[ಎನ್‌ಡಿಪಿಎಸ್‌ ಪ್ರಕರಣ] ಗಾಂಜಾ ಪ್ರಮಾಣ ನಿರ್ಧರಿಸುವಾಗ ಬೀಜ, ಎಲೆ ತೂಕವನ್ನೂ ಪರಿಗಣಿಸಬೇಕು: ಹೈಕೋರ್ಟ್‌

ಪಂಚನಾಮೆ ವರದಿಯಲ್ಲಿ ಅರ್ಜಿದಾರರಿಂದ ವಶಪಡಿಸಿಕೊಂಡಿರುವ ಗಾಂಜಾದ ಜತೆ ಬೀಜ, ಹೂವು ಮತ್ತು ಎಲೆ ಕೂಡ ಸೇರಿದೆ. ಆದ್ದರಿಂದ ಅವುಗಳ ತೂಕವನ್ನೂ ಸಹ ಪರಿಗಣಿಸಬೇಕಾಗುತ್ತದೆ ಎಂದಿರುವ ನ್ಯಾಯಾಲಯ.
Karnataka High Court and NDPS Act
Karnataka High Court and NDPS Act

ಮಾದಕ ವಸ್ತುಗಳು ಹಾಗೂ ಅಮಲು ಪದಾರ್ಥಗಳ ನಿಯಂತ್ರಣ (ಎನ್‌ಡಿಪಿಎಸ್‌) ಕಾಯಿದೆ ಅಡಿ ದಾಖಲಾದ ಪ್ರಕರಣಗಳಲ್ಲಿ ಗಾಂಜಾ ಪ್ರಮಾಣ ನಿರ್ಧರಿಸುವಾಗ ಬೀಜ, ಎಲೆ ತೂಕವನ್ನೂ ಪರಿಗಣಿಸಬೇಕು ಎಂದು ಕರ್ನಾಟಕ ಹೈಕೋರ್ಟ್‌ ಈಚೆಗೆ ಆದೇಶದಲ್ಲಿ ಹೇಳಿದೆ.

ಎನ್‌ಡಿಪಿಎಸ್ ಕಾಯಿದೆಯ ವಿವಿಧ ಸೆಕ್ಷನ್‌ಗಳ ಅಡಿ ಗಾಂಜಾ ಹೊಂದಿದ್ದ ಆರೋಪ ಎದುರಿಸುತ್ತಿದ್ದ ದಾವಣಗೆರೆಯ ಜಿಲ್ಲೆಯ ಚನ್ನಗಿರಿಯ ಕಾಶೆಟ್ಟಿಹಳ್ಳಿಯ 73 ವರ್ಷದ ರಂಗಪ್ಪ ಅವರ ವಿರುದ್ಧದ ಪ್ರಕರಣ ರದ್ದುಪಡಿಸಲು ನ್ಯಾಯಮೂರ್ತಿ ಕೆ ನಟರಾಜನ್ ಅವರಿದ್ದ ಏಕ ಸದಸ್ಯಪೀಠ ನಿರಾಕರಿಸಿದೆ.

“ಎನ್‌ಡಿಪಿಎಸ್ ಕಾಯಿದೆ ಸೆಕ್ಷನ್2 (2)(ಬಿ) ಅಡಿ ವ್ಯಾಖ್ಯಾನವನ್ನು ಓದಿದರೆ ಗಾಂಜಾದಲ್ಲಿ ಬೀಜಗಳು ಮತ್ತು ಹೂವುಗಳನ್ನು ಹೊರಗಿಡಲಾಗಿದೆ. ಆದರೆ ಪಂಚನಾಮೆ ವರದಿಯಲ್ಲಿ ಅರ್ಜಿದಾರರಿಂದ ವಶಪಡಿಸಿಕೊಂಡಿರುವ ಗಾಂಜಾದ ಜತೆ ಬೀಜ, ಹೂವು ಮತ್ತು ಎಲೆ ಕೂಡ ಸೇರಿದೆ. ಆದ್ದರಿಂದ ಅವುಗಳ ತೂಕವನ್ನೂ ಸಹ ಪರಿಗಣಿಸಬೇಕಾಗುತ್ತದೆ’’ ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯು ಅರ್ಜಿದಾರರ ವಿರುದ್ದ ಇರುವ ಹಿನ್ನೆಲೆಯಲ್ಲಿ ಕ್ರಿಮಿನಲ್ ಪ್ರಕರಣ ರದ್ದುಗೊಳಿಸಲಾಗದು. ಅರ್ಜಿದಾರರ ಜಾಮೀನು ಅರ್ಜಿ ಪರಿಗಣಿಸಬೇಕಾದರೂ ಗಾಂಜಾದ ವಾಣಿಜ್ಯ ಪ್ರಮಾಣ ಪರಿಗಣಿಸಬೇಕಾಗುತ್ತದೆ. ವಶಪಡಿಸಿಕೊಂಡ ಗಾಂಜಾ ತೂಕ ನಿರ್ಧರಿಸುವಾಗ ಗಾಂಜಾ ಗಿಡದ ಬೀಜ, ಎಲೆ, ಹೂವುಗಳ ತೂಕವನ್ನೂ ಸೇರಿಸಬೇಕು. ಆ ರೀತಿ ಸೇರಿಸಿದರೆ ಗಾಂಜಾ ಪ್ರಮಾಣ ನಿಗದಿತ ಮಿತಿಗಿಂತ ಜಾಸ್ತಿ ಇದೆ. ಹೀಗಾಗಿ, ಜಾಮೀನನ್ನೂ ನೀಡಲಾಗದು ಎಂದು ಆದೇಶದಲ್ಲಿ ಹೇಳಿದೆ.

2019ರಲ್ಲಿ ದಾವಣಗೆರೆಯ ಬಸವಪಟ್ಟಣ ಪೊಲೀಸರು ರಂಗಪ್ಪ ಅವರನ್ನು ಬಂಧಿಸಿ 750 ಗ್ರಾಂ ಗಾಂಜಾ ವಶಪಡಿಸಿಕೊಂಡು ಎನ್‌ಡಿಪಿಎಸ್ ಕಾಯಿದೆ ಸೆಕ್ಷನ್‌ಗಳಾದ 20(ಎ)(ಐ), 20(ಬಿ)(ii)(ಎ) ಅಡಿ ಅಡಿ ಪ್ರಕರಣ ದಾಖಲಿಸಿದ್ದರು.

ಆರೋಪಿ ರಂಗಪ್ಪ ಗಾಂಜಾ ಗಿಡದ ಬೀಜ, ಎಲೆಯನ್ನು ತೂಕಕ್ಕೆ ಪರಿಗಣಿಸಬಾರದು. ಅವುಗಳನ್ನು ಪರಿಗಣಿಸದಿದ್ದರೆ ವಶಪಡಿಸಿಕೊಂಡಿರುವ ಗಾಂಜಾ ಪ್ರಮಾಣ ಎನ್‌ಡಿಪಿಎಸ್ ಕಾಯಿದೆ ವ್ಯಾಪ್ತಿಗೆ ಬರುವುದಿಲ್ಲ. ಹೀಗಾಗಿ, ಪ್ರಕರಣವನ್ನು ರದ್ದುಗೊಳಿಸಬೇಕು ಎಂದು ನ್ಯಾಯಾಲಯದ ಮೆಟ್ಟಿಲೇರಿದ್ದರು. ಇದನ್ನು ಪೀಠವು ಮಾನ್ಯ ಮಾಡಿಲ್ಲ.

Related Stories

No stories found.
Kannada Bar & Bench
kannada.barandbench.com