ದೆಹಲಿ ಗಲಭೆಗೆ ಸಂಬಂಧಿಸಿದಂತೆ ಯುಎಪಿಎ ಕಾಯಿದೆಯಡಿ ಹೂಡಲಾಗಿದ್ದ ಪ್ರಕರಣದಲ್ಲಿ ಜಾಮೀನು ನಿರಾಕರಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ತ್ವರಿತವಾಗಿ ವಿಚಾರಣೆ ನಡೆಸುವಂತೆ ಹೋರಾಟಗಾರ ಶಿಫಾ ಉರ್ ರೆಹಮಾನ್ ಸಲ್ಲಿಸಿದ್ದ ಮನವಿಯನ್ನು ದೆಹಲಿ ಹೈಕೋರ್ಟ್‌ಈಚೆಗೆ ತಿರಸ್ಕರಿಸಿದೆ. [ಶಿಫಾ ಉರ್ ರೆಹಮಾನ್ ಮತ್ತು ದೆಹಲಿ ಸರ್ಕಾರ ನಡುವಣ ಪ್ರಕರಣ].
ಪ್ರಕರಣ ನವೆಂಬರ್ 25ರಂದು ವಿಚಾರಣೆಗೆ ನಿಗದಿಯಾಗಿರುವುದರಿಂದ ತ್ವರಿತ ವಿಚಾರಣೆ ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿಗಳಾದ ನವೀನ್ ಚಾವ್ಲಾ ಮತ್ತು ಶಾಲಿಂದರ್ ಕೌರ್ ಅವರಿದ್ದ ಪೀಠ ತಿಳಿಸಿತು.
ಇದೇ ಪ್ರಕರಣದಲ್ಲಿ ಆರೋಪಿಗಳಾಗಿರುವ ಉಳಿದ ವಿದ್ಯಾರ್ಥಿ ಹೋರಾಟಗಾರರಾದ ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್ ಅವರು ಸಲ್ಲಿಸಿರುವ ಮೇಲ್ಮನವಿಯೊಟ್ಟಿಗೆ ಈ ಅರ್ಜಿಯನ್ನೂ ಸೇರಿಸಲಾಗಿದ್ದು ಅವರ ಪ್ರಕರಣಗಳು ಕೂಡ ನವೆಂಬರ್ 25ರಂದು ವಿಚಾರಣೆಗೆ ಬರಲಿವೆ.
ಶಿಫಾ ಅವರು ಜಾಮಿಯಾ ಮಿಲಿಯಾ ಇಸ್ಲಾಮಿಯಾ (ಎಎಜೆಎಂಐ) ನ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾಗಿದ್ದರು. ಪೌತ್ವ ತಿದ್ದುಪಡಿ ಕಾಯಿದೆ (ಸಿಎಎ) ವಿರುದ್ಧದ ಪ್ರತಿಭಟನೆ ವೇಳೆ ಕೋಮು ಗಲಭೆಗೆ ಕುಮ್ಮಕ್ಕು ನೀಡಿದ್ದರು ಎಂಬ ಆರೋಪದಡಿ ಅವರನ್ನು ಏಪ್ರಿಲ್ 2020 ರಲ್ಲಿ ದೆಹಲಿ ಪೊಲೀಸರು ಬಂಧಿಸಿದ್ದರು.
ಸೆಷನ್ಸ್ ನ್ಯಾಯಾಧೀಶರೆದುರು ಶಿಫಾ ಅವರ ಜಾಮೀನು ಅರ್ಜಿಯ ವಿಚಾರಣೆ ನಡೆದಾಗ, ಶಾಂತಿಯುತವಾಗಿ ಪ್ರತಿಭಟಿಸುವ ಹಕ್ಕು ಮೂಲಭೂತ ಹಕ್ಕಾಗಿದ್ದು ಶಿಫಾ ಅವರು ಪ್ರತಿಭಟನಕಾರರಾಗಿದ್ದರೇ ವಿನಾ ಗಲಭೆಗೆ ಕುಮ್ಮಕ್ಕು ನೀಡಿರಲಿಲ್ಲ ಎಂದು ಅವರ ಪರ ವಕೀಲರು ವಾದಿಸಿದ್ದರು.