ಹೆಂಡತಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣ: ಆರೋಪಿಯನ್ನು ಖುಲಾಸೆಗೊಳಿಸಿದ ಬಾಂಬೆ ಹೈಕೋರ್ಟ್ ನಾಗಪುರ ಪೀಠ

ಹೆಂಡತಿಯನ್ನು ಕ್ರೂರವಾಗಿ ನಡೆಸಿಕೊಂಡು ಆತ್ಮಹತ್ಯೆಗೆ ಪ್ರಚೋದನೆ ನೀಡಿ ಐಪಿಸಿ ಸೆಕ್ಷನ್ 498 ಎ ಮತ್ತು 306 ಅಡಿ ಬಂಧನಕ್ಕೊಳಗಾಗಿದ್ದ ಆರೋಪಿಯನ್ನು ಬಾಂಬೆ ಹೈಕೋರ್ಟ್ ನಾಗಪುರ ಪೀಠ ಖುಲಾಸೆಗೊಳಿಸಿದೆ.
Bombay High Court Nagpur bench, Justice Pushpa Ganediwala
Bombay High Court Nagpur bench, Justice Pushpa Ganediwala
Published on

ಹೆಂಡತಿಯನ್ನು ಕ್ರೂರವಾಗಿ ನಡೆಸಿಕೊಂಡು ಆತ್ಮಹತ್ಯೆಗೆ ಪ್ರಚೋದನೆ ನೀಡಿ ಐಪಿಸಿ ಸೆಕ್ಷನ್‌ 498 ಎ ಮತ್ತು 306 ಅಡಿ ಬಂಧನಕ್ಕೊಳಗಾಗಿದ್ದ ಆರೋಪಿಯನ್ನು ಬಾಂಬೆ ಹೈಕೋರ್ಟ್‌ ನಾಗಪುರ ಪೀಠ ಇತ್ತೀಚೆಗೆ ಖುಲಾಸೆಗೊಳಿಸಿದೆ.

'ಹಣದ ಬೇಡಿಕೆ ಇಟ್ಟಿದ್ದ' ಎಂಬ ಆರೋಪ ಹೊರಿಸಿದ್ದು ಇದು ಅಸ್ಪ‍‍ಷ್ಟವಾಗಿದೆ. ಹೀಗಾಗಿ ಇಂತಹ ನಿರ್ದಿಷ್ಟ ಪ್ರಕರಣದಲ್ಲಿ ಸ್ಪಷ್ಟ ನಿದರ್ಶನಗಳ ಅನುಪಸ್ಥಿತಿಯಿದ್ದಾಗ ಸೆಕ್ಷನ್ 498 ಎ ಅಡಿ ಕಿರುಕುಳದ ಸಾಮಾನ್ಯ ಆರೋಪ ಹೊರಿಸುವುದು ಸಾಧ್ಯವಿಲ್ಲ ಎಂದು ನ್ಯಾಯಾಲಯ ಗುರುವಾರ ಅಭಿಪ್ರಾಯಪಟ್ಟಿದೆ.

ಇದಲ್ಲದೆ “ಮೃತ ವ್ಯಕ್ತಿಯನ್ನು ಆತ್ಮಹತ್ಯೆಗೆ ಪ್ರೇರೇಪಿಸುವ ಯಾವುದೇ ಸಾಕ್ಷ್ಯ ನಿಖರವಾಗಿ ದೊರೆಯದೇ ಇರುವಾಗ ಆತ್ಮಹತ್ಯೆಗೆ ಪ್ರಚೋದನೆ ನೀಡುವ ಪ್ರಕರಣಗಳಲ್ಲಿ ಇಂತಹ ಸಾಮಾನ್ಯ ಆರೋಪ ಹೊರಿಸುವುದು ಸಾಕಾಗುವುದಿಲ್ಲ," ಎಂಬುದಾಗಿ ನ್ಯಾಯಾಲಯ ತೀರ್ಪು ನೀಡಿದೆ.

Also Read
12 ವರ್ಷದ ಮಗುವಿನ ಬಟ್ಟೆ ತೆಗೆಯದೆ ಸ್ಪರ್ಶಿಸಿದರೆ ಪೊಕ್ಸೊ ಕಾಯಿದೆಯಡಿ ಲೈಂಗಿಕ ಅಪರಾಧವಲ್ಲ: ಬಾಂಬೆ ಹೈಕೋರ್ಟ್

" ಮೃತ ವ್ಯಕ್ತಿಯನ್ನು ಅರ್ಜಿದಾರರು ಆತ್ಮಹತ್ಯೆಗೆ ಪ್ರೇರೇಪಿಸಿದ್ದಾರೆ ಎಂಬ ಯಾವುದೇ ಆಧಾರವನ್ನು ಪ್ರಾಸಿಕ್ಯೂಷನ್‌ ಒದಗಿಸಿಲ್ಲ. ಇದಕ್ಕೆ ಬದಲಾಗಿ ಆರೋಪಿತ ವ್ಯಕ್ತಿ ಮೃತಳೊಂದಿಗೆ ಬದುಕಲು ಆಸಕ್ತಿ ಹೊಂದಿದ್ದ ಎಂಬುದು ಮೇಲ್ಮನವಿಯ ಉದ್ದಕ್ಕೂ ವ್ಯಕ್ತವಾಗಿದೆ,” ಎಂದು ನ್ಯಾಯಾಲಯ ಹೇಳಿದೆ.

ಹೆಂಡತಿಯ ವಿರುದ್ಧ ಕ್ರೌರ್ಯ ಎಸಗಿದ್ದ ಮತ್ತು ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದ ಆರೋಪದಡಿ 2008ರಲ್ಲಿ ಮೃತ ವ್ಯಕ್ತಿಯ ಗಂಡ ಹಾಗೂ ಪ್ರಕರಣದ ಅರ್ಜಿದಾರನಿಗೆ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರು ಶಿಕ್ಷೆ ವಿಧಿಸಿದ್ದರು. ಇದನ್ನು ಪ್ರಶ್ನಿಸಿ ಸಲ್ಲಿಸಲಾದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪುಷ್ಪಾ ವಿ ಗಣೇದಿವಾಲಾ ಅವರು ಈ ತೀರ್ಪು ನೀಡಿದ್ದಾರೆ.

Also Read
ಪೊಕ್ಸೊ ಕಾಯಿದೆ ಕುರಿತಂತೆ ಬಾಂಬೆ ಹೈಕೋರ್ಟ್‌ ನೀಡಿದ್ದ ವಿವಾದಾತ್ಮಕ‌ ತೀರ್ಪಿಗೆ ಸುಪ್ರೀಂ ತಡೆ

ಮೃತ ಹೆಂಡತಿಗೆ ಮೇಲ್ಮನವಿದಾರ ಮತ್ತು ಆತನ ಕುಟುಂಬ ಸದಸ್ಯರು ಒಂಬತ್ತು ವರ್ಷಗಳ ಕಾಲ ಕಿರುಕುಳ ನೀಡಿದ್ದರು ಎಂದು ಪ್ರಾಸಿಕ್ಯೂಷನ್‌ ವಾದಿಸಿತ್ತು. ಕಿರುಕುಳದ ಘಟನೆ ನಡೆದಾಗಲೆಲ್ಲಾ ಮೃತ ವ್ಯಕ್ತಿ ತನ್ನ ತವರುಮನೆಗೆ ಹೋಗುತ್ತಿದ್ದಳು ಮತ್ತು ಆಕೆಯನ್ನು ಗಂಡ ಪುನಃ ತನ್ನ ಮನೆಗೆ ಕರೆತರುತ್ತಿದ್ದ.

“ಆರೋಪಗಳ ಸ್ವರೂಪ ಸಾಮಾನ್ಯವಾಗಿದೆ ಮತ್ತು ಎಲ್ಲಾ ಆರೋಪಿಗಳಿಗೆ ಅವುಗಳನ್ನು ಸಾಮಾನ್ಯವಾಗಿ ಅನ್ವಯಿಸಬಹುದು” ಎಂದು ಸೂಚಿಸಿ ಮೇಲ್ಮನವಿದಾರ ತನ್ನ ವಿರುದ್ಧದ ಆರೋಪಗಳನ್ನು ನಿರಾಕರಿಸಿದ್ದರು. ಜೊತೆಗೆ ತನ್ನನ್ನು ಹೊರತುಪಡಿಸಿ ಉಳಿದ ಆರೋಪಿಗಳನ್ನು ಖುಲಾಸೆಗೊಳಿಸಿದ್ದನ್ನು ನ್ಯಾಯಾಲಯದ ಗಮನಕ್ಕೆ ತಂದಿದ್ದರು. “ಯಾವುದೇ ನಿರ್ದಿಷ್ಟ ಕಿರುಕುಳದ ಘಟನೆಯನ್ನು ಉಲ್ಲೇಖಿಸಲು ಪ್ರಾಸಿಕ್ಯೂಷನ್‌ಗೆ ಸಾಧ್ಯವಾಗಿಲ್ಲ. ಜೊತೆಗೆ ಆರೋಪಗಳು ಸಾಮಾನ್ಯ ಸ್ವರೂಪದವು,” ಎಂಬ ವಾದವನ್ನು ನ್ಯಾಯಾಲಯ ಮನ್ನಿಸಿತು.

Also Read
[ಪೋಕ್ಸೊ ಖುಲಾಸೆಗಳು] ಬಾಂಬೆ ಹೈಕೋರ್ಟ್‌ ನ್ಯಾಯಮೂರ್ತಿ ಕಾಯಂಗೊಳಿಸುವ ಶಿಫಾರಸು ಹಿಂಪಡೆದ ಸುಪ್ರೀಂ ಕೋರ್ಟ್‌ ಕೊಲಿಜಿಯಂ

"ಪುರಾವೆಗಳು ಗಂಡ ಮತ್ತು ಹೆಂಡತಿಯ ನಡುವಿನ ಜಗಳಕ್ಕೆ ಸಂಬಂಧಿಸಿದ್ದು ಆ ಕಲಹದಲ್ಲಿ ಅವನು ಹಣದ ಬೇಡಿಕೆಯಿಟ್ಟು ಅವಳನ್ನು ಹೊಡೆಯುತ್ತಿದ್ದ ಎನ್ನುತ್ತವೆ. ಹಣದ ಬೇಡಿಕೆ ಎಂಬುದು ಸಹ ಒಂದು ಅಸ್ಪಷ್ಟ ಪದಪುಂಜವಾಗಿದೆ. ಪ್ರಕರಣದ ಜೊತೆ ಕೊಂಡಿ ಬೆಸೆಯುವಂತಹ ಇತರ ವಿವರಗಳ ಅನುಪಸ್ಥಿತಿಯಿದ್ದು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 498-ಎ ಅಡಿಯಲ್ಲಿ ಸೂಚಿಸುವಂತೆ ಪ್ರಕರಣ ಕಿರುಕುಳದ ಅಪರಾಧವನ್ನು ಸೂಚಿಸುವುದಿಲ್ಲ,"ಎಂದು ನ್ಯಾಯಾಲಯ ಹೇಳಿದೆ.

"ಕಾಲಕಾಲಕ್ಕೆ ಮೃತ ವ್ಯಕ್ತಿಯನ್ನು ಮೇಲ್ಮನವಿದಾರ ಆಕೆಯ ತಂದೆಯ ಮನೆಯಿಂದ ಕರೆತಂದಿದ್ದ. ಜೊತೆಗೆ ದಾಂಪತ್ಯದ ಹಕ್ಕು ಮರುಸ್ಥಾಪನೆಗಾಗಿ ನೋಟಿಸ್‌ ನೀಡಿದ್ದ. ಇದಲ್ಲದೆ, ಮೃತಳನ್ನು ಆಸ್ಪತ್ರೆಗೆ ಕರೆದೊಯ್ದ ಮತ್ತು ಆಕೆಯ ಶವವನ್ನು ಅಂತ್ಯಕ್ರಿಯೆ ನಡೆಲು ಆಕೆಯ ತಂದೆಗೆ ನೀಡಲು ಒಪ್ಪದೆ ತನ್ನದೇ ಸ್ವಂತ ಸ್ಥಳದಲ್ಲಿ ಖುದ್ದು ಅಂತ್ಯಕ್ರಿಯೆ ನಡೆಸಿದ” ಎಂಬುದನ್ನು ನ್ಯಾಯಾಲಯ ಗಮನಿಸಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಶಿಕ್ಷೆ ವಿಧಿಸಲಾಗದು ಎಂದು ತೀರ್ಮಾನಿಸಿತು.

Kannada Bar & Bench
kannada.barandbench.com