ತನ್ಹಾ ಇತರರಿಗೆ ಜಾಮೀನು ನಿರಾಕರಿಸಲು ಕೋರಿರುವ ಅರ್ಜಿಯಲ್ಲಿ ಸುಪ್ರೀಂ ಎದುರು ದೆಹಲಿ ಪೊಲೀಸರು ಬಿಚ್ಚಿಟ್ಟ ಆರು ಅಂಶಗಳು

ಆರೋಪ ಪಟ್ಟಿಯಲ್ಲಿ ಸಂಗ್ರಹಿಸಿದ ಮತ್ತು ವಿಶದೀಕರಿಸಿದ ಸಾಕ್ಷ್ಯಗಳಿಗಿಂತಲೂ ದೆಹಲಿ ಹೈಕೋರ್ಟ್ ನೀಡಿದ ತೀರ್ಪು ಸಾಮಾಜಿಕ ಮಾಧ್ಯಮಗಳ ಕಥನದ ಮೇಲೆ ಹೆಚ್ಚು ಆಧರಿತವಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
Delhi Police
Delhi Police
Published on

ದೆಹಲಿ ಗಲಭೆಗೆ ಸಂಬಂಧಿಸಿದಂತೆ ವಿದ್ಯಾರ್ಥಿ ಹೋರಾಟಗಾರರಾದ ಆಸಿಫ್‌ ಇಕ್ಬಾಲ್‌ ತನ್ಹಾ, ದೇವಾಂಗನಾ ಕಲಿತಾ ಹಾಗೂ ನತಾಶಾ ನರ್ವಾಲ್‌ ಅವರಿಗೆ ದೆಹಲಿ ಹೈಕೋರ್ಟ್‌ ನೀಡಿರುವ ಜಾಮೀನು ಪ್ರಶ್ನಿಸಿ ಪೊಲೀಸರು ಬುಧವಾರ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದಾರೆ. ಜಾಮೀನು ಏಕೆ ನಿರಾಕರಿಸಬೇಕು ಎಂಬುದಕ್ಕೆ ಅವರು ನೀಡಿರುವ ಆರು ಪ್ರಮುಖ ಕಾರಣಗಳು ಇಲ್ಲಿವೆ.

ಪ್ರತಿಭಟನೆ ಕೇವಲ ಅಭಿಪ್ರಾಯ ಭೇದ ಎಂದಿದೆ ಹೈಕೋರ್ಟ್‌

ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆ ಮತ್ತು ಅಭಿಪ್ರಾಯಭೇದ ಹೊಂದಿದವರನ್ನು ಹತ್ತಿಕ್ಕುವ ಯತ್ನ ಎಂದು ಹೈಕೋರ್ಟ್‌ ಕಟು ನುಡಿಗಳಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದೆ. ಆದರೆ ಇಂತಹ ತೀರ್ಮಾನಕ್ಕೆ ಬರಲು ಅದಕ್ಕೆ ಯಾವುದೇ ಆಧಾರ ಇಲ್ಲ ಮತ್ತು ಆರೋಪ ಪಟ್ಟಿಯಲ್ಲಿ ಸಂಗ್ರಹಿಸಿದ ಮತ್ತು ವಿಶದೀಕರಿಸಿದ ಸಾಕ್ಷ್ಯಗಳಿಗಿಂತಲೂ ಅದು ಸಾಮಾಜಿಕ ಮಾಧ್ಯಮಗಳ ಕಥನದ ಮೇಲೆ ಹೆಚ್ಚು ಅವಲಂಬಿತವಾಗಿದೆ.

ಪೂರ್ವಕಲ್ಪಿತ ಭ್ರಮೆಯ ಮೇಲೆ ಪ್ರಕರಣ ನಿರ್ಧರಿಸಲಾಗಿದೆ

ಇದೊಂದು ವಿದ್ಯಾರ್ಥಿಗಳ ಪ್ರತಿಭಟನೆ ಎಂಬುದಾಗಿ ಹೈಕೋರ್ಟ್ ಈ ಪ್ರಕರಣವನ್ನು ಮೊದಲೇ ಕಲ್ಪಿಸಿಕೊಂಡ ಮತ್ತು ಸಂಪೂರ್ಣವಾಗಿ ತಪ್ಪಾದ ಭ್ರಮೆಯ ಆಧಾರದಲ್ಲಿ ನಿರ್ಧರಿಸಿದೆ. ದೊಡ್ಡ ಪ್ರಮಾಣದಲ್ಲಿ ಗಲಭೆ ಸೃಷ್ಟಿಸಲು ಆರೋಪಿಗಳು ಸಂಚು ರೂಪಿಸಿದ್ದರು ಎಂಬ ಸಾಕ್ಷ್ಯಗಳು ಮತ್ತು ಹೇಳಿಕೆಗಳ ಬಗ್ಗೆ ಹೈಕೋರ್ಟ್‌ ದೃಷ್ಟಿಹೀನವಾಗಿದೆ ಮತ್ತು ಸಾಕ್ಷ್ಯಾಧಾರಗಳನ್ನು ತೊರೆದು ತೀರ್ಪು ನೀಡಿದೆ.

Also Read
ಯುವಕ, ಯುವತಿಯರನ್ನು ಪ್ರತಿಭಟಿಸಿದಂತೆ ಹೆದರಿಸುವಲ್ಲಿ ಸರ್ಕಾರಿ ಸಂಸ್ಥೆಗಳು ಯಶಸ್ವಿಯಾಗಿವೆ: ನ್ಯಾ. ದೀಪಕ್‌ ಗುಪ್ತ

ಭಯೋತ್ಪಾದಕ ಚಟುವಟಿಕೆ ಬಗ್ಗೆ ಪುರಾವೆಗಳಿದ್ದರೂ ಹೈಕೋರ್ಟ್‌ ಪರಿಗಣಿಸಿಲ್ಲ

ಪ್ರತಿವಾದಿಗಳು ಮತ್ತು ಇತರ ಸಂಚುಕೋರರಿಗೆ ಜಾಮೀನು ನೀಡುವಾಗ ಹೈಕೋರ್ಟ್‌ ಸಾಕ್ಷ್ಯಗಳ ಕುರಿತು ಸೂಕ್ತ ಪರಾಮರ್ಶೆ ಅಥವಾ ವಿಶ್ಲೇಷಣೆ ನಡೆಸಿಲ್ಲ ಮತ್ತು ಅದರ ಪರಿಶೀಲನೆ ಅಪ್ರಸ್ತುತ ರೀತಿಯಲ್ಲಿದೆ. ಪ್ರತಿವಾದಿಗಳು ಭಯೋತ್ಪಾದಕ ಚಟುವಟಿಕೆಯಲ್ಲಿ ತೊಡಗಿದ್ದರು ಎಂಬುದಕ್ಕೆ ಸಾಕ್ಷ್ಯಾಧಾರಗಳಿದ್ದರೂ ತೀರ್ಪು ನೀಡುವಾಗ ಹೈಕೋರ್ಟ್‌ ಸ್ವತಃ ದಿಕ್ಕು ತಪ್ಪಿದೆ. ಯುಎಪಿಎ ಅಡಿ ಯಾವುದೇ ಆರೋಪ ಮಾಡಲಾಗಿಲ್ಲ ಎಂಬ ನಿರ್ಧಾರಕ್ಕೆ ಬರುವಾಗ ಅದು ಹೆಚ್ಚಿನ ಪರಿಶೀಲನೆ ನಡೆಸದೆ ದೋಷಯುಕ್ತ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆ.

ಮೂವರು ಆರೋಪಿಗಳಿಗೂ ಒಂದೇ ವಿಧಾನ ಅನ್ವಯ

ಹೈಕೋರ್ಟ್‌ ಜಾಮೀನು ನೀಡುವಾಗ ಎಲ್ಲಾ ಮೂವರು ಆರೋಪಿಗಳಿಗೂ ಒಂದೇ ವಿಧಾನ ಅನ್ವಯಿಸಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

Also Read
ಕ್ಷುಲ್ಲಕ ಕಾರಣಕ್ಕೆ ಯುಎಪಿಎ ಕಾಯಿದೆ ಬಳಸುವಂತಿಲ್ಲ, ಶಾಂತಿಯುತ ಪ್ರತಿಭಟನೆ ಕಾನೂನುಬಾಹಿರವಲ್ಲ: ದೆಹಲಿ ಹೈಕೋರ್ಟ್

ಯುಎಪಿಎ ಕುರಿತ ಹೈಕೋರ್ಟ್‌ ವ್ಯಾಖ್ಯಾನ ಬಹುದೊಡ್ಡ ಪರಿಣಾಮ ಬೀರುತ್ತದೆ

ಇದೊಂದು ಪ್ರತಿಭಟನೆಯ ಪ್ರಕರಣವಾಗಿದ್ದು ಸರ್ಕಾರ ಅಭಿಪ್ರಾಯ ಭೇದ ಹೊಂದಿರುವವರನ್ನು ಹತ್ತಿಕ್ಕುವ ಯತ್ನ ಎಂದು ಸ್ಥಾಪಿಸುವ ಅನ್ವೇಷಣೆಯಲ್ಲಿ ಯುಎಪಿಎ ನಿಬಂಧನೆಗಳನ್ನು ಅದರಲ್ಲಿಯೂ ವಿಶೇಷವಾಗಿ ಕಾಯಿದೆಯ ಸೆಕ್ಷನ್‌ 15ರಡಿಯ ಭಯೋತ್ಪಾದನೆಯನ್ನು ವ್ಯಾಖ್ಯಾನಿಸಲಾಗಿದೆ.

ಇದನ್ನು ಆಧರಿಸಿ ಜಾಮೀನು ನೀಡುವುದು ಅಪ್ರಸ್ತುತವಾಗುತ್ತದೆ. ಯುಎಪಿಎ ಕುರಿತ ಈ ರೀತಿಯ ವ್ಯಾಖ್ಯಾನ ಎನ್‌ಐಎ ಮತ್ತಿತರ ತನಿಖಾ ಸಂಸ್ಥೆಗಳು ನಡೆಸುವ ಪ್ರಕರಣಗಳ ಮೇಲೆ ಬಹುದೊಡ್ಡ ಪರಿಣಾಮ ಬೀರುತ್ತದೆ.

ಹೈಕೋರ್ಟ್ ನಡೆಸಿದ್ದು ಕಿರು ವಿಚಾರಣೆ

ಎನ್‌ಐಎ ಮತ್ತು ಜಹೂರ್‌ ಅಹ್ಮದ್‌ ಶಾ ವತಾಲಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ನೀಡಿದ ತೀರ್ಪನ್ನು ಗ್ರಹಿಸಲು ಹೈಕೋರ್ಟ್‌ ವಿಫಲವಾಗಿದೆ. ಅಲ್ಲದೆ ಹೈಕೋರ್ಟ್‌ ಕಿರು ವಿಚಾರಣೆಯನ್ನು ಮಾತ್ರ ನಡೆಸಿದೆ ಎಂದು ದೆಹಲಿ ಪೊಲೀಸರು ವಾದಿಸಿದ್ದಾರೆ.

Kannada Bar & Bench
kannada.barandbench.com