
ಸೌಜನ್ಯ ಕೊಲೆ ಮತ್ತು ಅತ್ಯಾಚಾರ ಪ್ರಕರಣ ಹಾಗೂ ಧರ್ಮಸ್ಥಳದಲ್ಲಿ ಕೊಲೆಯಾದ ಶವಗಳನ್ನು ಹೂತಿರುವ ಪ್ರಕರಣಕ್ಕೆ ಸಂಬಂಧಿಸಿದ ಪ್ರತ್ಯೇಕ ಎರಡು ಮಾಧ್ಯಮ ನಿರ್ಬಂಧ ಆದೇಶಗಳನ್ನು ಆಧರಿಸಿ ತನ್ನ ವರದಿಗಾರಿಕೆಗೆ ಅಡ್ಡಿ ಮಾಡುತ್ತಿರುವುದನ್ನು ಪ್ರಶ್ನಿಸಿ ದ ನ್ಯೂಸ್ ಮಿನಿಟ್ ಮಾತೃ ಸಂಸ್ಥೆ ಸ್ಪಂಕ್‌ಲೇನ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಕರ್ನಾಟಕ ಹೈಕೋರ್ಟ್ ಕದತಟ್ಟಿದೆ.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಸಿಬ್ಬಂದಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ಬೆಂಗಳೂರಿನ 6ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯವು ಮಾರ್ಚ್ 22ರಂದು ಮಾಡಿರುವ ಏಕಪಕ್ಷೀಯ ಪ್ರತಿಬಂಧಕಾದೇಶವನ್ನು ನ್ಯೂಸ್ ಮಿನಿಟ್ ಪ್ರಶ್ನಿಸಿದೆ. ಈ ಪ್ರಕರಣದಲ್ಲಿ ನ್ಯೂಸ್ ಮಿನಿಟ್ ಪಕ್ಷಕಾರವಾಗಿಲ್ಲದಿದ್ದರೂ ಫಿರ್ಯಾದಿಗಳು ʼಜಾನ್ ಡೋʼ (ಅನಾಮಧೇಯ) ವರ್ಗೀಕರಣ ಉಲ್ಲೇಖಿಸಿ ನಿರ್ದಿಷ್ಟ ಲೇಖನ ಮತ್ತು ಟ್ವೀಟ್ ತೆಗೆಯುವಂತೆ ನೋಟಿಸ್ ಜಾರಿ ಮಾಡಿದ್ದಾರೆ.
ಜಾನ್ ಡೋ ವರ್ಗೀಕರಣದಡಿ ನ್ಯಾಯಾಲಯವು ನಿರ್ದಿಷ್ಟ ಸಮಯದಲ್ಲಿ ವ್ಯಕ್ತಿಯ ಗುರುತು ತಿಳಿಯದಿದ್ದರೂ ಅವರ ವಿರುದ್ಧ ಆದೇಶ ಮಾಡಲು ಅವಕಾಶವಿದೆ. ಸದರಿ ಪ್ರಕರಣದಲ್ಲಿ ನ್ಯೂಸ್ ಮಿನಿಟ್ ಪಕ್ಷಕಾರವಾಗಿಲ್ಲದಿದ್ದರೂ ಸುದ್ದಿಯಲ್ಲಿ ವಿಚಾರವು ಮಾನಹಾನಿಯಾಗದ ಹೊರತಾಗಿಯೂ ಕಾನೂನು ಪ್ರಕ್ರಿಯೆಯಲ್ಲಿ ಸಿಲುಕುವುದನ್ನು ತಪ್ಪಿಸಲು ಮತ್ತು ಪೂರ್ವಾಗ್ರಹಕ್ಕೆ ಅವಕಾಶ ಮಾಡಿಕೊಡಬಾರದು ಎಂದು ನ್ಯೂಸ್ ಮಿನಿಟ್ ತಾತ್ಕಾಲಿಕವಾಗಿ ಅದನ್ನು ತೆಗೆದಿತ್ತು. ಇಷ್ಟೆಲ್ಲವಾದರೂ ಇನ್ನೊಂದು ವಿಡಿಯೋ ಡಿಲೀಟ್ ಮಾಡಿಸಲು ಫಿರ್ಯಾದಿಗಳು ಮತ್ತೆ ಮಾರ್ಚ್ 22ರ ಆದೇಶ ಉಲ್ಲೇಖಿಸಿದ್ದರು.
ಈ ಆದೇಶ ಅನುಪಾಲಿಸಲು ನಿರಾಕರಿಸಿದ್ದ ನ್ಯೂಸ್ ಮಿನಿಟ್, ಏಕಪಕ್ಷೀಯ ಪ್ರತಿಬಂಧಕಾದೇಶದಲ್ಲಿ ಆಕ್ಷೇಪಿಸಲಾದ ವಿಡಿಯೋ ಉಲ್ಲೇಖವಾಗಿಲ್ಲ. ಅಲ್ಲದೇ, ಆಕ್ಷೇಪಿತ ವಿಡಿಯೋ ದೃಢೀಕರಿಸಬಹುದಾದ ಅಂಶಗಳನ್ನು ಹೊಂದಿದೆ. ಇದರಲ್ಲಿ ಎಫ್‌ಐಆರ್ ಹಾಗೂ ಅಧಿಕಾರಿಗಳ ಸಾರ್ವಜನಿಕ ಹೇಳಿಕೆಗಳಿದ್ದು, ಗೃಹ ಸಚಿವರ ಹೇಳಿಕೆಯೂ ಸೇರಿದೆ ಎಂದು ವಾದಿಸಿದೆ. ತಮ್ಮ ವಾದ ಆಲಿಸದೇ ಜಾನ್ ಡೋ ವರ್ಗೀಕರಣವನ್ನು ಆಧರಿಸಿ ವಿಡಿಯೋ ತೆಗೆಯಲು ಒತ್ತಾಯಿಸುವ ಮೂಲಕ ತಮಗೆ ಕಿರುಕುಳ ನೀಡಲಾಗುತ್ತಿದೆ ಎಂದು ನ್ಯೂಸ್ ಮಿನಿಟ್ ಹೇಳಿದೆ.
ಇನ್ನೊಂದು ಪ್ರತ್ಯೇಕ ಅರ್ಜಿಯಲ್ಲಿ ಧರ್ಮಸ್ಥಳದಲ್ಲಿ ಕೊಲೆಯಾದ ನೂರಾರು ಶವಗಳನ್ನು ಹೂತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಷೇತ್ರದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಸಹೋದರ ಹರ್ಷೇಂದ್ರ ಕುಮಾರ್ ಡಿ ಅವರ ವಿರುದ್ಧ ಯಾವುದೇ ಮಾನಹಾನಿ ವಿಷಯ ಪ್ರಸಾರ/ಪ್ರಕಟ ಮಾಡದಂತೆ ಏಕಪಕ್ಷೀಯ ಆದೇಶ ಮಾಡಿರುವ ಆದೇಶವನ್ನೂ ನ್ಯೂಸ್ ಮಿನಿಟ್ ಪ್ರಶ್ನಿಸಿದೆ. ಈ ಪ್ರಕರಣದಲ್ಲಿ ನ್ಯೂಸ್ ಮಿನಿಟ್, ಒಟ್ಟು 338 ಪ್ರತಿವಾದಿಗಳ ಪೈಕಿ 47ನೇ ಪ್ರತಿವಾದಿಯಾಗಿದೆ.
“ವಿಚಾರಣಾಧೀನ ನ್ಯಾಯಾಲಯದ ಆದೇಶವು ವಾಕ್ ಸ್ವಾತಂತ್ರ್ಯ ಕಸಿಯುವಂತಿದ್ದು, ಇದು ಅರ್ಜಿದಾರರಿಗೆ ಸಂವಿಧಾನದ 19ನೇ ವಿಧಿಯಡಿ ದೊರೆತಿರುವ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣಕ್ಕೆ ನಾಂದಿಯಾಗಿದೆ” ಎಂದು ಆಕ್ಷೇಪಿಸಲಾಗಿದೆ.
ಧರ್ಮಸ್ಥಳ ದೇವಸ್ಥಾನದ ಆಡಳಿತಕ್ಕೆ ಸಂಬಂಧಿಸಿದ ಯಾವುದೇ ರೀತಿಯ ವರದಿಗಾರಿಕೆಯನ್ನೂ ಮಾಡಲಾಗಿಲ್ಲ. ಅದಾಗ್ಯೂ ಪ್ರತಿವಾದಿಗಳು ಮಾನಹಾನಿ ದಾವೆಯ ಬೆದರಿಕೆಯೊಡ್ಡುವ ಮೂಲಕ ಈಗಾಗಲೇ ಪ್ರಕಟಿಸಿರುವ ಸುದ್ದಿ ತೆಗೆಯಲು ಮತ್ತು ಮುಂದೆ ವರದಿಗಾರಿಕೆ ನಿರ್ಬಂಧಕ್ಕೆ ಪ್ರಯತ್ನಿಸುತ್ತಿದ್ದಾರೆ ಎಂದು ವಾದಿಸಿದೆ. ಅಲ್ಲದೇ, ಈಚೆಗೆ ಕುಡ್ಲ ರ‍್ಯಾಂಪೇಜ್ ಪ್ರಕರಣದಲ್ಲಿ ಏಕಪಕ್ಷೀಯ ಪ್ರತಿಬಂಧಕಾದೇಶ ವಜಾಗೊಳಿಸಿರುವ ಹೈಕೋರ್ಟ್ ಆದೇಶವನ್ನು ಆಧರಿಸಿ, ತನಗೂ ಅದೇ ರೀತಿಯ ಪರಿಹಾರ ನೀಡುವಂತೆ ಕೋರಿದೆ.
ನ್ಯೂಸ್ ಮಿನಿಟ್ ಅನ್ನು ಕೀಸ್ಟೋನ್ ಪಾರ್ಟರ್ನ್ಸ್‌ನ ವಕೀಲ ಪ್ರದೀಪ್ ನಾಯಕ್ ಪ್ರತಿನಿಧಿಸಿದ್ದಾರೆ.