ನೋಟು ಅಮಾನ್ಯ ಮಾಡಿ ಕೇಂದ್ರ ಸರ್ಕಾರದ 2016ರಲ್ಲಿ ಕೈಗೊಂಡಿದ್ದ ನಿರ್ಧಾರದ ಸಿಂಧುತ್ವವನ್ನು ಪ್ರಶ್ನಿಸಿದ್ದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ ವಿ ನಾಗರತ್ನ ಅವರು ವ್ಯತಿರಿಕ್ತವಾದ ಭಿನ್ನ ತೀರ್ಪು ನೀಡಿದ್ದಾರೆ.
ಕೇಂದ್ರ ಸರ್ಕಾರದ ಈ ಕ್ರಮ ಕಾನೂನುಬಾಹಿರವಾಗಿದೆ. ಜೊತೆಗೆ ಕೇಂದ್ರ ಸರ್ಕಾರ ಕಳಿಸಿದ್ದ ನೋಟು ಅಮಾನ್ಯೀಕರಣದ ಪ್ರಸ್ತಾವನೆಯನ್ನು ಪರಿಗಣಿಸುವಾಗ ಆರ್‌ಬಿಐ ತನ್ನದೇ ಆದ ನಿರ್ಧಾರ ಕೈಗೊಂಡಿಲ್ಲ ಎಂದು ಇಂದು ನೀಡಿದ ತೀರ್ಪಿನಲ್ಲಿ ವಿವರಿಸಿದ್ದಾರೆ.
ನೋಟು ರದ್ದತಿಗೆ ಸಂಬಂಧಿಸಿದಂತೆ ಆರ್‌ಬಿಐ ಸ್ವಂತ ವಿವೇಚನೆ ಬಳಸಿಲ್ಲ.
ನ್ಯಾ. ಬಿ ವಿ ನಾಗರತ್ನ
ಗೆಜೆಟ್ ಅಧಿಸೂಚನೆ ಮೂಲಕ ನೋಟು ಅಮಾನ್ಯಗೊಳಿಸಿದ ಕ್ರಮ ಕಾನೂನುಬಾಹಿರವಾಗಿದೆ. ಅಲ್ಲದೆ 2016ರ ಕಾಯಿದೆ ಮತ್ತು ಅಧಿಸೂಚನೆ ಕೂಡ ಅಕ್ರಮ. ಆದರೆ ಅದನ್ನು 2016ರಲ್ಲಿ ಮಾಡಿದ್ದರಿಂದ ಈಗ ಅದೇ ಸ್ಥಿತಿಯನ್ನು ಮರಳಿ ತರಲು ಸಾಧ್ಯವಿಲ್ಲ.
ದೇಶದಲ್ಲಿ ಚಲಾವಣೆಯಲ್ಲಿರುವ 86%ರಷ್ಟು ಕರೆನ್ಸಿಯನ್ನು ರದ್ದುಗೊಳಿಸಲಾಗಿದೆ ಎಂದು ಅರ್ಜಿದಾರರು ಹೇಳುತ್ತಾರೆ. ಜನರ ಸಾಮಾಜಿಕ- ಆರ್ಥಿಕ ಸಂಕಷ್ಟಗಳನ್ನು ಒಳಗೊಂಡಿರುವ ವಿವಿಧ ಪರಿಣಾಮಗಳ ಬಗ್ಗೆ ಆರ್‌ಬಿಐ ಯೋಚಿಸಿದೆಯೇ ಎಂಬ ಕುರಿತು ನನಗೆ ಆಶ್ಚರ್ಯವಾಗುತ್ತದೆ
ಕೇಂದ್ರ ಸರ್ಕಾರದ ಆದೇಶದ ಮೇರೆಗೆ ನೋಟು ಅಮಾನ್ಯೀಕರಣವು ಬ್ಯಾಂಕ್‌ಗಳು ಮಾಡುವುದಕ್ಕಿಂತ ನಾಗರಿಕರ ಮೇಲೆ ಪರಿಣಾಮ ಬೀರುವಂತಹ ಗಂಭೀರ ಸಮಸ್ಯೆಯಾಗಿದೆ. ಆದ್ದರಿಂದ, ನನ್ನ ದೃಷ್ಟಿಯಲ್ಲಿ, ಕೇಂದ್ರದ ಅಧಿಕಾರ ವಿಶಾಲವಾಗಿದ್ದು, ಇದನ್ನು ಪೂರ್ಣ ಕಾಯಿದೆಯ ಮೂಲಕ ಮಾಡಬೇಕಿತ್ತು.
ಸಂಸತ್ತು ಇಲ್ಲದೆ, ಪ್ರಜಾಪ್ರಭುತ್ವ ವಿಕಸನಗೊಳ್ಳಲು ಸಾಧ್ಯವಿಲ್ಲ... ಇಂತಹ ಮಹತ್ವದ ನಿರ್ಧಾರ ಕೈಗೊಳ್ಳುವಾಗ ಸಂಸತ್ತನ್ನು ದೂರ ಇಡುವಂತಿಲ್ಲ.
ನೋಟು ಅಮಾನ್ಯೀಕರಣದ ಬಳಿಕ ₹ 2,000 ನೋಟು ಬಿಡುಗಡೆಯಾಗಿರುವುದರಿಂದ ಕೇಂದ್ರವು ನೋಟು ರದ್ದತಿ ಮೂಲಕ ಸಾಧಿಸಲು ಬಯಸಿದ್ದ ಗುರಿ ಈಡೇರದೇ ಹೋಗಿರಬಹುದು.
ಆರ್‌ಬಿಐನ ಕೇಂದ್ರೀಯ ಮಂಡಳಿಯ ಅಭಿಪ್ರಾಯವು ಸಾಧಕಬಾಧಕಗಳ ಪರಿಗಣಿತವಾಗಿರಬೇಕಿದ್ದು, ಸ್ವತಂತ್ರವೂ, ನಿರ್ಭೀತವೂ ಆಗಿರಬೇಕಿದೆ. ಋಣಾತ್ಮಕ ಶಿಫಾರಸಿನ ಸಂದರ್ಭದಲ್ಲಿ ಕಾನೂನು ಅಥವಾ ಸುಗ್ರೀವಾಜ್ಞೆಯ ಮೂಲಕ ಮಾತ್ರ ಮುಂದುವರಿಯಬಹುದಾಗಿದೆ.