ಕೇಜ್ರಿವಾಲ್ ಸಾಕ್ಷ್ಯ ನಾಶ ಮಾಡಿರುವುದು ಅವರು ತಪ್ಪಿತಸ್ಥ ಎಂಬುದರ ಸೂಚಕ: ಸುಪ್ರೀಂ ಕೋರ್ಟ್‌ನಲ್ಲಿ ಇ ಡಿ ಪ್ರತಿಪಾದನೆ

ದೆಹಲಿಯ ಅಬಕಾರಿ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತಮ್ಮನ್ನು ಬಂಧಿಸಿರುವುದನ್ನು ಪ್ರಶ್ನಿಸಿ ಕೇಜ್ರಿವಾಲ್ ಅವರು ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ ಇ ಡಿ ನ್ಯಾಯಾಲಯಕ್ಕೆ ಪ್ರತಿಕ್ರಿಯೆ ನೀಡಿತು.
Arvind Kejriwal
Arvind Kejriwal

ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರು ರಾಜಕಾರಣಿ ಎಂಬ ಕಾರಣಕ್ಕೆ ಬೇರೆ ಯಾವುದೇ ಅಪರಾಧಿಗಳಿಗಿಂತಲೂ ಅವರನ್ನು ಭಿನ್ನವಾಗಿ ಪರಿಗಣಿಸುವಂತಿಲ್ಲ. ಹಾಗೆ ಮಾಡುವುದು ನಿರಂಕುಶವಾಗಲಿದ್ದು ಸಂವಿಧಾನದ ಸಂವಿಧಾನದ 14ನೇ ವಿಧಿಯ ಅಡಿಯಲ್ಲಿ ಒದಗಿಸಲಾದ ಸಮಾನತೆಯ ಹಕ್ಕನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ಜಾರಿ ನಿರ್ದೇಶನಾಲಯ ಸುಪ್ರೀಂ ಕೋರ್ಟ್‌ಗೆ ಬುಧವಾರ ತಿಳಿಸಿದೆ.

ದೆಹಲಿಯ ಅಬಕಾರಿ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇ ಡಿ) ತಮ್ಮನ್ನು ಬಂಧಿಸಿರುವುದನ್ನು ಪ್ರಶ್ನಿಸಿ ಕೇಜ್ರಿವಾಲ್ ಅವರು ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ ಇ ಡಿ ನ್ಯಾಯಾಲಯಕ್ಕೆ ಪ್ರತಿಕ್ರಿಯೆ ನೀಡಿದೆ.  

ಅವರು ಅಪರಾಧ ಎಸಗಿರುವುದನ್ನು ಸಾಬೀತುಪಡಿಸಲು ಪಿಎಂಎಲ್‌ಎ ಸೆಕ್ಷನ್‌ 19ರ ಅಡಿಯಲ್ಲಿ ಸಾಕ್ಷ್ಯ ಸಂಗ್ರಹಿಸಬೇಕಿದ್ದರಿಂದ  ಕೇಜ್ರಿವಾಲ್‌ ಅವರನ್ನು ಬಂಧಿಸಲಾಗಿತ್ತು ಎಂದು ನಿನ್ನೆ (ಏಪ್ರಿಲ್ 24) ಸಲ್ಲಿಸಲಾದ ಅಫಿಡವಿಟ್‌ನಲ್ಲಿ ಇ ಡಿ ವಿವರಿಸಿದೆ.

ಅಫಿಡವಿಟ್‌ನ ಪ್ರಮುಖಾಂಶಗಳು

 • ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತಪ್ಪಿತಸ್ಥನೆನಿಸಿಕೊಂಡ ರಾಜಕಾರಣಿಯನ್ನು ಭಿನ್ನವಾಗಿ ಕಾಣುವುದು ಕಾನೂನಿನ ಮುಂದೆ ಸಮಾನರು ಎನ್ನುವ ತತ್ವವನ್ನು ಉಲ್ಲಂಘಿಸಲಿದ್ದು ಆ ಮೂಲಕ ಸಂವಿಧಾನದ ಮೂಲ ರಚನೆಗೆ ಧಕ್ಕೆ ತಂದಂತಾಗುತ್ತದೆ.

 • ಪ್ರಕರಣದಲ್ಲಿ ಸಾಕ್ಷ್ಯಗಳ ಸಕ್ರಿಯ ನಾಶವಾಗಿರುವುದು ಆರೋಪಿಗಳು ಅಕ್ರಮ ಹಣ ವರ್ಗಾವಣೆ ಅಪರಾಧದ ಸಾಕ್ಷ್ಯ ನಾಶ ಮಾಡಲು ಪ್ರಜ್ಞಾಪೂರ್ವಕವಾಗಿ ಯತ್ನಿಸಿದ್ದರೆಂಬ ತೀರ್ಮಾನಕ್ಕೆ ಕಾರಣವಾಗುತ್ತದೆ.

 • ಪಿಎಂಎಲ್‌ಎ ಸೆಕ್ಷನ್‌ 50ರ ಅಡಿ  ಸಾಕ್ಷ್ಯ ನಾಶವಾಗಿರುವುದು ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪಿಗಳು ಭಾಗಿಯಾಗಿರುವುದು ಅವರ ಹೇಳಿಕೆಗಳಿಂದ ದೃಢಪಟ್ಟಿದೆ.

 • ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೇಜ್ರಿವಾಲ್‌ ಬಂಧನವಾಗಿದೆ ಎಂಬ ವಾದದಲ್ಲಿ ಹುರುಳಿಲ್ಲ. ಒಬ್ಬ ವ್ಯಕ್ತಿ ಎಷ್ಟೇ ಉನ್ನತ ಸ್ಥಾನದಲ್ಲಿದ್ದರೂ ಸಾಕ್ಷ್ಯ ಆಧರಿಸಿ ಬಂಧನ ನಡೆದಿದ್ದರೆ ಆಗ ನ್ಯಾಯಸಮ್ಮತ ಚುನಾವಣೆಯ ಕಲ್ಪನೆಯ ಉಲ್ಲಂಘನೆಯಾಗದು.

 • ಕೇಜ್ರಿವಾಲ್‌ ಅವರ ವಾದವನ್ನು ಪುರಸ್ಕರಿಸಿದರೆ ಅಪರಾಧಿಗಳಾಗಿರುವ ರಾಜಕಾರಣಿಗಳು ಚುನಾವಣೆಯಲ್ಲಿ ಪ್ರಚಾರ ಮಾಡುವ ಅವಶ್ಯಕತೆ ಇರುವುದರಿಂದ ಅವರಿಗೆ ಬಂಧನದಿಂದ ವಿನಾಯಿತಿ ನೀಡಿದಂತಾಗುತ್ತದೆ

 • ದೊಡ್ಡ ಪ್ರಮಾಣದಲ್ಲಿ ಸಾಕ್ಷ್ಯ ನಾಶವಾಗಿರುವ ಹಿನ್ನೆಲೆಯಲ್ಲಿ ಪ್ರಕರಣವನ್ನು ನೋಡಬೇಕಾಗುತ್ತದೆ.

 • ಒಟ್ಟು 170 ಕ್ಕೂ ಹೆಚ್ಚು ಮೊಬೈಲ್ ಫೋನ್‌ಗಳನ್ನು ಬದಲಿಸಲಾಗಿದೆ ಇಲ್ಲವೇ ನಾಶಗೊಳಿಸಲಾಗಿದೆ.

 • ನಿರ್ಣಾಯಕ ಡಿಜಿಟಲ್ ಪುರಾವೆಗಳನ್ನು ಆರೋಪಿಗಳು ಮತ್ತು ಇದರಲ್ಲಿ ಭಾಗಿಯಾಗಿರುವ ಇತರ ವ್ಯಕ್ತಿಗಳು ಸಕ್ರಿಯವಾಗಿ ನಾಶಪಡಿಸಿದ್ದಾರೆ.

 • ಇಷ್ಟಾದರೂ ಕೃತ್ಯಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನು ಸಂಗ್ರಹಿಸಲು ತನಗೆ ಸಾಧ್ಯವಾಗಿದೆ.

 • ಪ್ರಕರಣದಲ್ಲಿ ಅಪರಾಧ ಎಂಬುದು ಲಂಚದ ಮೊತ್ತಕ್ಕೆ ಸೀಮಿತವಾಗಿಲ್ಲ.

 • ರೂ 100 ಕೋಟಿ ಲಂಚದ ಮೊತ್ತವಾಗಿದೆ. ಅರ್ಜಿದಾರರು ಲಂಚವನ್ನು ವಸೂಲಿ ಮಾಡಲು ಅನುಕೂಲವಾಗುವ ರೀತಿಯಲ್ಲಿ ನೀತಿ ರೂಪಿಸಿದ್ದು ಲಂಚ ನೀಡುವವರು ನಿವ್ವಳ ಲಾಭದ ರೂಪದಲ್ಲಿ ರೂ 192 ಕೋಟಿ ಪಡೆದಿದ್ದಾರೆ.

 • ಇದರಿಂದ ಕಳಂಕಯುಕ್ತ ಲಂಚದ ಮೊತ್ತವನ್ನು ಸಗಟು ವ್ಯಾಪಾರಿಯ ಕಳಂಕರಹಿತ ಲಾಭ ಎಂದು ತೋರಿಸಲಾಗುತ್ತದೆ. ನಿವ್ವಳ ಲಾಭದ ವೇಷದಲ್ಲಿ ಲಂಚ ನೀಡುವವರು ಲಂಚವನ್ನು ಮರುಪಾವತಿಸುತ್ತಾರೆ.

ತನ್ನ ಬಂಧನ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್‌ ವಜಾಗೊಳಿಸಿದ್ದ ಹಿನ್ನೆಲೆಯಲ್ಲಿ ಕೇಜ್ರಿವಾಲ್‌ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು.

Related Stories

No stories found.
Kannada Bar & Bench
kannada.barandbench.com