ಸಮತಲ ಮೀಸಲಾತಿ ಬಳಿಕ ಕರ್ನಾಟಕದ ವಿದ್ಯಾರ್ಥಿಗಳಿಗೆ ಎನ್ಎಲ್ಎಸ್ಐಯುನಲ್ಲಿ ದೊರೆತ ಸೀಟುಗಳು ಎಷ್ಟು? ಇಲ್ಲಿದೆ ವಿವರ

ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ವಿಧಾನ ಪರಿಷತ್ ಸದಸ್ಯ ಎಂ ಎಲ್ ಅನಿಲ್ ಕುಮಾರ್ ಅವರು ಕೇಳಿದ ಪ್ರಶ್ನೆಗೆ ಸಚಿವ ಎಚ್‌ಕೆ ಪಾಟೀಲ ಲಿಖಿತವಾಗಿ ಉತ್ತರಿಸಿದ್ದಾರೆ.
NLSIU
NLSIU
Published on

ಬೆಂಗಳೂರಿನ ಭಾರತೀಯ ವಿಶ್ವವಿದ್ಯಾಲಯ ರಾಷ್ಟ್ರೀಯ ಕಾನೂನು ಶಾಲೆಯಲ್ಲಿ (ಎನ್‌ಎಲ್‌ಎಸ್‌ಯುಐ) ಕರ್ನಾಟಕದ ವಿದ್ಯಾರ್ಥಿಗಳಿಗೆ ಸಮತಲ ಮೀಸಲಾತಿ ನೀಡಿದ ನಂತರ ದೊರೆತ ಸೀಟುಗಳಲ್ಲಿ ಶೇ 25ರಷ್ಟು ಮೀಸಲಾತಿ ಕಲ್ಪಿಸಿರುವುದಾಗಿ ಕಾನೂನು ಇಲಾಖೆ ನ್ಯಾಯ ಮತ್ತು ಮಾನವ ಹಕ್ಕುಗಳ ಸಚಿವ ಎಚ್‌ ಕೆ ಪಾಟೀಲ್‌ ಉತ್ತರಿಸಿದ್ದಾರೆ.

ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ವಿಧಾನ ಪರಿಷತ್‌ ಸದಸ್ಯ ಎಂ ಎಲ್‌ ಅನಿಲ್‌ ಕುಮಾರ್‌ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ವಿಶ್ವವಿದ್ಯಾಲಯದಲ್ಲಿ 1998ರಿಂದ 2020ರವರೆಗೆ ಕರ್ನಾಟಕದ ವಿದ್ಯಾರ್ಥಿಗಳಿಗೆ ಮೀಸಲಾತಿ ಇರಲಿಲ್ಲ. ಸೇರ್ಪಡೆ ಮತ್ತು ವಿಸ್ತರಣಾ ಯೋಜನೆಯಡಿ 2021ರಿಂದ 2025ರವರೆಗೆ ಕರ್ನಾಟಕದ ವಿದ್ಯಾರ್ಥಿಗಳಿಗೆ ಪ್ರವೇಶಾತಿ ವೇಳೆ ಶೇ 25ರಷ್ಟು ವಿಭಾಗೀಯ ಸಮತಲ  ಮೀಸಲಾತಿಯನ್ನು ವಿವಿ ಸ್ವಯಂಪ್ರೇರಿತವಾಗಿ ಅಳವಡಿಸಿಕೊಂಡಿರುತ್ತದೆ. 2025- 26ನೇ ಸಾಲಿನಲ್ಲಿ ಬಿಎ ಎಲ್‌ಎಲ್‌ಬಿ ಪರೀಕ್ಷೆಯಲ್ಲಿ ಮೆರಿಟ್‌ ಪಟ್ಟಿ ಪ್ರಕಾರ ಕರ್ನಾಟಕದ ವಿದ್ಯಾರ್ಥಿಗಳಿಗೆ ಹತ್ತು ಸೀಟುಗಳನ್ನು ಹಂಚಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ವಿವಿಯಲ್ಲಿ ಕರ್ನಾಟಕದ ಹಾಗೂ ಉಳಿದ ರಾಜ್ಯಗಳ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ಕಳೆದ 5 ವರ್ಷಗಳಿಂದ ಕೋರ್ಸ್‌ ವಾರು ಸೀಟುಗಳ ಮಾಹಿತಿಯನ್ನು ಅನಿಲ್‌ ಕುಮಾರ್‌ ಬಯಸಿದ್ದರು. ಅದರಂತೆ ಇಲಾಖೆ ನೀಡಿರುವ ಮಾಹಿತಿ ಇಲ್ಲಿದೆ:

ಕೋಷ್ಟಕದ ಪ್ರಕಾರ 5 ವರ್ಷಗಳ ಬಿಎ ಎಲ್‌ಎಲ್‌ಬಿ ಆನರ್ಸ್‌ ಕೋರ್ಸ್‌ನಲ್ಲಿ 2020- 21ರ ಶೈಕ್ಷಣಿಕ ವರ್ಷದಲ್ಲಿ ಉಳಿದ ರಾಜ್ಯಗಳ ವಿದ್ಯಾರ್ಥಿಗಳಿಗೆ  112 ಸೀಟುಗಳನ್ನು ಒದಗಿಸಲಾಗಿದ್ದರೆ ಕರ್ನಾಟಕದ ವಿದ್ಯಾರ್ಥಿಗಳಿಗೆ  8 ಸೀಟುಗಳು ಲಭಿಸಿದ್ದವು. ಅಂತೆಯೇ 2024- 25ರ ಹೊತ್ತಿಗೆ ಉಳಿದ ರಾಜ್ಯಗಳ 225 ವಿದ್ಯಾರ್ಥಿಗಳಿಗೆ ಸೀಟು ಕಲ್ಪಿಸಲಾಗಿದ್ದರೆ ಕರ್ನಾಟಕದ 75 ವಿದ್ಯಾರ್ಥಿಗಳು ಸೀಟು ಪಡೆದಿದ್ದಾರೆ.

ಮೂರು ವರ್ಷದ ಎಲ್‌ಎಲ್‌ಬಿ ಆನರ್ಸ್‌ ಕೋರ್ಸಿಗೆ ಸಂಬಂಧಿಸಿದಂತೆ 2020-21 ಹಾಗೂ 21- 22ರ ಸಾಲಿನ ಮಾಹಿತಿ ಲಭ್ಯವಿಲ್ಲ. 2022- 23ನೇ ಸಾಲಿನಲ್ಲಿ ಉಳಿದ ರಾಜ್ಯಗಳ 41 ವಿದ್ಯಾರ್ಥಿಗಳಿಗೆ ಸೀಟು ಕಲ್ಪಿಸಲಾಗಿದ್ದರೆ ಕರ್ನಾಟಕದ 13 ವಿದ್ಯಾರ್ಥಿಗಳು ಸೀಟು ಪಡೆದಿದ್ದರು. ಪ್ರಸಕ್ತ ಶೈಕ್ಷಣಿಕ ವರ್ಷ ಅಂದರೆ 2024- 25ರಲ್ಲಿ ಉಳಿದ ರಾಜ್ಯಗಳು ಹಾಗೂ ಕರ್ನಾಟಕದ ವಿದ್ಯಾರ್ಥಿಗಳು ಕ್ರಮವಾಗಿ 84 ಹಾಗೂ 21 ಸೀಟುಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಎಲ್‌ಎಲ್‌ಎಂಗೆ ಸಂಬಂಧಿಸಿದಂತೆ  2020- 21ರ ಸಾಲಿನಲ್ಲಿ ಇತರೆ ರಾಜ್ಯಗಳ ವಿದ್ಯಾರ್ಥಿಗಳಿಗೆ  48 ಸೀಟು ದೊರೆತಿದ್ದರೆ ಕರ್ನಾಟಕಕ್ಕೆ 2 ಸೀಟುಗಳು ಲಭಿಸಿದ್ದವು. 2024- 25ರಲ್ಲಿ ಇತರೆ ರಾಜ್ಯಗಳ ವಿದ್ಯಾರ್ಥಿಗಳು 72 ಸೀಟುಗಳನ್ನು ಪಡೆದಿದ್ದರೆ ಕರ್ನಾಟಕದ ವಿದ್ಯಾರ್ಥಿಗಳು 30 ಸೀಟುಗಳನ್ನು ಪಡೆದಿದ್ದಾರೆ.

ಸಾರ್ವಜನಿಕ ನೀತಿಯಲ್ಲಿ ಸ್ನಾತಕೋತ್ತರ ಕೋರ್ಸ್‌ನಲ್ಲಿ 2020- 21ರಲ್ಲಿ ಉಳಿದ ರಾಜ್ಯಗಳ ವಿದ್ಯಾರ್ಥಿಗಳಿಗೆ  48  ಸೀಟುಗಳನ್ನು ಒದಗಿಸಲಾಗಿದ್ದರೆ ಕರ್ನಾಟಕದ ವಿದ್ಯಾರ್ಥಿಗಳಿಗೆ  9 ಸೀಟುಗಳು ಲಭಿಸಿದ್ದವು. 2024- 25ನೇ ಸಾಲಿನಲ್ಲಿ ಉಳಿದ ರಾಜ್ಯಗಳ 39 ವಿದ್ಯಾರ್ಥಿಗಳಿಗೆ ಸೀಟು ಕಲ್ಪಿಸಲಾಗಿದ್ದರೆ ಕರ್ನಾಟಕದ 3 ವಿದ್ಯಾರ್ಥಿಗಳು ಸೀಟು ಪಡೆದಿದ್ದಾರೆ.

Kannada Bar & Bench
kannada.barandbench.com