಕ್ ಅವರಿಗೆ ಜಾಮೀನು ನಿರಾಕರಿಸಿತ್ತು.

ಜೂನ್ 25, 2020ರಂದು ದೆಹಲಿ ಪೊಲೀಸರು ಮಲಿಕ್ ಅವರನ್ನು ಬಂಧಿಸಿದ್ದರು.  ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಮತ್ತು ಯುಎಪಿಎ ಸೆಕ್ಷನ್‌ಗಳ  ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ವಿಚಾರಣಾ ನ್ಯಾಯಾಲಯ 2022ರ ಅಕ್ಟೋಬರ್‌ನಲ್ಲಿ ಮಲಿಕ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಮಲೀಕ್‌ "ಪಿತೂರಿ ಸಭೆಗಳಲ್ಲಿ" ಭಾಗವಹಿಸಿದ್ದರು ಎಂದು ನ್ಯಾಯಾಲಯ ಆಗ ನುಡಿದಿತ್ತು.

ಈ ಆದೇಶವನ್ನು ಹೈಕೋರ್ಟ್‌ ಎತ್ತಿ ಹಿಡಿದಿದ್ದು ಹಿಂಸಾತ್ಮಕವಾದಾಗ ಮತ್ತು ಆಸ್ತಿಪಾಸ್ತಿಗೆ ಹಾನಿಯುಂಟು ಮಾಡಿದಾಗ ಮತ್ತು ಜೀವಕ್ಕೆ ಕುತ್ತು ತಂದರೆ ಸಾರ್ವಜನಿಕ ಪ್ರತಿಭಟನೆ ಎಂಬುದು ಮೂಲಭೂತ ಹಕ್ಕಿನ ಪರಿಧಿಯನ್ನು ಮೀರಲಿದ್ದು ಶಿಕ್ಷಾರ್ಹ ಅಪರಾಧವಾಗುತ್ತದೆ ಎಂದಿತ್ತು.

ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ವಿಚಾರಣೆಯ ಸಮಯದಲ್ಲಿ ನ್ಯಾಯಮೂರ್ತಿ ತ್ರಿವೇದಿ ಅವರು ಕೆಳ ನ್ಯಾಯಾಲಯಗಳಲ್ಲಿ ಬಂದ ತೀರ್ಪುಗಳಲ್ಲಿ ಮಧ್ಯಪ್ರವೇಶಿಸುವ ಅಗತ್ಯವಿಲ್ಲ ಎಂದಿದ್ದರು.

ನಂತರ ಮಲಿಕ್ ತಮ್ಮ ಅರ್ಜಿ ಹಿಂಪಡೆಯಲು ಮುಂದಾದರು. ತಮ್ಮ ಜಾಮೀನು ಅರ್ಜಿ ಹಿಂಪಡೆಯುತ್ತಿರುವ ಆರೋಪಿಗಳಲ್ಲಿ ಮಲಿಕ್‌ ಮೂರನೆಯವರು.

2018 ರ ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣದ ಆರೋಪಿ ಪ್ರೊ. ಹನಿ ಬಾಬು ಅವರು ಇತ್ತೀಚೆಗೆ ಪರಿಸ್ಥಿತಿಯ ಬದಲಾವಣೆ ಉಲ್ಲೇಖಿಸಿ ಜಾಮೀನು ಅರ್ಜಿ ಹಿಂಪಡೆದಿದ್ದರು. ಅದಕ್ಕೂ ಮೊದಲು, ದೆಹಲಿ ಗಲಭೆ ಪ್ರಕರಣದ ಮತ್ತೊಬ್ಬ ಆರೋಪಿ ಉಮರ್ ಖಾಲಿದ್ ಕೂಡ ಇದೇ ಕಾರಣ ಉಲ್ಲೇಖಿಸಿ ಜಾಮೀನು ಅರ್ಜಿ ಹಿಂಪಡೆದಿದ್ದರು.

Related Stories

No stories found.
Kannada Bar & Bench
kannada.barandbench.com