![[ಧರ್ಮಸ್ಥಳ ಪ್ರಕರಣ] ಹೋರಾಟಗಾರರ ಹಣದ ಮೂಲದ ತನಿಖೆಗೆ ಕೋರಿಕೆ: ಉತ್ತರಿಸಲು ಸರ್ಕಾರಕ್ಕೆ ಸೂಚಿಸಿದ ಹೈಕೋರ್ಟ್](http://media.assettype.com/barandbench-kannada%2F2025-09-15%2F0nv18kih%2FWhatsApp-Image-2025-09-15-at-8.17.29-PM.jpeg?w=480&auto=format%2Ccompress&fit=max)
![[ಧರ್ಮಸ್ಥಳ ಪ್ರಕರಣ] ಹೋರಾಟಗಾರರ ಹಣದ ಮೂಲದ ತನಿಖೆಗೆ ಕೋರಿಕೆ: ಉತ್ತರಿಸಲು ಸರ್ಕಾರಕ್ಕೆ ಸೂಚಿಸಿದ ಹೈಕೋರ್ಟ್](http://media.assettype.com/barandbench-kannada%2F2025-09-15%2F0nv18kih%2FWhatsApp-Image-2025-09-15-at-8.17.29-PM.jpeg?w=480&auto=format%2Ccompress&fit=max)
ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಅದರ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ವಿರುದ್ಧ ನಡೆಸುತ್ತಿರುವ ವ್ಯವಸ್ಥಿತ ಷಡ್ಯಂತ್ರದ ಭಾಗವಾಗಿ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ಟಿ ಜಯಂತ್ ಹಾಗೂ ಎಂ ಡಿ ಸಮೀರ್ ಮತ್ತಿತರರ ಚಲನವಲನ, ಚಟುವಟಿಕೆಗಳು, ಹಣಕಾಸಿನ ಮೂಲ ಮತ್ತು ಅವರ ಸಂಪರ್ಕ ಜಾಲಗಳ ಬಗ್ಗೆ ಸಮಗ್ರ ತನಿಖೆ ನಡೆಸಲು ನಿರ್ದೇಶನ ಕೋರಿರುವ ಅರ್ಜಿ ಸಂಬಂಧ ಮೂರು ದಿನಗಳಲ್ಲಿ ರಾಜ್ಯ ಸರ್ಕಾರ ಉತ್ತರಿಸಬೇಕು ಎಂದು ಕರ್ನಾಟಕ ಹೈಕೋರ್ಟ್ ಮಂಗಳವಾರ ಆದೇಶಿಸಿದೆ.
ವಿಶೇಷ ತನಿಖಾ ತಂಡ (ಎಸ್ಐಟಿ) ಹಾಗೂ ಇತರರಿಗೆ ತಾವು 2025ರ ಆಗಸ್ಟ್ 20, ಸೆಪ್ಟಂಬರ್ 5, 8 ಮತ್ತು 9ರಂದು ಸಲ್ಲಿಸಿರುವ ಮನವಿ ಮತ್ತು ದೂರುಗಳನ್ನು ಪರಿಗಣಿಸಲು ನಿರ್ದೇಶನ ನೀಡುವಂತೆ ಕೋರಿ ಶ್ರೀ ಕ್ಷೇತ್ರ ಧರ್ಮಸ್ಥಳದ ಭಕ್ತರಾದ ಬೆಂಗಳೂರು ನಿವಾಸಿ ತೇಜಸ್ ಎ. ಗೌಡ, ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿಯ ಉಜಿರೆ ನಿವಾಸಿ ಭಾಸ್ಕರ್ ಬಡೆಕೊಟ್ಟು, ಧರ್ಮಸ್ಥಳ ನಿವಾಸಿಗಳಾದ ಸುರೇಂದ್ರ ಪ್ರಭು ಹಾಗೂ ಧನಕೀರ್ತಿ ಅರಿಗ ಅವರು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರ ಏಕಸದಸ್ಯ ವಿಚಾರಣೆ ನಡೆಸಿತು.
ಹೆಚ್ಚುವರಿ ರಾಜ್ಯ ಸರ್ಕಾರಿ ಅಭಿಯೋಜಕ ಬಿ ಎನ್ ಜಗದೀಶ್ ಅವರು “ಅರ್ಜಿದಾರರು ಎಸ್‌ಐಟಿಗೆ ದೂರು ನೀಡಿದ್ದಾರೆ. ಆದರೆ, ಎಸ್‌ಐಟಿ ಕ್ರಮಕ್ಕೆ ಮುಂದಾಗಲಾಗದು. ಎಸ್‌ಐಟಿ ರಚಿಸಿರುವ ಅಧಿಸೂಚನೆಯನ್ನು ನ್ಯಾಯಾಲಯ ಪರಿಶೀಲಿಸಬಹುದು. ದೂರಿನ ಸಂಬಂಧ ಯಾವುದೇ ಎಫ್‌ಐಆರ್ ದಾಖಲಿಸಲಾಗಿಲ್ಲ. ಹೀಗಾಗಿ, ಎಸ್‌ಐಟಿ ಯಾವುದೇ ತನಿಖೆ ನಡೆಸಲಾಗದು” ಎಂದರು.
ಜಾರಿ ನಿರ್ದೇಶನಾಲಯವನ್ನು ಪ್ರತಿನಿಧಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕ ಮಧು ಎನ್. ರಾವ್ ಅವರು “ಕಾನೂನಿನ ಅನ್ವಯ ಅರ್ಜಿದಾರರ ದೂರನ್ನು ಪರಿಗಣಿಸಲಾಗುವುದು” ಎಂದರು.
ಸರ್ಕಾರದ ವಕೀಲರು “ಸರ್ಕಾರದ ನಿಲುವು ತಿಳಿಸಲು ಮೂರು ದಿನ ಕಾಲಾವಕಾಶ ನೀಡಬೇಕು” ಎಂದರು. ಇದನ್ನು ಆಲಿಸಿದ ಪೀಠವು ಮೂರು ದಿನಗಳಲ್ಲಿ ರಾಜ್ಯ ಸರ್ಕಾರ ಉತ್ತರಿಸಬೇಕು ಎಂದು ಹೇಳಿ, ವಿಚಾರಣೆಯನ್ನು ಡಿಸೆಂಬರ್ 16ಕ್ಕೆ ಮುಂದೂಡಿತು.
ಮಹೇಶ್ ಶೆಟ್ಟಿ ತಿಮರೋಡಿ ಸೌಜನ್ಯ ಹೆಸರಲ್ಲಿ ಹೋರಾಟ ಮಾಡುತ್ತಿದ್ದು, ಆ ಹೋರಾಟಕ್ಕೆ ವಕೀಲರಿಗೆ ಲಕ್ಷಾಂತರ ರೂಪಾಯಿ ಖರ್ಚಾಗಿದೆ ಎಂದು ಹೇಳುತ್ತಾರೆ. ಜೊತೆಗೆ ಈ ಹೋರಾಟದಲ್ಲಿ ತೊಡಗಿಸಿಕೊಂಡ ಸೌಜನ್ಯ ತಾಯಿಯು ಸೇರಿದಂತೆ ಪ್ರತಿಯೊಬ್ಬರು ಹೋರಾಟದ ಸಮಯದಲ್ಲಿ ಕೋಟಿಗಟ್ಟಲೆ ಬೆಲೆ ಬಾಳುವ ಆಸ್ತಿಯನ್ನು ಖರೀದಿಸಿರುತ್ತಾರೆ. ಅಲ್ಲದೆ ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ವರದಿ ಮಾಡಲು ಹಣವನ್ನು ಪಡೆದಿದ್ದಾರೆ. ಇದಕ್ಕೆಲ್ಲ ಹಣ ಎಲ್ಲಿಂದ ಬಂತು ಎಂಬುದರ ಬಗ್ಗೆ ಸಮಗ್ರ ತನಿಖೆ ಮಾಡಬೇಕು ಎಂದು ತೇಜಸ್ ಗೌಡ ಆಗ್ರಹಿಸಿದ್ದರು.
ಇನ್ನೊಬ್ಬ ಅರ್ಜಿದಾರರಾದ ಧನಕೀರ್ತಿಯವರು ತಮ್ಮ ದೂರಿನಲ್ಲಿ ಯೂಟ್ಯೂಬರ್ ಕುಡ್ಲ ರ‍್ಯಾಂಪೇಜ್ ಸಂಪಾದಕ ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ನಿರಂತರವಾಗಿ ಷಡ್ಯಂತ್ರ ಪೂರಿತ ವರದಿಗಳನ್ನು ಪ್ರಸಾರ ಮಾಡುತ್ತಿದ್ದು, ಅದಕ್ಕೆ ಯಾವುದು ಮೂಲ ಎಂದು ತನಿಖೆ ಮಾಡಬೇಕು. ಎಸ್ಐಟಿ ತನಿಖೆ ಸಮಯದಲ್ಲಿ ದಿನನಿತ್ಯ ತನ್ನದೇ ತನಿಖಾ ವರದಿಯನ್ನು ಎಸ್ಐಟಿಯ ತನಿಖಾ ವರದಿ ಎಂಬ ರೀತಿಯಲ್ಲಿ ಬಿಂಬಿಸಿ ಪ್ರಸಾರ ಮಾಡುತ್ತಿದ್ದರು ಈ ರೀತಿ ಪ್ರಸಾರ ಮಾಡಲು ಅವರಿಗೆ ವರದಿಯ ಮೂಲ ಯಾವುದು? ಅವರು ಎಸ್ಐಟಿಯಿಂದ ಮತ್ತು ಎಸ್ಐಟಿಯ ಯಾವ ಮೂಲದಿಂದ ಈ ಮಾಹಿತಿಗಳನ್ನು ಪಡೆಯಲು ಸಾಧ್ಯವಾಯಿತು ಎಂದು ಎಸ್ಐಟಿ ತಿಳಿಸುವಂತೆ ಕೋರಿದ್ದರು.
ವಿಠಲಗೌಡ ಎನ್ನುವವರು ಹಿಂದೆ ಹೋಟೆಲು ನಡೆಸುತ್ತಿರುವಾಗ ಜೊತೆಯಲ್ಲಿ ಕೆಲಸ ಮಾಡುವ ಕಾರ್ಮಿಕನನ್ನು ದಾರುಣವಾಗಿ ಕೊಲೆ ಮಾಡಿದ್ದು, ಆ ಪ್ರಕರಣ ಮುಚ್ಚಿ ಹಾಕಲಾಗಿದೆ ಅದಕ್ಕೆ ಸಂಬಂಧಿಸಿದ ಕೆಲ ದಾಖಲಾತಿಗಳನ್ನು ಎಸ್ಐಟಿಗೆ ಸಲ್ಲಿಸಲಾಗಿದೆ. ಇದರ ಬಗ್ಗೆ ಎಸ್ಐಟಿಯು ಕೂಲಂಕವಾಶಗಿ ತನಿಖೆ ಮಾಡಬೇಕು ಎಂದು ಕೋರಲಾಗಿದೆ.