ದೆಹಲಿ ಗಲಭೆ ದ್ವೇಷ ಭಾಷಣ: ವಕೀಲರ ʼಕರ್ತವ್ಯಲೋಪದ ವರ್ತನೆʼಗೆ ದೆಹಲಿ ಹೈಕೋರ್ಟ್ ಅಸಮಾಧಾನ

ವಕೀಲರು ವಿಚಾರಣಾ ಶುಲ್ಕ ಸಲ್ಲಿಸಲು ವಿಫಲರಾಗಿರುವುದರಿಂದ ಮತ್ತು ಸೂಕ್ತ ವಿಳಾಸ ನೀಡದ ಕಾರಣ ಪ್ರಮುಖ ರಾಜಕಾರಣಿಗಳು ಸೇರಿದಂತೆ ಪ್ರತಿವಾದಿಗಳಿಗೆ ನೋಟಿಸ್ ನೀಡಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಹೇಳಿದೆ.
ದೆಹಲಿ ಗಲಭೆ ದ್ವೇಷ ಭಾಷಣ: ವಕೀಲರ ʼಕರ್ತವ್ಯಲೋಪದ ವರ್ತನೆʼಗೆ ದೆಹಲಿ ಹೈಕೋರ್ಟ್ ಅಸಮಾಧಾನ
A1

ದೆಹಲಿ ಗಲಭೆಯ ಸಂದರ್ಭದಲ್ಲಿ ದ್ವೇಷಪೂರಿತ ಭಾಷಣ ಮಾಡಿದ ಆರೋಪದ ಮೇಲೆ ರಾಜಕಾರಣಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಕೋರಿರುವ ಅರ್ಜಿಗಳು ದೋಷಪೂರಿತವಾಗಿರುವುದಕ್ಕೆ ದೆಹಲಿ ಹೈಕೋರ್ಟ್‌ ಮಂಗಳವಾರ ಅಸಮಾಧಾನ ವ್ಯಕ್ತಪಡಿಸಿದೆ [ಶೇಕ್‌ ಮುಜತಬಾ ಫಾರೂಕ್‌ ಇನ್ನಿತರರು ಹಾಗೂ ಕೇಂದ್ರ ಸರ್ಕಾರ ನಡುವಣ ಪ್ರಕರಣ].

ಪ್ರಕರಣದಲ್ಲಿ ಹಲವಾರು ರಾಜಕಾರಣಿಗಳನ್ನು ಪ್ರತಿವಾದಿಯನ್ನಾಗಿ ಮಾಡಲು ನ್ಯಾಯಾಲಯ ನೋಟಿಸ್ ಜಾರಿ ಮಾಡಿದ್ದರೂ, ವಕೀಲರು ಇತ್ತ ವಿಚಾರಣಾ ಶುಲ್ಕವನ್ನೂ ಸಲ್ಲಿಸದೆ ಅತ್ತ ಸೂಕ್ತ ವಿಳಾಸವನ್ನೂ ನೀಡದೆ ಇರುವ ಹಿನ್ನೆಲೆಯಲ್ಲಿ ರಾಜಕಾರಣಿಗಳಿಗೆ ನೋಟಿಸ್‌ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿಗಳಾದ ಸಿದ್ಧಾರ್ಥ್ ಮೃದುಲ್ ಮತ್ತು ರಜನೀಶ್ ಭಟ್ನಾಗರ್ ಅವರಿದ್ದ ಪೀಠ ತಿಳಿಸಿತು.

ಕೇಂದ್ರ ಸಚಿವ ಅನುರಾಗ್ ಠಾಕೂರ್, ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸೇರಿದಂತೆ ಹಲವರಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ನೋಟಿಸ್ ಜಾರಿ ಮಾಡಲಾಗಿತ್ತು.

Also Read
ದೆಹಲಿ ಗಲಭೆ: ರಾಜಕಾರಣಿಗಳು ಹಾಗೂ ಬಾಂಬೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗೆ ದೆಹಲಿ ಹೈಕೋರ್ಟ್ ನೋಟಿಸ್ [ಚುಟುಕು]

ವಕೀಲರು ಪ್ರಕರಣದಲ್ಲಿ ಅವಸರ ತೋರುತ್ತಿಲ್ಲ. ಅರ್ಜಿಗಳಲ್ಲಿ ಗಂಭೀರತೆ ಇಲ್ಲ. ಪ್ರಕರಣದಲ್ಲಿ 20ಕ್ಕೂ ಹೆಚ್ಚು ಜನರನ್ನು ಪ್ರತಿವಾದಿಗಳನ್ನಾಗಿ ಮಾಡಲು ʼಲಾಯರ್ಸ್‌ ವಾಯ್ಸ್‌ʼ ಸಂಘಟನೆ ಕೋರಿದ್ದರೂ ಉಮರ್ ಖಾಲಿದ್, ಮೌಲಾನಾ ತೌಕಿರ್ ರಾಜಾ ಹಾಗೂ ಬಾಂಬೆ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಬಿ ಜಿ ಕೋಲ್ಸೆ ಪಾಟೀಲ್‌ ಸೇರಿದಂತೆ ಕನಿಷ್ಠ ಒಂಬತ್ತು ಮಂದಿಯ ಸೂಕ್ತ ವಿಳಾಸ ನೀಡಲು ವಕೀಲರು ವಿಫಲರಾಗಿದ್ದಾರೆ ಎಂದು ನ್ಯಾಯಾಲಯ ಅತೃಪ್ತಿ ವ್ಯಕ್ತಪಡಿಸಿತು. ಆದ್ದರಿಂದ ಎರಡು ದಿನದೊಳಗೆ ಸೂಕ್ತ ವಿಳಾಸ ನೀಡಬೇಕು ಇಲ್ಲವೇ ಪ್ರತಿವಾದಿಗಳ ಪಟ್ಟಿಯಿಂದ ಅವರ ಹೆಸರನ್ನು ತೆಗೆದುಹಾಕಬೇಕು ಎಂದು ಲಾಯರ್ಸ್‌ ವಾಯ್ಸ್‌ ಸಂಘಟನೆಗೆ ನ್ಯಾಯಾಲಯ ಸೂಚಿಸಿತು.

“ನಿಮ್ಮ ಅರ್ಜಿಯಲ್ಲಿ ಪಕ್ಷಕಾರರನ್ನಾಗಿ ಮಾಡಿದ ವ್ಯಕ್ತಿಗಳಲ್ಲಿ ಒಬ್ಬರು ನಿವೃತ್ತ ನ್ಯಾಯಮೂರ್ತಿಗಳಿದ್ದಾರೆ. ಅವರ ವಿಳಾಸ ನಿಮಗೆ ದೊರೆಯುತ್ತಿಲ್ಲವೇ? ಅವರ ವಿಳಾಸ ಒದಗಿಸಲು ಎರಡು ದಿನ ಸಮಯ ನೀಡುತ್ತೇವೆ ಆಗಲೂ ನಿಮಗೆ ಸಾಧ್ಯವಾಗದಿದ್ದರೆ, ಅವರ ಹೆಸರುಗಳನ್ನು ಜ್ಞಾಪನಾ ಪತ್ರದಿಂದ (ಮೆಮೊ) ತೆಗೆದುಹಾಕಿ” ಎಂದು ನ್ಯಾಯಾಧೀಶರು ಖಡಕ್‌ ಎಚ್ಚರಿಕೆ ನೀಡಿದರು.

ಅರ್ಜಿದಾರರಾದ ಶೇಖ್‌ ಮುಜತಾಬಾ ಫಾರೂಕ್‌ ಅವರ ಒತ್ತಾಯದ ಮೇರೆಗೆ ಮೂರು ತಿಂಗಳೊಳಗೆ ಪ್ರಕರಣವನ್ನು ಇತ್ಯರ್ಥಪಡಿಸುವಂತೆ ಹೈಕೋರ್ಟ್‌ಗೆ ಸೂಚಿಸಲಾಗಿದೆ. ಆದರೆ ಅವರು ವಿಚಾರಣಾ ಶುಲ್ಕವನ್ನೇ ಕಟ್ಟಿಲ್ಲ ಎಂದು ಅರ್ಜಿದಾರರ ಪರ ವಕೀಲರಿಗೆ ಪೀಠ ತಿಳಿಸಿತು. ಪ್ರಕರಣದ ವಿಚಾರಣೆ ಏಪ್ರಿಲ್‌ 29ಕ್ಕೆ ನಿಗದಿಯಾಗಿದೆ.

Related Stories

No stories found.
Kannada Bar & Bench
kannada.barandbench.com