ಅರ್ಜಿದಾರ- ವಕೀಲ ಮತ್ತವರ ಅಡ್ವೊಕೇಟ್ ಆನ್ ರೆಕಾರ್ಡ್ (ಎಒಆರ್) ಒಬ್ಬರು ಶುಕ್ರವಾರ ಸುಪ್ರೀಂ ಕೋರ್ಟ್‌ನ ಕೋಪಕ್ಕೆ ತುತ್ತಾದ ಘಟನೆ ನಡೆದಿದೆ. ಕರ್ನಾಟಕ ಹೈಕೋರ್ಟ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕಾಗಿ ಈ ಇಬ್ಬರ ವಿರುದ್ಧ ಸುಪ್ರೀಂ ಕೋರ್ಟ್ ನ್ಯಾಯಾಂಗ ನಿಂದನೆ ನೋಟಿಸ್ ಜಾರಿ ಮಾಡಿದೆ (ಮೋಹನ್ ಚಂದ್ರ ಪಿ ತ್ತು ಕರ್ನಾಟಕ ಸರ್ಕಾರ ಇನ್ನಿತರರ ನಡುವಣ ಪ್ರಕರಣ).
ಹೇಳಿಕೆಗೆ ಸಂಬಂಧಿಸಿದಂತೆ ಅರ್ಜಿದಾರರಾದ ಮೋಹನ್ ಚಂದ್ರ ಪಿ ಮತ್ತು ಎಒಆರ್ ವಿಪಿನ್ ಕುಮಾರ್ ಜೈ ಅವರ ಪ್ರತಿಕ್ರಿಯೆ ಕೇಳಿರುವ ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಬಿ ವಿ ನಾಗರತ್ನ ಅವರಿದ್ದ ಪೀಠ ಮುಂದಿನ ವಿಚಾರಣೆ ನಡೆಯುವ ಡಿಸೆಂಬರ್ 2 ರಂದು ನ್ಯಾಯಾಲಯದಲ್ಲಿ ಖುದ್ದು ಹಾಜರಿರುವಂತೆ ಇಬ್ಬರಿಗೂ ಸೂಚಿಸಿತು.
ನಿಂದನಾತ್ಮಕ ಹೇಳಿಕೆಗೆ ಸಹಿ ಮಾಡುವ ವಕೀಲರು ಸಹ ನ್ಯಾಯಾಂಗ ನಿಂದನೆಗೊಳಪಡುತ್ತಾರೆ ಎಂದು 1955ರ ಎಂ ವೈ. ಶರೀಫ್ ಮತ್ತು ನಾಗಪುರ ಹೈಕೋರ್ಟ್‌ಪೀಠ ಮತ್ತಿತರರ ನಡುವಣ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠ ತೀರ್ಪು ನೀಡಿದೆ ಎಂದು ಹೇಳಿತು.
ರಾಜ್ಯದ ಮುಖ್ಯ ಮಾಹಿತಿ ಆಯುಕ್ತರು ಮತ್ತು ಮಾಹಿತಿ ಆಯುಕ್ತರ ಆಯ್ಕೆ ಪ್ರಶ್ನಿಸಿದ್ದ ಚಂದ್ರ ಅವರ ರಿಟ್ ಅರ್ಜಿಯನ್ನು ಈ ವರ್ಷದ ಆರಂಭದಲ್ಲಿ ಹೈಕೋರ್ಟ್‌ನ ಏಕ-ಸದಸ್ಯ ಪೀಠ ವಜಾಗೊಳಿಸಿತ್ತು. ಸೆಪ್ಟೆಂಬರ್‌ನಲ್ಲಿ, ಹೈಕೋರ್ಟ್‌ನ ವಿಭಾಗೀಯ ಪೀಠ ಕೂಡ ಚಂದ್ರ ಅವರ ಅತೃಪ್ತಿಯನ್ನು ಬೆಂಬಲಿಸುವಂತಹ ಯಾವುದೇ ಆಧಾರ ಇಲ ಎಂದು ತಿಳಿಸಿ ನ್ಯಾಯಾಲಯದ ಸಮಯ ವೆಚ್ಚ ಮಾಡಿದ್ದಕ್ಕಾಗಿ ₹ 5 ಲಕ್ಷ ದಂಡ ವಿಧಿಸಿತ್ತು. ಈ ತೀರ್ಪನ್ನು ಚಂದ್ರ ಅವರು ಎಒಆರ್ ವಿಪಿನ್ ಕುಮಾರ್ ಜೈ ಅವರ ಮೂಲಕ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.
“ಕೇವಲ ಪ್ರತಿವಾದಿಗಳ ಪರ ವಹಿಸಲು ಮತ್ತು ಅರ್ಜಿದಾರರನ್ನು ಶೋಷಿಸಿ ಪ್ರಚಾರ ಪಡೆಯಲು ಕರ್ನಾಟಕ ಹೈಕೋರ್ಟ್‌ನ ವಿಭಾಗೀಯ ಪೀಠ ದುರುದ್ದೇಶದಿಂದ ದಂಡ ವಿಧಿಸಿದೆ” ಎಂದು ಮೇಲ್ಮನವಿಯಲ್ಲಿ ಉಲ್ಲೇಖಿಸಲಾಗಿತ್ತು.
ಆದರೆ “ಇಂತಹ ಅವಲೋಕನಗಳು ಕರ್ನಾಟಕ ಹೈಕೋರ್ಟ್‌ನೆಡೆಗೆ ಕೇವಲ ಅವಹೇಳನಕಾರಿ ಮಾತ್ರವೇ ಅಲ್ಲ ಬದಲಿಗೆ ತೀವ್ರ ನಿಂದನಾತ್ಮಕವಾಗಿವೆ ಕೂಡ” ಎಂದು ನ್ಯಾಯಾಲಯ ಹೇಳಿತು.
[ಆದೇಶದ ಪ್ರತಿಯನ್ನು ಇಲ್ಲಿ ಓದಿ]