
ಮುಂಬೈನ ಧಾರಾವಿ ಕೊಳೆಗೇರಿಗಳ ಪುನರಾಭಿವೃದ್ಧಿಗಾಗಿ 2019ರಲ್ಲಿ ಕರೆಯಲಾಗಿದ್ದ ಬಿಡ್ ಅನ್ನು ರದ್ದುಗೊಳಿಸಿ 2022ರಲ್ಲಿ ಅದಾನಿ ಪ್ರಾಪರ್ಟೀಸ್‌ಗೆ ಹೊಸ ಟೆಂಡರ್ ನೀಡಿರುವ ಮಹಾರಾಷ್ಟ್ರ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಯುಎಇ ಮೂಲದ ಸೆಕ್ಲಿಂಕ್ ಟೆಕ್ನಾಲಜೀಸ್ ಸಲ್ಲಿಸಿದ್ದ ಅರ್ಜಿಯ ಸಂಬಂಧ ಸುಪ್ರೀಂ ಕೋರ್ಟ್ ಶುಕ್ರವಾರ ಮಹಾರಾಷ್ಟ್ರ ಸರ್ಕಾರ ಮತ್ತು ಅದಾನಿ ಪ್ರಾಪರ್ಟೀಸ್‌ಗೆ ನೋಟಿಸ್ ಜಾರಿ ಮಾಡಿದೆ.
ಸುಪ್ರೀಂ ಕೋರ್ಟ್ ಮುಂದೆ ಅರಬ್ ಸಂಯುಕ್ತ ಸಂಸ್ಥಾನ ಮೂಲದ ಸೆಕ್ಲಿಂಕ್ ಸಂಸ್ಥೆಯು ತನ್ನ ಈ ಹಿಂದಿನ ₹7,200 ಕೋಟಿ ಪ್ರಸ್ತಾಪ ಮೊತ್ತವನ್ನು ಶೇ. 20 ರಷ್ಟು ಹೆಚ್ಚಿಸುವುದಾಗಿ ತಿಳಿಸಿದ ನಂತರ ಸಿಜೆಐ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಸಂಜಯ್ ಕುಮಾರ್ ನೇತೃತ್ವದ ಪೀಠವು ಸಂಸ್ಥೆಯ ಅರ್ಜಿಯನ್ನು ಪುರಸ್ಕರಿಸಿತು. ನಂತರ ನ್ಯಾಯಾಲಯವು ಸೆಕ್ಲಿಂಕ್‌ಗೆ ಈ ನಿಟ್ಟಿನಲ್ಲಿ ಅಫಿಡವಿಟ್ ಸಲ್ಲಿಸಲು ಆದೇಶಿಸಿ, ಮೇ 25 ರಂದು ಪ್ರಕರಣದ ವಿಚಾರಣೆಯನ್ನು ನಿಗದಿಪಡಿಸಿತು.
ಆದೇಶದ ವೇಳೆ ನ್ಯಾಯಪೀಠವು, "ಈಗ ಅವರು (ಸೆಕ್ಲಿಂಕ್) ಪ್ರಸಕ್ತ ಇರುವ ದೊಡ್ಡ ಬಿಡ್ಡರ್‌ಗಿಂತ ಹೆಚ್ಚಿನ ಮೊತ್ತವನ್ನು ಪಾವತಿಸುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ. ಅಲ್ಲದೆ, ಹೆಚ್ಚಿನ ಮೊತ್ತದ ಬಿಡ್ಡರ್ ಒಪ್ಪಿಕೊಂಡಿರುವ ಇತರ ಷರತ್ತುಗಳು ಅಂದರೆ ಗುತ್ತಿಗೆಗೆ ₹1,000 ಕೋಟಿ ಮತ್ತು ₹2,800 ಕೋಟಿ ಪರಿಹಾರ ಮೊತ್ತಕ್ಕೂ ಒಪ್ಪಿದ್ದಾರೆ. ಅರ್ಜಿದಾರರು ಇತರ ಎಲ್ಲಾ ಬಾಧ್ಯತೆಗಳನ್ನು ಸಹ ಪೂರೈಸಬೇಕು. ಹೊಸ ಅಫಿಡವಿಟ್ ಸಲ್ಲಿಸಿ" ಎಂದು ನ್ಯಾಯಾಲಯವು ಆದೇಶದಲ್ಲಿ ದಾಖಲಿಸಿತು.
ಡಿಸೆಂಬರ್ 20, 2024 ರಂದು ಬಾಂಬೆ ಹೈಕೋರ್ಟ್, ಧಾರಾವಿ ಕೊಳೆಗೇರಿಗಳ ಪುನರಾಭಿವೃದ್ಧಿಗಾಗಿ ಸೆಕ್ಲಿಂಕ್‌ನ 2019 ರ ಬಿಡ್ ಅನ್ನು ರದ್ದುಗೊಳಿಸುವ ಮತ್ತು 2022 ರಲ್ಲಿ ಅದಾನಿ ಪರವಾಗಿ ಹೊಸ ಟೆಂಡರ್ ನೀಡುವ ರಾಜ್ಯದ ನಿರ್ಧಾರವನ್ನು ಎತ್ತಿಹಿಡಿಯಿತು. ತದನಂತರ ಸೆಕ್ಲಿಂಕ್ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತು.
ಹಿರಿಯ ವಕೀಲ ಆರ್ಯಮ ಸುಂದರಂ ಸೆಕ್ಲಿಂಕ್ ಅನ್ನು ಪ್ರತಿನಿಧಿಸಿದರು. ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮಹಾರಾಷ್ಟ್ರ ಸರ್ಕಾರವನ್ನು ಪ್ರತಿನಿಧಿಸಿದರು ಮತ್ತು ಹಿರಿಯ ವಕೀಲ ಮುಕುಲ್ ರೋಹಟ್ಗಿ ಅದಾನಿ ಪ್ರಾಪರ್ಟೀಸ್ ಪರವಾಗಿ ಹಾಜರಾದರು.
ವಿಚಾರಣೆ ವೇಳೆ, ನೂರಾರು ಕೋಟಿ ಮೌಲ್ಯದ ಉಪಕರಣಗಳನ್ನು ಅದಾನಿ ಪ್ರಾಪರ್ಟೀಸ್ ಈಗಾಗಲೇ ಪುನರಾಭಿವೃದ್ಧಿಗೆ ಖರೀದಿಸಿದೆ ಎಂದು ರೋಹಟ್ಗಿ ನ್ಯಾಯಾಲಯದ ಗಮನಕ್ಕೆ ತರುವ ಮೂಲಕ ಕಾಮಗಾರಿ ಪ್ರಾರಂಭವಾಗಿರುವ ಮಾಹಿತಿ ನೀಡಿದರು. ಇದಕ್ಕೆ ನ್ಯಾಯಾಲಯವು ಯೋಜನೆಗೆ ಸಂಬಂಧಿಸಿದ ಖರ್ಚುವೆಚ್ಚಗಳ ಲೆಕ್ಕ ಇಡುವ ಮೂರನೆಯವರ ನಿರ್ವಹಣೆಯ ಎಸ್ಕ್ರೊ ಬ್ಯಾಂಕ್ ಖಾತೆಯನ್ನು ನಿರ್ವಹಿಸುವಂತೆ ನ್ಯಾಯಾಲಯ ಸೂಚಿಸಿತು.
ಏತನ್ಮಧ್ಯೆ, ಯೋಜನೆಯ ಮೇಲೆ ಯಥಾಸ್ಥಿತಿ ಆದೇಶಕ್ಕಾಗಿ ಮೌಖಿಕ ವಿನಂತಿಯನ್ನು ನ್ಯಾಯಾಲಯ ನಿರಾಕರಿಸಿತು.