ನೋಟು ಅಮಾನ್ಯೀಕರಣ ಪ್ರಕರಣ: ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠದ ಮುಂದೆ ಪಿ ಚಿದಂಬರಂ ಮಂಡಿಸಿದ ವಾದವೇನು?
ಕೇಂದ್ರ ಸರ್ಕಾರವು 2016ರಲ್ಲಿ ತೆಗೆದುಕೊಂಡ ₹500 ಮತ್ತು ₹1,000 ಮುಖ ಬೆಲೆಯ ನೋಟುಗಳ ಅಮಾನ್ಯೀಕರಣ ಪ್ರಶ್ನಿಸಿ ಸಲ್ಲಿಕೆಯಾಗಿರುವ 58 ಅರ್ಜಿಗಳ ವಿಚಾರಣೆಯನ್ನು ಗುರುವಾರ ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠವು ಆರಂಭಿಸಿದೆ.
ನ್ಯಾಯಮೂರ್ತಿಗಳಾದ ಎಸ್ ಅಬ್ದುಲ್ ನಜೀರ್, ಬಿ ಆರ್ ಗವಾಯಿ, ಎ ಎಸ್ ಬೋಪಣ್ಣ, ವಿ ರಾಮಸುಬ್ರಮಣಿಯನ್ ಮತ್ತು ಬಿ ವಿ ನಾಗರತ್ನ ಅವರ ನೇತೃತ್ವದ ಸಾಂವಿಧಾನಿಕ ಪೀಠದ ಮುಂದೆ ಹಿರಿಯ ವಕೀಲ ಮತ್ತು ಕೇಂದ್ರದ ಮಾಜಿ ಸಚಿವ ಪಿ ಚಿದಂಬರಂ ಸುದೀರ್ಘವಾಗಿ ವಾದಿಸಿದರು.
ಚಿದಂಬರಂ ಎತ್ತಿರುವ ಆರು ಪ್ರಶ್ನೆಗಳು:
ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಶಿಫಾರಸ್ಸು ಆಧರಿಸಿ ಅಮಾನ್ಯೀಕರಣ ಅಧಿಕಾರ ಚಲಾಯಿಸಬೇಕು: ಕರೆನ್ಸಿ ನೋಟುಗಳಿಗೆ ಸಂಬಂಧಿಸಿದ ಯಾವುದೇ ಕ್ರಮಕ್ಕೆ ಆರ್‌ಬಿಐನಿಂದ ಚಾಲನೆ ದೊರೆಯಬೇಕು. ಕೇಂದ್ರ ಸರ್ಕಾರಕ್ಕೆ ನೋಟು ಅಮಾನ್ಯೀಕರಣ ಮಾಡುವ ಹಕ್ಕು ಇದೆಯಾದರೂ ಅದನ್ನು ಆರ್‌ಬಿಐ ಶಿಫಾರಸ್ಸಿನ ನಂತರವೇ ಕಾರ್ಯಗತಗೊಳಿಸಬೇಕು.
ಆರ್‌ಬಿಐ ಕಾಯಿದೆಯ ಸೆಕ್ಷನ್ 26(2) ಅಡಿ ನಿರ್ದಿಷ್ಟ ಮುಖಬೆಲೆಯ ಎಲ್ಲಾ ಸರಣಿಯ ನೋಟುಗಳನ್ನು ಕಾನೂನುಬಾಹಿರ ಎಂದು ಘೋಷಿಸಲು ಅನುಮತಿ ಇಲ್ಲ. ಕಾಯಿದೆಯಡಿ ಬಳಸಲಾಗಿರುವ 'ಯಾವುದೇ ಸರಣಿ' ಎನ್ನುವುದನ್ನು 'ಎಲ್ಲ ಸರಣಿ' ಎಂದು ವ್ಯಾಖ್ಯಾನಿಸಲಾಗದು. ನಿರ್ದಿಷ್ಟ ಮೊತ್ತದ ಎಲ್ಲಾ ಸರಣಿಯ ನೋಟುಗಳನ್ನು ಅಮಾನ್ಯಗೊಳಿಸಬೇಕು ಎಂದರೆ ಅದಕ್ಕೆ ಪ್ರತ್ಯೇಕ ಕಾಯಿದೆ ತರಬೇಕಾಗುತ್ತದೆ.
ಹೀಗಾಗಿ, ಕಾಯಿದೆಯ ಸೆಕ್ಷನ್ 26(2) ಅಡಿ ನವೆಂಬರ್ 7ರಂದು ₹500 ಮತ್ತು ₹1,000 ಮುಖ ಬೆಲೆಯ ನೋಟುಗಳನ್ನು ಬಿಡುಗಡೆ ಮಾಡಲು ಮತ್ತು ಅದೇ ಮೊತ್ತದ ನೋಟುಗಳನ್ನು ನವೆಂಬರ್ 8ರಂದು ಅಮಾನ್ಯಗೊಳಿಸಲು ಸರ್ಕಾರಕ್ಕೆ ಅಧಿಕಾರ ನೀಡುತ್ತದೆ ಎಂದು ಹೇಳುವುದು ಅಸಂಬದ್ಧ.
ಆರ್‌ಬಿಐ ಕಾಯಿದೆಯ ಸೆಕ್ಷನ್ 26(2)ರಿಂದ ಸಂವಿಧಾನ ಉಲ್ಲಂಘನೆ: ಸೆಕ್ಷನ್ 26(2) ಅಸಾಂವಿಧಾನಿಕವಾಗಿದ್ದು, ಅದು ಯಾವುದೇ ತೆರನಾದ ಮಾರ್ಗದರ್ಶನವಿಲ್ಲದ ಅಧಿಕಾರ ಕಲ್ಪಿಸುತ್ತದೆ. ಅದನ್ನು ಸರಳವಾಗಿ ಓದಿದರೆ ಅದರಲ್ಲಿ ಯಾವುದೇ ನೀತಿ ಮತ್ತು ಮಾರ್ಗಸೂಚಿ ಇಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಹೀಗಾಗಿ, ಒಂದೋ ಈ ಹಿಂದೆ ವಾದಿಸಲ್ಪಟ್ಟ ರೀತಿಯಲ್ಲಿ ಆ ನಿಬಂಧನೆಯನ್ನು ಮಿತಿಗೊಳಿಸಿ ಓದಿಕೊಳ್ಳಬೇಕು ಇಲ್ಲವೇ ಅದನ್ನು ಸಂಪೂರ್ಣವಾಗಿ ಅಸಾಂವಿಧಾನಿಕ ಎಂದು ಘೋಷಿಸಬೇಕು.
ಅಮಾನ್ಯೀಕರಣ ಪ್ರಕ್ರಿಯೆ ನಿರ್ಧಾರಕೈಗೊಳ್ಳುವಿಕೆ ಪ್ರಕ್ರಿಯೆ ದೋಷಪೂರಿತ: ಅಮಾನ್ಯ ಪ್ರಕ್ರಿಯೆ ನಡೆಸುವಾಗ ಶಾಸನಬದ್ಧ ಪ್ರಕ್ರಿಯೆಯನ್ನು ತಿರುವುಮುರುವಾಗಿಸಲಾಗಿದೆ. ಸರ್ಕಾರವೇ ಆರ್‌ಬಿಐಗೆ ಪ್ರಸ್ತಾವ ಕಳುಹಿಸಿದೆ. ಕೇಂದ್ರ ಸರ್ಕಾರದ ಆದೇಶ ಪಾಲಿಸಿ ಆರ್‌ಬಿಐ ಶಿಫಾರಸ್ಸು ಮಾಡಿದೆ. ಇದು ಯಾವ ರೀತಿಯಾದ ತೀರ್ಮಾನ ಮಾಡುವ ಪ್ರಕ್ರಿಯೆ? ಇದು ಅತ್ಯಂತ ಅತಿರೇಕದ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಾಗಿದ್ದು, ಕಾನೂನನ್ನು ಅಣಕಿಸುತ್ತದೆ. ಅತ್ಯಂತ ದೋಷಪೂರಿತವಾಗಿರುವ ಕಾರಣಕ್ಕಾಗಿ ಈ ಪ್ರಕ್ರಿಯೆಯನ್ನು ರದ್ದುಪಡಿಸಬೇಕು. ಇಡೀ ಪ್ರಕ್ರಿಯೆ ಕೇವಲ 26 ಗಂಟೆಗಳಲ್ಲಿ ಮುಗಿದಿದೆ.
ಅಮಾನ್ಯೀಕರಣದಿಂದ ಉದ್ಯೋಗ ನಷ್ಟ, ಜನ ಸಾಮಾನ್ಯರು ಯಾತನೆ ಅನುಭವಿಸಿದ್ದಾರೆ: ನೋಟು ಅಮಾನ್ಯ ಮಾಡುವಾಗ ಅದು ಜನರ ಮೇಲೆ ಉಂಟು ಮಾಡಬಹುದಾದ ಪರಿಣಾಮ ಮತ್ತು ವ್ಯವಸ್ಥಾಪನಾ ವಿಚಾರಗಳನ್ನು ಪರಿಗಣಿಸಿಲ್ಲ. ಭಾರತದಲ್ಲಿ ಒಟ್ಟು ಉದ್ಯೋಗ ಮಾಡುವ ಮಂದಿಯ ಪೈಕಿ ಶೇ. 30ರಷ್ಟು ಸಾಂದರ್ಭಿಕ ಕಾರ್ಮಿಕರಿದ್ದಾರೆ. ಈ ಸಂಖ್ಯೆ ಅಂದಾಜು 15 ಕೋಟಿಯಷ್ಟಾಗುತ್ತದೆ. ರಾತ್ರೋರಾತ್ರಿ ಅವರು ಕೆಲಸ ಕಳೆದುಕೊಂಡಿದ್ದು, ಕೂಲಿ ನಷ್ಟ ಅನುಭವಿಸಿದ್ದಾರೆ.
2,300 ಕೋಟಿಗೂ ಅಧಿಕ ನೋಟು ಅಮಾನ್ಯ ಮಾಡಲಾಗಿದ್ದು, ಸರ್ಕಾರದ ಮುದ್ರಣಾಲಯವು ಪ್ರತಿ ತಿಂಗಳು 300 ಕೋಟಿ ನೋಟು ಮುದ್ರಣ ಮಾಡಲು ಮಾತ್ರ ಶಕ್ತವಾಗಿದೆ. ಇದರ ಜೊತೆಗೆ ಎಟಿಎಂ ಯಂತ್ರಗಳು ಹೊಸ ನೋಟುಗಳನ್ನು ಗ್ರಾಹಕರಿಗೆ ನೀಡುವ ರೀತಿಯಲ್ಲಿ ಸಿದ್ಧಗೊಳಿಸಿರಲಿಲ್ಲ. ನೋಟು ಅಮಾನ್ಯದಿಂದ ಎದುರಾಗುವ ಪರಿಣಾಮಗಳ ಅಧ್ಯಯನ ನಡೆಸಲಾಗಿಲ್ಲ. ಅದನ್ನು ಕೇಂದ್ರ ಮಂಡಳಿಯ ಮುಂದೆ ಇಡಲಾಗಿಲ್ಲ. ಅದನ್ನು ನಿರ್ಣಯ ಶಿಫಾರಸ್ಸಿನಲ್ಲಿ ಉಲ್ಲೇಖಿಸಿಲ್ಲ ಅಥವಾ ಅದನ್ನು ಸಂಪುಟದ ಮುಂದೆಯೂ ಇಡಲಾಗಿಲ್ಲ ಎಂಬುದು ನನ್ನ ಆರೋಪ.
ಕಪ್ಪು ಹಣ ಹೊಂದಿರುವವರಿಗೆ ಅಮಾನ್ಯೀಕರಣ ವರದಾನ: ಪ್ರಶ್ನಾರ್ಹವಾದ ಅಧಿಸೂಚನೆಯಲ್ಲಿ ಉಲ್ಲೇಖಿಸಲಾದ ನಕಲಿ ನೋಟು, ಕಳ್ಳಸಾಗಣೆ, ಭಯೋತ್ಪಾದನೆಗೆ ಹಣಕಾಸು ನೀಡುವುದರ ನಿರ್ಮೂಲನೆ, ಕಪ್ಪು ಹಣ ವರ್ಗಾವಣೆ ನಿರ್ಬಂಧ ಮಾಡಲಾಗುವುದು ಎಂಬುದುನ್ನು ಆರ್‌ಬಿಐ ಮತ್ತು ವಿವಿಧ ರಾಜ್ಯ ಸರ್ಕಾರಗಳ ದತ್ತಾಂಶ ಉಲ್ಲೇಖಿಸಿ ಪೀಠಕ್ಕೆ ವಿವರಿಸಿದ್ದು, ಅಮಾನ್ಯೀಕರಣದಿಂದ ಮೇಲೆ ಉಲ್ಲೇಖಿಸಿದ ಯಾವುದೇ ವಿಚಾರದ ಸಾಧನೆಯಾಗಿಲ್ಲ. ಇದು ಕಪ್ಪು ಹಣ ಹೊಂದಿರುವವರಿಗೆ ವರದಾನವಾಯಿತು. ಕಪ್ಪು ಹಣವನ್ನು ಪರಿವರ್ತಿಸುಕೊಳ್ಳುವ ದಾರಿ ಸುಗಮಗೊಳಿಸಿತು.
ಅನುಪಾತ ಪರೀಕ್ಷೆ: ನೋಟು ಅಮಾನ್ಯೀಕರಣವು ಜನರ ಮೇಲೆ ಅಸಹನೀಯವೂ, ಅಸಮಾನವೂ ಆದ ಹೊರೆಯನ್ನು ಜನತೆಯ ಮೇಲೆ ಹೊರಿಸಿತು. ಇದರಿಂದ ಹಲವು ಜೀವ ಮತ್ತು ಜೀವನ ನಷ್ಟವಾಗಿದೆ ಎಂದು ವಿವಿಧ ದತ್ತಾಂಶಗಳನ್ನು ಆಧರಿಸಿ ಚಿದಂಬರಂ ವಾದಿಸಿದರು. ಯಾವ ಉದ್ದೇಶ ಸಾಧನೆಗೆ ಸರ್ಕಾರ ಈ ಕ್ರಮದ ಅಗತ್ಯವನ್ನು ಪ್ರತಿಪಾದಿಸಿತ್ತೋ ಅದನ್ನು ಕೈಗೊಳ್ಳಲು ಇದಲ್ಲದೆ ಬೇರೆ ಹಲವು ದಾರಿಗಳಿದ್ದವು ಎನ್ನುವುದನ್ನು ನ್ಯಾಯಾಲಯ ಗಮನಿಸಬೇಕು ಎಂದು ಅವರು ಒತ್ತಿ ಹೇಳಿದರು.