ದೀಪಾವಳಿ ಆಚರಣೆ ವೇಳೆ ಮಾಲಿನ್ಯ ತಡೆಗಟ್ಟಲೆಂದು ರಾಷ್ಟ್ರ ರಾಜಧಾನಿಯಲ್ಲಿ ಪಟಾಕಿ ಸಿಡಿಸುವುದರ ಮೇಲೆ ವಿಧಿಸಲಾಗಿದ್ದ ನಿಷೇಧ ಉಲ್ಲಂಘನೆಯಾಗಿದ್ದಾದರೂ ಹೇಗೆ ಎಂಬುದಕ್ಕೆ ಪ್ರತಿಕ್ರಿಯೆ ನೀಡುವಂತೆ ದೆಹಲಿ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ [ವಾಯು ಗುಣಮಟ್ಟ ನಿರ್ವಹಣಾ ಆಯೋಗಕ್ಕೆ (ಸಿಎಕ್ಯೂಎಂ) ಸಂಬಂಧಿಸಿದಂತೆ ದಾಖಲಿಸಿಕೊಂಡ ಸ್ವಯಂ ಪ್ರೇರಿತ ಪ್ರಕರಣ].
ಪಟಾಕಿ ಸಿಡಿಸುವ ಕುರಿತಂತೆ ಸರ್ಕಾರ ವಿಧಿಸಿದ್ದ ನಿರ್ಬಂಧಗಳನ್ನು ಸಂಪೂರ್ಣವಾಗಿ ಪಾಲಿಸದೆ ಇರುವುದನ್ನು ಪತ್ರಿಕಾ ವರದಿಗಳು ಬೆಳಕಿಗೆ ತಂದಿದ್ದು ಆದೇಶ ಪಾಲನೆಯಾಗದಿರುವುದನ್ನು ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಆಗಸ್ಟಿನ್ ಜಾರ್ಜ್ ಮಸೀಹ್ ಅವರಿದ್ದ ಪೀಠ ಗಂಭಿರವಾಗಿ ಪರಿಗಣಿಸಿದೆ.
ಇದು ನಡೆದಿದ್ದಾರೂ ಹೇಗೆ ಎಂಬ ಕುರಿತು ದೆಹಲಿ ಸರ್ಕಾರ ಕೂಡಲೇ ಪ್ರತಿಕ್ರಿಯಿಸಬೇಕು ಎಂದ ನ್ಯಾಯಾಲಯ ಗಮನಾರ್ಹವಾಗಿ ದೆಹಲಿಯಲ್ಲಿ ಪಟಾಕಿಗಳನ್ನು ಶಾಶ್ವತವಾಗಿ ನಿಷೇಧಿಸುವ ಕುರಿತು ಪರಿಗಣಿಸುವಂತೆ ಸೂಚಿಸಿತು.
ಮಾಲಿನ್ಯ ನಿಯಂತ್ರಣ ಮತ್ತು ಪಟಾಕಿ ನಿಷೇಧವನ್ನು ಜಾರಿಗೊಳಿಸಲು ತೆಗೆದುಕೊಂಡ ಕ್ರಮಗಳ ಬಗ್ಗೆ ಅಫಿಡವಿಟ್ ಸಲ್ಲಿಸಬೇಕು. ಅದರಲ್ಲಿ ದೀಪಾವಳಿ ಆಚರಣೆ ವೇಳೆ ಪಟಾಕಿ ಸಂಬಂಧಿತ ಮಾಲಿನ್ಯ ಮತ್ತೆ ಮುಂದಿನ ವರ್ಷ ಮರುಕಳಿಸದಂತೆ ಕೈಗೊಳ್ಳುವ ಕ್ರಮಗಳ ಬಗ್ಗೆ ವಿವರಿಸಬೇಕು. ಅಂತಹ ಮಾಲಿನ್ಯದ ವಿರುದ್ಧ ಜಾಗೃತಿ ಮೂಡಿಸಲು ಸಾರ್ವಜನಿಕ ಅಭಿಯಾನವನ್ನು ನಡೆಸುವ ಕ್ರಮಗಳನ್ನು ಅದರಲ್ಲಿ ತಿಳಿಸರಬೇಕು ಎಂದು ದೆಹಲಿ ಸರ್ಕಾರಕ್ಕೆ ನ್ಯಾಯಾಲಯ ಆದೇಶಿಸಿತು. ಈ ಸಂಬಂಧ ದೆಹಲಿ ಸರ್ಕಾರ ಮತ್ತು ಪೊಲೀಸ್ ಆಯುಕ್ತರು ವಾರದೊಳಗೆ ಅಫಿಡವಿಟ್ ಸಲ್ಲಿಸುವಂತೆ ಅದು ಆದೇಶಿಸಿದೆ. ಪ್ರಕರಣದ ಮುಂದಿನ ವಿಚಾರಣೆ ನವೆಂಬರ್ 14 ರಂದು ನಡೆಯಲಿದೆ.
ದೆಹಲಿ ಸರ್ಕಾರ ಹಾಗೂ ಅಧಿಕಾರಿಗಳು ಶಾಶ್ವತವಾಗಿ ಪಟಾಕಿ ನಿಷೇಧ ಸಂಬಂಧ ನಿರ್ಧಾರ ಕೈಗೊಳ್ಳಬೇಕು.
ಸುಪ್ರೀಂ ಕೋರ್ಟ್
ದೆಹಲಿಯಲ್ಲಿ ಹದಗೆಡುತ್ತಿರುವ ಗಾಳಿಯ ಗುಣಮಟ್ಟದ ಆತಂಕದ ನಡುವೆ, ರಾಜ್ಯ ಸರ್ಕಾರ ಇತ್ತೀಚೆಗೆ ರಾಷ್ಟ್ರ ರಾಜಧಾನಿಯಲ್ಲಿ ವಿವಿಧ ರೀತಿಯ ಪಟಾಕಿಗಳ ಉತ್ಪಾದನೆ, ಮಾರಾಟ ಮತ್ತು ಬಳಕೆಯನ್ನು ಜನವರಿ 1, 2025 ರವರೆಗೆ ನಿಷೇಧಿಸಿತ್ತು . ಆದರೆ ದೀಪಾವಳಿ ವೇಳೆ ಈ ಆದೇಶ ಪಾಲನೆಯಾಗಲಿಲ್ಲ ಎಂಬುದನ್ನು ಹೆಚ್ಚುವರಿ ಸಾಲಿಸಿಟರ್ ಜನರಲ್ ಅರ್ಚನಾ ಪಾಠಕ್ ದವೆ ಒಪ್ಪಿಕೊಂಡರು.
ಅಮಿಕಸ್ ಕ್ಯೂರಿ ಅಪರಾಜಿತಾ ಸಿಂಗ್ ಅವರು, ದೀಪಾವಳಿಯ ದಿನದಂದು ವಾಯುಮಾಲಿನ್ಯದಲ್ಲಿ ಭಾರಿ ಹೆಚ್ಚಳ ಉಂಟಾಗಿರುವುದನ್ನು ಸೂಚಿಸುವ ವರದಿಯಿದೆ, ಮಾಲಿನ್ಯದ ಪ್ರಮಾಣ ಶೇಕಡಾ 10ರಿಂದ 27ಕ್ಕೆ ಏರಿಕೆಯಾಗಿದೆ ಎಂದರು. ಪಟಾಕಿ ನಿಷೇಧವಿದ್ದರೂ ಬೇರೆ ರಾಜ್ಯಗಳಿಂದ ಜನ ಪಟಾಕಿ ತರುತ್ತಿರುವ ಬಗ್ಗೆ ನ್ಯಾಯಾಲಯ ಕಳವಳ ವ್ಯಕ್ತಪಡಿಸಿತು.
ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡಿರುವ ಇದೇ ಮೊಕದ್ದಮೆಯಲ್ಲಿ ಪಂಜಾಬ್ ರೀತಿಯ ರಾಜ್ಯಗಳಲ್ಲಿ ಕೃಷಿ ತ್ಯಾಜ್ಯ ದಹನದ ಮೂಲಕ ಉಂಟಾಗುತ್ತಿರುವ ವಾಯು ಮಾಲಿನ್ಯದ ಬಗ್ಗೆಯೂ ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ. ಈ ಹಿಂದಿನ ವಿಚಾರಣೆಗಳ ವೇಳೆ ಕೃಷಿತ್ಯಾಜ್ಯ ಕುರಿತಂತೆ ಕೇಂದ್ರ ದಂಡ ವಿಧಿಸುತ್ತಿಲ್ಲ ಜೊತೆಗೆ ಪಂಜಾಬ್, ಹರಿಯಾಣದಂತಹ ರಾಜ್ಯಗಳು ವಿಧಿಸುತ್ತಿರುವ ದಂಡ ನಗಣ್ಯ ಪ್ರಮಾಣದ್ದು ಎಂದು ಪೀಠ ಅಸಮಾಧಾನ ಸೂಚಿಸಿತ್ತು.