ಸವಲತ್ತು ರಜೆ ನಗದೀಕರಣ ನಿರಾಕರಿಸುವುದು ಸಾಂವಿಧಾನಿಕ ಹಕ್ಕಿನ ಉಲ್ಲಂಘನೆ: ಬಾಂಬೆ ಹೈಕೋರ್ಟ್

ರಜೆ ನಗದೀಕರಣವು ಆಸ್ತಿಗೆ ಸಮನಾಗಿದ್ದು ಉದ್ಯೋಗಿ ಗಳಿಕೆ ರಜೆಯನ್ನು ಸಂಚಯಿಸಿಟ್ಟುಕೊಂಡಿದ್ದರೆ ಅದನ್ನು ನಗದೀಕರಿಸುವುದು ಆತನ ಹಕ್ಕಾಗಿರುತ್ತದೆ ಎಂದ ನ್ಯಾಯಾಲಯ.
Bombay High Court
Bombay High Court

ರಜೆ ನಗದೀಕರಣ ವೇತನಕ್ಕೆ ಸಮನಾಗಿದ್ದು ರಜೆ ನಗದೀಕರಣದಿಂದ ವ್ಯಕ್ತಿಯನ್ನು ವಂಚಿತಗೊಳಿಸುವುದು ಸಾಂವಿಧಾನಿಕ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಬಾಂಬೆ ಹೈಕೋರ್ಟ್ ಇತ್ತೀಚೆಗೆ ಹೇಳಿದೆ [ದತ್ತಾರಾಮ್ ಸಾವಂತ್ ಮತ್ತಿತರರು ಹಾಗೂ ವಿದರ್ಭ ಕೊಂಕಣ ಗ್ರಾಮೀಣ ಬ್ಯಾಂಕ್ ನಡುವಣ ಪ್ರಕರಣ].

ರಜೆ ನಗದೀಕರಣ ಆಸ್ತಿಗೆ ಸಮನಾಗಿದ್ದು ಉದ್ಯೋಗಿ ತನ್ನ ಗಳಿಕೆ ರಜೆಯನ್ನು ತನ್ನ ಖಾತೆಯಲ್ಲಿ ಸಂಗ್ರಹಿಸಿಟ್ಟುಕೊಂಡಿದ್ದರೆ ಅದನ್ನು ನಗದೀಕರಿಸುವುದು ಆತನ ಹಕ್ಕಾಗುತ್ತದೆ ಎಂದು ನ್ಯಾಯಮೂರ್ತಿಗಳಾದ ನಿತಿನ್ ಜಾಮ್ದಾರ್ ಮತ್ತು ಎಂ ಎಂ ಸತಾಯೆ ಅವರಿದ್ದ ಪೀಠ ತಿಳಿಸಿದೆ.

ರಜೆ ನಗದೀಕರಣ ಸಂಬಳವನ್ನು ಹೋಲಲಿದ್ದು  ಯಾವುದೇ ಮಾನ್ಯ ಶಾಸನಬದ್ಧ ನಿಯಮಾವಳಿಗಳಿಲ್ಲದೆ ವ್ಯಕ್ತಿಯ ಆಸ್ತಿ ಕಸಿದುಕೊಳ್ಳುವುದು ಸಂವಿಧಾನದ 300 ಎ ವಿಧಿಯ ಉಲ್ಲಂಘನೆಯಾಗುತ್ತದೆ. ಬಳಕೆಯಾಗದ ರಜೆಯ ಖಾತೆಯಲ್ಲಿರುವ ಪಾವತಿಸಿದ ರಜೆಯ ನಗದೀಕರಣ ಬಹುಮಾನವಲ್ಲ. ಉದ್ಯೋಗಿ ತನ್ನ ಗಳಿಕೆ ರಜೆಯನ್ನು ತನ್ನ ಖಾತೆಯಲ್ಲಿ ಸಂಗ್ರಹಿಸಿಟ್ಟುಕೊಂಡಿದ್ದರೆ ಅದನ್ನು ನಗದೀಕರಿಸುವುದು ಆತನ ಹಕ್ಕಾಗುತ್ತದೆ ಎಂದು ನ್ಯಾಯಾಲಯ ವಿವರಿಸಿದೆ.

ತಮ್ಮ ಉದ್ಯೋಗದಾತ ಸಂಸ್ಥೆಯಾದ ವಿದರ್ಭ ಕೊಂಕಣ ಗ್ರಾಮೀಣ ಬ್ಯಾಂಕ್ ತಮಗೆ ಸವಲತ್ತು ರಜೆ ನಿರಾಕರಿಸಿದ್ದು ರಜೆ ನಗದೀಕರಣಕ್ಕೆ ಅವಕಾಶ ಮಾಡಿಕೊಡುವಂತೆ ಕೋರಿ ದತ್ತಾರಾಮ್ ಸಾವಂತ್ ಮತ್ತು ಸೀಮಾ ಸಾವಂತ್ ಎಂಬ ಇಬ್ಬರು ಉದ್ಯೋಗಿಗಳು ನ್ಯಾಯಾಲಯದ ಮೆಟ್ಟಿಲೇರಿದ್ದರು.

ಈ ಇಬ್ಬರೂ ರಾಜೀನಾಮೆಗೆ ಮುನ್ನ ಬ್ಯಾಂಕ್‌ನಲ್ಲಿ 30 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಮೇಲಾಧಿಕಾರಿಗಳು ರಾಜೀನಾಮೆ ಅಂಗೀಕರಿಸಿ ಅನುಭವ ಪ್ರಮಾಣಪತ್ರ ನೀಡಿದ್ದರು.

ಬ್ಯಾಂಕ್ ನಿಯಮಗಳು ನೌಕರರಿಗೆ ಕರ್ತವ್ಯದ ಮೇಲೆ ಪ್ರತಿ 11 ದಿನಗಳ ಸೇವೆಗೆ ಒಂದು ದಿನ  ಸವಲತ್ತು ರಜೆ ಒದಗಿಸುತ್ತವೆ.

ದತ್ತಾರಾಮ್ ಸಾವಂತ್ ಅವರು 250 ದಿನಗಳ ಸವಲತ್ತು ರಜೆ ಹೊಂದಿದ್ದರು. ಅವರ ಪ್ರಕಾರ, ರಜೆ ನಗದೀಕರಣಗೊಂಡರೆ ಅದು ₹6,57,554 ಆಗುತ್ತಿತ್ತು. ಸೀಮಾ ಸಾವಂತ್ ಅವರು 210 ದಿನಗಳ ಸವಲತ್ತು ರಜೆ ಹೊಂದಿದ್ದು, ಅದರ ಮೊತ್ತ ₹4,66,830ರಷ್ಟಾಗುತ್ತಿತ್ತು.

ಇಬ್ಬರು ಅರ್ಜಿದಾರರು ತಮ್ಮ ರಜೆ ನಗದೀಕರಿಸುವಂತೆ ಮನವಿ ಮಾಡಿದಾಗ, ಅರ್ಜಿದಾರರು ಸೇವೆಗೆ ರಾಜೀನಾಮೆ ನೀಡಿದ ನಂತರವೇ ರಾಜೀನಾಮೆ ನೀಡಿದವರಿಗೆ ಸವಲತ್ತು ರಜೆ ನಗದೀಕರಿಸುವ ಸೌಲಭ್ಯ ಸೆಪ್ಟೆಂಬರ್ 14, 2015ರಂದು ಅಸ್ತಿತ್ವಕ್ಕೆ ಬಂದಿದೆ ಎಂದು ಬ್ಯಾಂಕ್ ಪತ್ರ ಬರೆದಿತ್ತು.

ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದ ಅರ್ಜಿದಾರರು ತಮ್ಮ ಸವಲತ್ತು ರಜೆಯನ್ನು ವಾರ್ಷಿಕ ಶೇ 8ರ ಬಡ್ಡಿದರದೊಂದಿಗೆ ಪಾವತಿಸುವಂತೆ ಬ್ಯಾಂಕ್‌ಗೆ ನಿರ್ದೇಶನ ನೀಡಬೇಕು ಎಂದು ಕೋರಿದರು.    

ಸವಲತ್ತು ರಜೆ ನಗದೀಕರಣದ ಸಂಚಿತ ಹಕ್ಕನ್ನು ಬ್ಯಾಂಕ್‌ ತಿರಸ್ಕರಿಸುವಂತಿಲ್ಲ. ಬ್ಯಾಂಕ್‌ ರಜೆ ನಗದೀಕರಣ ನಿರಾಕರಿಸುವುದು ಮನಸೋಇಚ್ಛೆಯ ಕ್ರಮವಾಗುತ್ತದೆ ಎಂದ ನ್ಯಾಯಾಲಯ ಬ್ಯಾಂಕ್‌ ಆರು ವಾರದೊಳಗೆ ಶೇ 6ರ ಬಡ್ಡಿದರದೊಂದಿಗೆ ರಜೆ ನಗದೀಕರಣದ ಹಣ ಪಾವತಿಸಬೇಕು ಎಂಬುದಾಗಿ ನಿರ್ದೇಶಿಸಿತು.

Kannada Bar & Bench
kannada.barandbench.com