ಪಿಂಚಣಿ, ನಿವೃತ್ತಿ ಭತ್ಯೆ ನಿರಾಕರಣೆ: ಸರ್ಕಾರ, ಸಂಸ್ಕೃತ ವಿಶ್ವವಿದ್ಯಾಲಯಕ್ಕೆ ಹೈಕೋರ್ಟ್‌ ನೋಟಿಸ್‌

ಎರಡು ದಶಕಗಳಿಗೂ ಅಧಿಕ ಅವಧಿಯವರೆಗೆ ಸೇವೆ ಸಲ್ಲಿಸಿದ ಹೊರತಾಗಿಯೂ ಅರ್ಜಿದಾರರಿಗೆ ಪಿಂಚಣಿ ಇನ್ನಿತರ ನಿವೃತ್ತಿ ಭತ್ಯೆಗಳನ್ನು ನಿರಾಕರಿಸಲಾಗಿದೆ ಎಂದು ಆಕ್ಷೇಪಿಸಲಾಗಿದೆ.
Karnataka High Court
Karnataka High Court
Published on

ನಿವೃತ್ತಿ ಬಳಿಕ ಪಿಂಚಣಿ ಹಾಗೂ ಇತರ ನಿವೃತ್ತಿ ಭತ್ಯೆಗಳನ್ನು ನಿರಾಕರಿಸಿದ್ದ ಕ್ರಮ ಪ್ರಶ್ನಿಸಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕೆಲ ನಿವೃತ್ತ ನೌಕರರು ಸಲ್ಲಿಸಿರುವ ಅರ್ಜಿ ಸಂಬಂಧ ರಾಜ್ಯ ಸರ್ಕಾರ ಹಾಗೂ ಸಂಸ್ಕೃತ ವಿಶ್ವವಿದ್ಯಾಲಯಕ್ಕೆ ಕರ್ನಾಟಕ ಹೈಕೋರ್ಟ್ ಸೋಮವಾರ ನೋಟಿಸ್ ಜಾರಿಗೊಳಿಸಿದೆ.

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ 20 ವರ್ಷಕ್ಕೂ ಅಧಿಕ ಅವಧಿಯವರೆಗೆ ಸೇವೆ ಸಲ್ಲಿಸಿರುವ ಎಸ್ ನಾರಾಯಣ ಸೇರಿ ಐವರು ನಿವೃತ್ತ ನೌಕರರು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಚ್ ಟಿ ನರೇಂದ್ರ ಪ್ರಸಾದ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಕೆಲ ಕಾಲ ಅರ್ಜಿ ಆಲಿಸಿದ ಪೀಠವು ಪ್ರತಿವಾದಿಗಳಾದ ರಾಜ್ಯ ಉನ್ನತ ಶಿಕ್ಷಣ ಇಲಾಖೆ, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಹಾಗೂ ರಾಜ್ಯ ಆರ್ಥಿಕ ಇಲಾಖೆಗೆ ನೋಟಿಸ್ ಜಾರಿಗೊಳಿಸಿ, ವಿಚಾರಣೆ ಮುಂದೂಡಿತು.

ಮೇಲುಕೋಟೆಯ ಸಂಸ್ಕೃತ ಸಂಶೋಧನಾ ಅಕಾಡೆಮಿಯಲ್ಲಿ 1979ರಿಂದ 1992ರ ಅವಧಿಯಲ್ಲಿ ಗುತ್ತಿಗೆ ಆಧಾರದಲ್ಲಿ ನೇಮಕೊಂಡಿದ್ದ ಅರ್ಜಿದಾರರೆಲ್ಲರೂ 2013ರಿಂದ 2017ರ ಅವಧಿಯಲ್ಲಿ ಸೇವೆಯಿಂದ ನಿವೃತ್ತಿ ಹೊಂದಿದ್ದಾರೆ. ಎರಡು ದಶಕಗಳಿಗೂ ಅಧಿಕ ಅವಧಿಯವರೆಗೆ ಸೇವೆ ಸಲ್ಲಿಸಿದ ಹೊರತಾಗಿಯೂ ಅರ್ಜಿದಾರರಿಗೆ ಪಿಂಚಣಿ ಇನ್ನಿತರ ನಿವೃತ್ತಿ ಭತ್ಯೆಗಳನ್ನು ನಿರಾಕರಿಸಲಾಗಿದೆ. ಗುತ್ತಿಗೆ ಆಧಾರದಲ್ಲಿ ನೇಮಕೊಂಡಿದ್ದರೂ 2007ರ ಏಪ್ರಿಲ್ 1ರಿಂದ ಸರ್ಕಾರ ಸಾಮಾನ್ಯ ವೇತನ ಶ್ರೇಣಿಯನ್ನು ಅರ್ಜಿದಾರರಿಗೂ ವಿಸ್ತರಿಸಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಅರ್ಜಿದಾರರಿಗೆ ಅವರ ಸೇವಾ ಅಧಿಯಲ್ಲಿ ವೇತನವನ್ನಷ್ಟೇ ಪಾವತಿಸಲಾಗಿದೆ. ಅರ್ಜಿದಾರರು 2006ರ ಏಪ್ರಿಲ್ 1ಕ್ಕೂ ಮೊದಲೇ ನೇಮಕಗೊಂಡಿದ್ದು, ಈ ದಿನಾಂಕಕ್ಕೂ ಮುಂಚಿತವಾಗಿ ಸರ್ಕಾರಿ ಅನುದಾನಿತ ಸಂಸ್ಥೆಗಳಿಗೆ ನೇಮಕಗೊಳ್ಳುವ ನೌಕರರು ಹಳೇ ಪಿಂಚಣಿ ಯೋಜನೆ (ಒಪಿಎಸ್) ಅಡಿಯಲ್ಲಿ ಪಿಂಚಣಿ ಹಾಗೂ ನಿವೃತ್ತಿ ಭತ್ಯೆಗಳನ್ನು ಪಡೆಯಲು ಅರ್ಹರಾಗಿರುತ್ತಾರೆ. ಮೇಲುಕೋಟೆ ಸಂಸ್ಕೃತ ಅಕಾಡೆಮಿಯಲ್ಲಿ ಸೇವೆ ಸಲ್ಲಿಸಿದವರಿಗೆ ನಿವೃತ್ತಿ ಭತ್ಯೆ ಪಾವತಿ ಬಗ್ಗೆ ಸಂಸ್ಕೃತ ವಿಶ್ವವಿದ್ಯಾಲಯ ಸಹ ಶಿಫಾರಸ್ಸು ಮಾಡಿದೆ. ಹೀಗಿದ್ದರೂ, ಅರ್ಜಿದಾರರಿಗೆ ಸೌಲಭ್ಯ ನಿರಾಕರಿಸಲಾಗಿದೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.

ಮೇಲುಕೋಟೆಯ ಸಂಸ್ಕೃತ ಸಂಶೋಧನಾ ಅಕಾಡೆಮಿಗೆ 2015ರ ಮಾರ್ಚ್ 25ರಿಂದ 6ನೇ ವೇತನ ಆಯೋಗದ ಲಾಭಗಳನ್ನು ವಿಸ್ತರಿಸಲಾಗಿದೆ. ಆದರೆ, ಅರ್ಜಿದಾರರಿಗೆ ಸಂಬಂಧಿಸಿದಂತೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಸಂಬಂಧ ಅರ್ಜಿದಾರರ ಮನವಿ ಪರಿಗಣಿಸಿ, ಸೂಕ್ತ ತೀರ್ಮಾನ ಕೈಗೊಳ್ಳುವಂತೆ ಮಾನವ ಹಕ್ಕುಗಳ ಆಯೋಗ ಹಾಗೂ ಹೈಕೋರ್ಟ್ ಸಹ ಆದೇಶ ನೀಡಿವೆಯಾದರೂ, ಅರ್ಜಿದಾರರ ಮನವಿಗಳನ್ನು ಸರ್ಕಾರ ತಿರಸ್ಕರಿಸಿದೆ. ಆದ್ದರಿಂದ, ಅರ್ಜಿದಾರರು ನಿವೃತ್ತಿ ಹೊಂದಿದ ದಿನಾಂಕದಿಂದ ಅನ್ವಯವಾಗುವಂತೆ ಪಿಂಚಣಿ ಹಾಗೂ ಇತರ ನಿವೃತ್ತಿ ಭತ್ಯೆಗಳನ್ನು ಪಾವತಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

Kannada Bar & Bench
kannada.barandbench.com