ದೆಹಲಿ ಗಲಭೆ ಹಿಂದೂ ವಿರೋಧಿಯಾಗಿರಲಿಲ್ಲ, ಎಲ್ಲಾ ಸಮುದಾಯಗಳ ಮೇಲೆ ಅದರ ಪರಿಣಾಮ ಉಂಟಾಯಿತು: ದೆಹಲಿ ನ್ಯಾಯಾಲಯ

"ವ್ಯಕ್ತಿಯ ಘನನತೆ ಎಂಬುದು ಅಮೂಲ್ಯ ಆಸ್ತಿ ಮತ್ತು ಸಂವಿಧಾನದ 21ನೇ ವಿಧಿಯಡಿ ದೊರೆತ ಹಕ್ಕಾಗಿದೆ," ಎಂದು ನ್ಯಾಯಾಲಯ ಇದೇ ವೇಳೆ ಪ್ರತಿಪಾದಿಸಿದೆ.
Delhi Riots
Delhi Riots

ಕೆಲವು ಸುದ್ದಿಗಳಲ್ಲಿ ಬಿಂಬಿತವಾದಂತೆ 2020ರ ಫೆಬ್ರವರಿಯಲ್ಲಿ ನಡೆದ ದೆಹಲಿ ಗಲಭೆ ಹಿಂದೂ ವಿರೋಧಿಯಾಗಿರಲಿಲ್ಲ. ಎಲ್ಲಾ ಸಮುದಾಯಗಳ ಮೇಲೆ ಇದರ ಪರಿಣಾಮ ಉಂಟಾಯಿತು ಎಂದು ದೆಹಲಿಯ ನ್ಯಾಯಾಲಯವೊಂದು ಉಮರ್‌ ಖಾಲಿದ್‌ ಮತ್ತು ಸರ್ಕಾರದ ನಡುವಣ ಪ್ರಕರಣದಲ್ಲಿ ಇತ್ತೀಚೆಗೆ ತಿಳಿಸಿದೆ.

ಹಿಂದೂ ವಿರೋಧಿ ದೆಹಲಿ ಗಲಭೆ ಎಂದು ಪ್ರಕಟವಾಗಿದ್ದ ಸುದ್ದಿಯೊಂದನ್ನು ಗಮನಿಸಿದ ನ್ಯಾಯಾಲಯ ಇಡೀ ದೆಹಲಿ ಗಲಭೆ ಹಿಂದೂ ವಿರೋಧಿ ಎಂದು ಚಿತ್ರಿತವಾಗಿದ್ದರೂ ಅದು ಆ ಪ್ರಕರಣವಾಗಿರಲಿಲ್ಲ ಎಂದು ಕಡ್ಕಡ್‌ಡೂಮ ಮುಖ್ಯ ಮೆಟ್ರೊಪಾಲಿಟನ್‌ ನ್ಯಾಯಾಧೀಶ ದಿನೇಶ್‌ ಶರ್ಮ ಅಭಿಪ್ರಾಯಪಟ್ಟಿದ್ದಾರೆ. ದೆಹಲಿ ಗಲಭೆ ಪ್ರಕರಣವೊಂದರ ಆರೋಪ ಪಟ್ಟಿಯ ಪ್ರತಿಯನ್ನು ತನಗೆ ಒದಗಿಸುವ ಮೊದಲೇ ಮಾಧ್ಯಮಗಳಿಗೆ ಸೋರಿಕೆ ಮಾಡಲಾಗಿತ್ತು ಎಂದು ಆಕ್ಷೇಪ ವ್ಯಕ್ತಪಡಿಸಿ ಉಮರ್‌ ಖಾಲಿದ್‌ ಅವರು ಸಲ್ಲಿಸಿದ ಅರ್ಜಿಯನ್ನು ನ್ಯಾಯಾಲಯ ಆಲಿಸಿತು. ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಗೆ ಪ್ರಚೋದನೆ ನೀಡಿರುವುದಾಗಿ ತಮ್ಮ ವಿರುದ್ಧ ಮಾಧ್ಯಮಗಳು ಆರೋಪ ಮಾಡಿವೆ ಎಂದು ಅವರು ಅಳಲು ತೋಡಿಕೊಂಡಿದ್ದರು. ಅರ್ಜಿಯನ್ನು ವಿಲೇವಾರಿ ಮಾಡಿದ ನ್ಯಾಯಾಲಯ ಮಾಧ್ಯಮ ವಿಚಾರಣೆಯನ್ನು ಗಮನಿಸಿತಾದರೂ ಈ ಕುರಿತಂತೆ ಯಾವುದೇ ನಿರ್ದೇಶನ ನೀಡಲು ಮುಂದಾಗಲಿಲ್ಲ. ಬದಲಿಗೆ ಮಾಧ್ಯಮಗಳು ಸ್ವಯಂ ನಿಯಂತ್ರಣದಿಂದ ವರದಿ ಮಾಡುವುದಕ್ಕೆ ಒತ್ತು ನೀಡಿತು.

Also Read
ದೆಹಲಿ ಹಿಂಸಾಚಾರ ಪ್ರಕರಣ: ಅ.22ರವರೆಗೆ ಉಮರ್ ಖಾಲಿದ್ ರನ್ನು‌ ನ್ಯಾಯಾಂಗ ಬಂಧನಕ್ಕೆ ನೀಡಿದ ದೆಹಲಿ ನ್ಯಾಯಾಲಯ

ಕುತೂಹಲಕಾರಿ ಸಂಗತಿಯೆಂದರೆ, ಮಾಧ್ಯಮ ಸಂಸ್ಥೆಗಳು ಮತ್ತು ಟಿವಿ ವಾಹಿನಿಗಳ ವಿರುದ್ಧದ ದೂರು ಆಲಿಸಲು ಮತ್ತು ತ್ವರಿತವಾಗಿ ತೀರ್ಪು ನೀಡಲು 'ಮಾಧ್ಯಮ ನ್ಯಾಯಮಂಡಳಿ' ರಚಿಸಬೇಕು ಎಂಬ ಅರ್ಜಿಯ ಕುರಿತಂತೆ ಸುಪ್ರೀಂಕೋರ್ಟ್‌ ಕೇಂದ್ರ ಸರ್ಕಾರದಿಂದ ಪ್ರತಿಕ್ರಿಯೆ ಬಯಸಿದೆ. ಮಾಹಿತಿ ಮತ್ತು ಪ್ರಸಾರ ಸಚಿವಾಲಯ, ಕೇಂದ್ರ ಸರ್ಕಾರ ತನ್ನ ಕರ್ತವ್ಯ ನಿರ್ವಹಿಸುವಲ್ಲಿ ಮತ್ತು ಕಾರ್ಯಕ್ರಮ ಸಂಹಿತೆ ಜಾರಿಗೊಳಿಸುವಲ್ಲಿ ಸಂಪೂರ್ಣ ವಿಫಲವಾಗಿವೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.

ನ್ಯಾಯಾಲಯ ಹೇಳಿದ ಪ್ರಮುಖ ಅಂಶಗಳು:

  • ಸುದ್ದಿ ತುಣುಕೊಂದರಲ್ಲಿ ಸುದ್ದಿಯು ದೆಹಲಿ ಗಲಭೆ ಆರೋಪಿ ಉಮರ್‌ ಖಾಲಿದ್‌ ಉಗ್ರ ಇಸ್ಲಾಂವಾದಿ ಮತ್ತು ಹಿಂದೂ ವಿರೋಧಿ ಎಂದು ಆರಂಭವಾಗುತ್ತದೆ. ಈ ಸುದ್ದಿ ಇಡೀ ದೆಹಲಿ ಗಲಭೆಯನ್ನು ಹಿಂದೂ ವಿರೋಧಿ ಎಂಬಂತೆ ಚಿತ್ರಿಸುತ್ತದೆ. ಆದರೆ ಎಲ್ಲಾ ಸಮುದಾಯಗಳು ದಂಗೆಯ ಪರಿಣಾಮ ಅನುಭವಿಸಿದ್ದು ಇದು ಆ ಪ್ರಕರಣವಾಗಿ ತೋರುವುದಿಲ್ಲ.

  • ಉಮರ್‌ ಖಾಲಿದ್‌ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ ಎಂದು ಮಾಧ್ಯಮಗಳು ವ್ಯಾಪಕವಾಗಿ ವರದಿ ಮಾಡಿದವು. ಆದರೆ ತಪ್ಪೊಪ್ಪಿಗೆಯನ್ನು ಸಾಕ್ಷಿಯಾಗಿ ಪರಿಗಣಿಸುವುದಿಲ್ಲ ಎಂದು ಮಾಧ್ಯಮಗಳು ಸ್ಪಷ್ಟೀಕರಣ ನೀಡಲಿಲ್ಲ. ಅಂತಹ ಯಾವುದೇ ಹೇಳಕೆಯುನ್ನು ಪ್ರಾಸಿಕ್ಯೂಷನ್‌ ಸಾಕ್ಷಿಯಾಗಿ ಬಳಸುವುದಿಲ್ಲ ಎಂದು ತನ್ನ ವೀಕ್ಷಕರು ಅಥವಾ ಓದುಗರಿಗೆ ತಿಳಿಸುವುದು ಜೊತೆಗೆ ಅರಿವು ಮೂಡಿಸುವುದು ಪತ್ರಿಕೆ ಮತ್ತು ಮಾಧ್ಯಮಗಳ ಕರ್ತವ್ಯವಾಗಿತ್ತು.

  • ವ್ಯಕ್ತಿಯ ಘನತೆ ಎಂಬುದು ಅಮೂಲ್ಯ ಆಸ್ತಿ ಮತ್ತು ಸಂವಿಧಾನದ 21ನೇ ವಿಧಿಯಡಿ ದೊರೆತ ಹಕ್ಕಾಗಿದೆ.

  • ತನಿಖೆ ಅಥವಾ ವಿಚಾರಣೆ ಬಾಕಿ ಇರುವ ಪ್ರಕರಣಗಳನ್ನು ವರದಿ ಮಾಡುವಾಗ ವರದಿಗಾರರು ಸ್ವನಿಯಂತ್ರಣ ತಂತ್ರಗಳನ್ನು ಬಳಸಬೇಕು ಎಂದು ನಾನು ಭಾವಿಸುತ್ತೇನೆ. ಇದರಿಂದಾಗಿ ಯಾವುದೇ ಆರೋಪಿ ಅಥವಾ ಇತರ ಪಕ್ಷಗಳಿಗೆ ಯಾವುದೇ ಬಗೆಯ ಪೂರ್ವಾಗ್ರಹ ಉಂಟಾಗದು. ಸ್ವಯಂ ನಿಯಂತ್ರಣ ಅತ್ಯುತ್ತಮ ವಿಧಾನ.

Related Stories

No stories found.
Kannada Bar & Bench
kannada.barandbench.com