National Green Tribunal (NGT)
National Green Tribunal (NGT)

ವಿಷಕಾರಿ ಗಾಳಿಯಿಂದ ಖಿನ್ನತೆ, ಆತಂಕ: ಅಸ್ಪಷ್ಟ ಉತ್ತರಕ್ಕಾಗಿ ಪರಿಸರ ಸಚಿವಾಲಯಕ್ಕೆ ₹25,000 ದಂಡ ವಿಧಿಸಿದ ಎನ್‌ಜಿಟಿ

ಪದೇ ಪದೇ ಪ್ರಶ್ನೆಗಳ ಹೊರತಾಗಿಯೂ, ವಾಯುಮಾಲಿನ್ಯವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಸಚಿವಾಲಯ ತೆಗೆದುಕೊಂಡ ಒಂದೇ ಒಂದು ಕ್ರಮವನ್ನೂ ಕೂಡ ಪರಿಸರ ಸಚಿವಾಲಯದ ಪರ ವಕೀಲರಿಗೆ ಪಟ್ಟಿ ಮಾಡಲು ಸಾಧ್ಯವಾಗಲಿಲ್ಲ ಎಂದು ನ್ಯಾಯಮಂಡಳಿ ಹೇಳಿದೆ.
Published on

ವಿಷಕಾರಿ ಗಾಳಿಯ ಆರೋಗ್ಯದ ದುಷ್ಪರಿಣಾಮಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಅಸ್ಪಷ್ಟ ಮತ್ತು ಅಪ್ರಸ್ತುತ ಉತ್ತರವನ್ನು ಸಲ್ಲಿಸಿದ್ದಕ್ಕಾಗಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು (ಎನ್‌ಜಿಟಿ) ಇತ್ತೀಚೆಗೆ ಪರಿಸರ, ಅರಣ್ಯ ಮತ್ತು ಹವಾಮಾನ ವೈಪರೀತ್ಯ ಸಚಿವಾಲಯಕ್ಕೆ (ಎಂಒಇಎಫ್ ಮತ್ತು ಸಿಸಿ) ₹25,000 ದಂಡ ವಿಧಿಸಿದೆ.

ಅಧ್ಯಕ್ಷ ನ್ಯಾಯಮೂರ್ತಿ ಪ್ರಕಾಶ್ ಶ್ರೀವಾಸ್ತವ ಮತ್ತು ತಜ್ಞ ಸದಸ್ಯ ಡಾ.ಎ.ಸೆಂಥಿಲ್ ವೇಲ್ ಅವರನ್ನೊಳಗೊಂಡ ಪೀಠವು "ಪರಿಸರ ಸಚಿವಾಲಯವು ಯಾವ ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಕೇಳಿದಾಗ, ಸಚಿವಾಲಯವು ನೀಡಿದ ಉತ್ತರವು ಈ ಅಂಶದ ಬಗ್ಗೆ ಸ್ಪಷ್ಟವಾಗಿಲ್ಲ. ಪದೇ ಪದೇ ಈ ಪ್ರಶ್ನೆಗಳನ್ನು ಕೇಳಿದ ಹೊರತಾಗಿಯೂ, ಸಚಿವಾಲಯದಿಂದ ವಾಯುಮಾಲಿನ್ಯವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ತೆಗೆದುಕೊಂಡ ಒಂದೇ ಒಂದು ಕ್ರಮವನ್ನು ಸಹ ನೀಡಲು ಸಾಧ್ಯವಾಗಲಿಲ್ಲ" ಎಂದು ವಕೀಲರು ಒಪ್ಪಿಕೊಂಡಿದ್ದಾರೆ.

ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ವಿಷಕಾರಿ ಗಾಳಿಯ ಸಂಭಾವ್ಯ ದುಷ್ಪರಿಣಾಮಗಳನ್ನು ಎತ್ತಿ ತೋರಿಸುವ ಸುದ್ದಿ ಲೇಖನಗಳ ಆಧಾರದ ಮೇಲೆ ದಾಖಲಿಸಿಕೊಂಡಿರುವ ಸ್ವಯಂಪ್ರೇರಿತ ವಿಚಾರಣೆಯನ್ನು ಎನ್‌ಜಿಟಿ ನಡೆಸಿತು.

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ (ಸಿಪಿಸಿಬಿ) ತನ್ನ ಪ್ರತಿಕ್ರಿಯೆಯಲ್ಲಿ ಗಾಳಿಯಲ್ಲಿ ವಿವಿಧ ಲೋಹಗಳು ಮತ್ತು ಇತರ ಮಾಲಿನ್ಯಕಾರಕಗಳ ಉಪಸ್ಥಿತಿಯನ್ನು ಒಪ್ಪಿಕೊಂಡಿದೆ. ಆದಾಗ್ಯೂ, ಅವುಗಳ ಹರಡುವಿಕೆಯಿಂದ ಉಂಟಾಗುವ ವಾಯುಮಾಲಿನ್ಯವನ್ನು ನಿಯಂತ್ರಿಸಲು ಮತ್ತು ತಡೆಗಟ್ಟಲು ಪರಿಣಾಮಕಾರಿ ಕ್ರಮಗಳನ್ನು ಪ್ರದರ್ಶಿಸಲು ಸಿಪಿಸಿಬಿ ವಿಫಲವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಸಚಿವಾಲಯದ ಉತ್ತರವು ಗಾಳಿಯಲ್ಲಿ ಮಾಲಿನ್ಯಕಾರಕಗಳ ಉಪಸ್ಥಿತಿಯನ್ನು ಒಪ್ಪಿಕೊಂಡಿದೆ ಮತ್ತು ವಿವಿಧ ಅಧಿಕಾರಿಗಳು ಕಾಲಕಾಲಕ್ಕೆ ಕೆಲವು ನಿರ್ದೇಶನಗಳನ್ನು ನೀಡಿದ್ದಾರೆ ಎಂದು ಮಾತ್ರವೇ ಹೇಳಿರುವುದನ್ನು ನ್ಯಾಯಾಲಯ ಗಮನಿಸಿತು.

ಈ ವಿಷಯದಲ್ಲಿ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ ಎಂದು ಎನ್‌ಜಿಟಿ ಹೇಳಿದೆ. ಅಂತಿಮವಾಗಿ ಸಚಿವಾಲಯಕ್ಕೆ ₹25,000 ದಂಡ ವಿಧಿಸಿದ ಎನ್‌ಜಿಟಿ ವಾಯುಮಾಲಿನ್ಯವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ತೆಗೆದುಕೊಂಡ ಎಲ್ಲಾ ಕ್ರಮಗಳ ವಿವರಗಳನ್ನು ಒಳಗೊಂಡ ಪೂರಕ ಉತ್ತರವನ್ನು ಒಂದು ತಿಂಗಳೊಳಗೆ ಸಲ್ಲಿಸುವಂತೆ ನಿರ್ದೇಶಿಸಿತು.

[ಆದೇಶ ಓದಿ]

Attachment
PDF
NGT on its own motion order dated 19.12.2023
Preview
Kannada Bar & Bench
kannada.barandbench.com