ಮುಸ್ಲಿಮ್‌ ಮಹಿಳೆಯರ ವಿರುದ್ಧ ಅವಹೇಳನಕಾರಿ ಹೇಳಿಕೆ: ಕಲ್ಲಡ್ಕ ಪ್ರಭಾಕರ್‌ ಭಟ್‌ ವಿರುದ್ಧ ಎಫ್‌ಐಆರ್‌ ದಾಖಲು

ಹಿಂದೂ ಜಾಗರಣಾ ವೇದಿಕೆ ಆಯೋಜಿಸಿದ್ದ ಸಂಕೀರ್ತನಾ ಯಾತ್ರೆಯಲ್ಲಿ ವಿವಾದಾತ್ಮಕ ಮಾತುಗಳನ್ನಾಡಿದ್ದ ಪ್ರಭಾಕರ್‌ ಭಟ್‌ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 294, 509, 153ಎ, 298 ಅಡಿ ಪ್ರಕರಣ ದಾಖಲಿಸಲಾಗಿದೆ.
RSS Leader Kalladka Prabhakar Bhat
RSS Leader Kalladka Prabhakar Bhat

ಧಾರ್ಮಿಕವಾಗಿ ದ್ವೇಷ ಬಿತ್ತುವ ಮತ್ತು ಮುಸ್ಲಿಮ್‌ ಮಹಿಳೆಯರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಆರ್‌ಎಸ್‌ಎಸ್‌ ಮುಖಂಡ ಕಲ್ಲಡ್ಕ ಪ್ರಭಾಕರ್‌ ಭಟ್‌ ವಿರುದ್ಧ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಟೌನ್‌ ಠಾಣೆಯಲ್ಲಿ ಮಂಗಳವಾರ ಎಫ್‌ಐಆರ್‌ ದಾಖಲಾಗಿದೆ.

ಹನುಮ ಜಯಂತ್ಯುತ್ಸವ ಅಂಗವಾಗಿ ಡಿಸೆಂಬರ್‌ 24ರಂದು ಶ್ರೀರಂಗಪಟ್ಟಣದಲ್ಲಿ ಹಿಂದೂ ಜಾಗರಣಾ ವೇದಿಕೆಯು ಆಯೋಜಿಸಿದ್ದ ಸಂಕೀರ್ತನಾ ಯಾತ್ರೆಯಲ್ಲಿ ಪ್ರಭಾಕರ್‌ ಭಟ್‌ ಮುಸ್ಲಿಮರ ವಿರುದ್ಧ ಧಾರ್ಮಿಕ ದ್ವೇಷಕಾರಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತೆ ನಜ್ಮಾ ನಜೀರ್‌ ಅವರು ದೂರಿನಲ್ಲಿ ತಿಳಿಸಿದ್ದಾರೆ.

ಇದನ್ನು ಆಧರಿಸಿ ಶ್ರೀರಂಗಪಟ್ಟಣ ಟೌನ್‌ ಠಾಣೆಯ ಪೊಲೀಸರು ಪ್ರಭಾಕರ್‌ ಭಟ್‌ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 294 (ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲ ಮಾತುಗಳನ್ನು ಆಡುವುದು), 509 (ಮಹಿಳೆಯ ಖಾಸಗಿತನಕ್ಕೆ ಸಂಬಂಧಿಸಿದ ಮಾತುಗಳನ್ನಾಡುವುದು), 153ಎ (ಧರ್ಮದ ಆಧಾರದಲ್ಲಿ ಸಮುದಾಯಗಳ ನಡುವೆ ದ್ವೇಷ ಹರಡುವುದು) ಮತ್ತು 298 (ಉದ್ದೇಶಪೂರ್ವಕವಾಗಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವುದು) ಅಡಿ ಪ್ರಕರಣ ದಾಖಲಿಸಿದ್ದಾರೆ.

ಭಾಷಣದ ವೇಳೆ ಭಟ್‌, "ನಿಮಗೆ (ಮುಸ್ಲಿಮರಿಗೆ) ತಲಾಖ್‌ ಹೇಳುವ ಅವಕಾಶ ಇತ್ತು. ಪ್ರಧಾನಿ ಮೋದಿಯವರ ಸರ್ಕಾರದಿಂದಾಗಿ ತ್ರಿವಳಿ ತಲಾಖ್‌ ರದ್ದಾಗಿದೆ. ತ್ರಿವಳಿ ತಲಾಖ್‌ ರದ್ದುಪಡಿಸುವ ಮೂಲಕ ಅವರಿಗೆ ಪರ್ಮನೆಂಟ್‌ ಗಂಡ ಕೊಟ್ಟಿದ್ದು ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರ. ನಿಮ್ಮಲ್ಲಿ ಯುವತಿ, ಯುವಕರು ಇಲ್ಲವೇ? ನಮ್ಮನ್ನ ಯಾಕೆ ಟಾರ್ಗೆಟ್‌ ಮಾಡುತ್ತೀರಾ? ಮೋದಿ ಸರ್ಕಾರ ಬಂದ ಮೇಲೆ ತಲಾಖ್‌ ಬಂತು. ಅವರಿಗೆ ದಿನಕ್ಕೆ ಒಬ್ಬ ಗಂಡ ಇದ್ದ, ಅವರಿಗೆ ಪರ್ಮನೆಂಟ್‌ ಗಂಡ ಇರಲಿಲ್ಲ. ಪರ್ಮನೆಂಟ್‌ ಗಂಡನನ್ನ ಕೊಟ್ಟಿದ್ದು ಮೋದಿ ಸರ್ಕಾರ: ಎಂದಿದ್ದರು.

ಮುಂದುವರೆದು, "ದೇಶದಲ್ಲಿ ಹಿಂದೂಗಳು ಉಳಿಯುವುದು ಹೇಗೆ? ಹಿಂದೂಗಳು ಕಡಿಮೆ ಆದರೆ ಪಾಕಿಸ್ತಾನ್‌ ಜಿಂದಾಬಾದ್‌ ಅನ್ನುತ್ತಾರೆ. ನಮ್ಮ ಕೋರ್ಟ್‌ ವ್ಯವಸ್ಥೆ ಹೇಗಿದೆ? ಕಸಬ್‌ಗಾಗಿ ರಾತ್ರಿ ಕೋರ್ಟ್‌ ತೆರೆಯಿತು. ದೇವರ ದಯೆ ಅವನಿಗೆ ಶಿಕ್ಷೆ ಆಯಿತು. ಅವನಿಗೂ ಬೆಂಬಲ ವ್ಯಕ್ತಪಡಿಸಿದ್ರು, ಆದರೂ ನಾವು ಸುಮ್ಮನಿರಬೇಕಾ?" ಎಂದು ಪ್ರಶ್ನಿಸಿದ್ದರು.

ಬಹು ಪತ್ನಿತ್ವ ಪಿಡುಗು, ತಲಾಖ್‌ ಕಾಟದಿಂದ ಈ ಹಿಂದೆ ಮುಸ್ಲಿಮ್‌ ಹೆಣ್ಣು ಮಕ್ಕಳಿಗೆ ಶಾಶ್ವತ ಪತಿ ಇರಲಿಲ್ಲ. ದಿ ಕೇರಳ ಸ್ಟೋರಿ, ಕಾಶ್ಮೀರ್‌ ಫೈಲ್ಸ್‌ ಸಿನಿಮಾ ನೋಡಿ, ಮತಾಂತರ, ಹಿಂದೂಗಳ ಮೇಲಿನ ದೌರ್ಜನ್ಯ ತೋರಿಸಿದ್ದಾರೆ. ಮುಸ್ಲಿಮ್‌ ಹುಡುಗರಲ್ಲ, ಯುವತಿಯರು ಮೋಸ ಮಾಡುತ್ತಿದ್ದಾರೆ. ದಿ ಕೇರಳ ಸ್ಟೋರಿ ಮೂವಿಯಲ್ಲಿ ಈ ಬಗ್ಗೆ ತೋರಿಸಿದ್ದಾರೆ. ಮತಾಂತರ ಮಾಡಲು ಲವ್‌ ಜಿಹಾದ್‌ ಪ್ರಯತ್ನಗಳಾಗುತ್ತಿವೆ ಎಂದು ಆರೋಪಿಸಿದ್ದರು.

ಅಂಬೇಡ್ಕರ್‌ ದೇಶ ವಿಭಜನೆ ಮಾಡಬೇಡಿ ಎಂದಿದ್ದರು. ದೇಶ ಉಳಿಸಿಕೊಳ್ಳುವ ಮಹತ್‌ ಕಾರ್ಯ ಹಿಂದೂಗಳಿಂದ ಮಾತ್ರ ಸಾಧ್ಯ. ಮುಸ್ಲಿಮರಿಗೆ ಹಲವು ದೇಶಗಳಿವೆ. ಆದರೆ, ಹಿಂದೂಗಳಿಗೆ ಭಾರತ ಮಾತ್ರ ಇರೋದು. ಹಿಂದೂಗಳಿಗೆ ಬೇರೆ ಕಡೆ ಜಾಗ ಇಲ್ಲ. ಅದಕ್ಕಾಗಿ ನಾವು ಹೋರಾಟ ಮಾಡಬೇಕು ಎಂದಿದ್ದರು.

Related Stories

No stories found.
Kannada Bar & Bench
kannada.barandbench.com