ಸಾಮೂಹಿಕ ಶವಸಂಸ್ಕಾರ: ಎಫ್‌ಎಸ್‌ಎಲ್‌, ಅಂತಿಮ ವರದಿ ಸಲ್ಲಿಸಿರುವುದನ್ನು ಪರಿಗಣಿಸಿ ಅರ್ಜಿ ಇತ್ಯರ್ಥಪಡಿಸಿದ ಹೈಕೋರ್ಟ್‌

ಅಂತಿಮ ವರದಿಯನ್ನು 2025ರ ನವೆಂಬರ್‌ನಲ್ಲೇ ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಲಾಗಿದ್ದು, ಇದೇ ಜುಲೈ 15ರಂದು ಎಫ್‌ಎಸ್‌ಎಲ್ ವರದಿ ಸಲ್ಲಿಸಲಾಗಿದೆ ಎಂದು ಎಸ್‌ಐಟಿ ಪರ ವಕೀಲರ ಹೇಳಿಕೆ ಪರಿಗಣಿಸಿ ನ್ಯಾಯಾಲಯ ಅರ್ಜಿ ವಿಲೇವಾರಿ ಮಾಡಿತು.
Dharmasthala Mass Burial Case
Dharmasthala Mass Burial Case
Published on

ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಸಾಮೂಹಿಕ ಶವಸಂಸ್ಕಾರ ಪ್ರಕರಣ ಕುರಿತ ತನಿಖೆಯನ್ನು ಶೀಘ್ರ ಪೂರ್ಣಗೊಳಿಸಲು ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ನಿರ್ದೇಶಿಸುವಂತೆ ಕೋರಿ ಆರೋಪಿ ಸಿ ಎನ್ ಚಿನ್ನ (ಚಿನ್ನಯ್ಯ) ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಮಂಗಳವಾರ ಇತ್ಯರ್ಥಪಡಿಸಿದೆ.

ಪ್ರಕರಣದ ಅಂತಿಮ ವರದಿಯನ್ನು 2025ರ ನವೆಂಬರ್‌ನಲ್ಲೇ ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಲಾಗಿದ್ದು, ಇದೇ ಜುಲೈ 15ರಂದು ವಿಧಿ ವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್) ವರದಿ ಸಲ್ಲಿಸಲಾಗಿದೆ ಎಂದು ಎಸ್‌ಐಟಿ ಪರ ವಕೀಲರ ಹೇಳಿಕೆ ಪರಿಗಣಿಸಿ ನ್ಯಾಯಾಲಯ ಅರ್ಜಿ ವಿಲೇವಾರಿ ಮಾಡಿತು.

ಪ್ರಕರಣ ಸಂಬಂಧ ಶೀಘ್ರ ಕ್ರಮ ಕೈಗೊಳ್ಳಲು ಎಸ್ಐಟಿಗೆ ‌ನಿರ್ದೇಶಿಸುವಂತೆ ಕೋರಿ ಮಂಡ್ಯ ಮೂಲದ, ಪ್ರಸ್ತುತ ಧರ್ಮಸ್ಥಳ ವಾಸ್ತವ್ಯ ಹೊಂದಿರುವ ಸಿ ಎನ್ ಚಿನ್ನ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಎಸ್‌ಐಟಿ ಪರ ಹಾಜರಾದ ರಾಜ್ಯ ಸರ್ಕಾರಿ ಅಭಿಯೋಜಕ ಬಿ‌ ಎನ್ ಜಗದೀಶ್ ಅವರು, ಶೀಘ್ರ ತನಿಖೆ ಪೂರ್ಣಗೊಳಿಸಲು ಎಸ್‌ಐಟಿಗೆ ನಿರ್ದೇಶಿಸಬೇಕು ಎನ್ನುವುದು ಅರ್ಜಿದಾರರ ಮನವಿಯಾಗಿದೆ. ಆದರೆ, ಪ್ರಕರಣಕ್ಕೆ ಸಂಬಂಧಿಸಿದಂತೆ 2025ರ ನವೆಂಬರ್‌ನಲ್ಲೇ ವಿಚಾರಣಾಧೀನ ನ್ಯಾಯಾಲಯಕ್ಕೆ ಅಂತಿಮ ತನಿಖಾ ವರದಿ ಸಲ್ಲಿಸಲಾಗಿದೆ. ಹೆಚ್ಚುವರಿಯಾಗಿ ಎಫ್‌ಎಸ್‌ಎಲ್ ವರದಿಯನ್ನು 2026ರ ಜುಲೈ 15ರಂದು ಸಲ್ಲಿಸಲಾಗಿದೆ. ಆದ್ದರಿಂದ, ಅರ್ಜಿಯಲ್ಲಿ ಪರಿಗಣಿಸಬಹುದಾದ ಯಾವುದೇ ವಿಚಾರಗಳು ಉಳಿದಿಲ್ಲ. ಇಲ್ಲಿ ಅರ್ಜಿಯನ್ನು ಬಾಕಿ ಉಳಿಸಿಕೊಳ್ಳುವ ಅಗತ್ಯವಿಲ್ಲ. ಒಂದು ವೇಳೆ, ಅಂತಿಮ ವರದಿಯ ಬಗ್ಗೆ ಆಕ್ಷೇಪಣೆಗಳಿದ್ದರೆ ಯಾರು ಬೇಕಿದ್ದರೂ ಆ ವರದಿಯನ್ನು ಪ್ರಶ್ನಿಸಬಹುದು ಎಂದು ಪೀಠಕ್ಕೆ ತಿಳಿಸಿದರು.

ಇದನ್ನು ಆಲಿಸಿದ ಪೀಠವು ರಾಜ್ಯ ಸರ್ಕಾರದ ಪ್ರಕಾರ 2025ರ ನವೆಂಬರ್ ತಿಂಗಳಿನಲ್ಲೇ ವಿಚಾರಣಾ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಲಾಗಿತ್ತು ಹಾಗೂ ಎಫ್‌ಎಸ್‌ಎಲ್ ವರದಿ ಸಲ್ಲಿಕೆ ಮಾತ್ರ ಬಾಕಿ ಇತ್ತು. ಆ ಎಫ್‌ಎಸ್‌ಎಲ್ ವರದಿಯನ್ನು ಜುಲೈ 15ರಂದು ಸಲ್ಲಿಸಲಾಗಿದೆ. ಇದರೊಂದಿಗೆ, ಅಂತಿಮ ವರದಿ ಸಲ್ಲಿಸುವ ಸಂಪೂರ್ಣ ಪ್ರಕ್ರಿಯೆಯು ಪೂರ್ಣಗೊಂಡಿದ್ದು, ಹಾಲಿ ಅರ್ಜಿ ಹಾಗೂ ಅದರಲ್ಲಿನ ಮನವಿಗಳು ನಿರರ್ಥಕವಾಗಿವೆ ಎಂದು ಎಸ್‌ಪಿಪಿ ತಿಳಿಸಿದ್ದಾರೆ. ಅವರ ಈ ಹೇಳಿಕೆ ದಾಖಲಿಸಿಕೊಂಡು, ಅರ್ಜಿ ವಿಲೇವಾರಿ ಮಾಡಲಾಗಿದೆ ಎಂದು ಆದೇಶಿಸಿತು.

ಇದೇ ವೇಳೆ, ಅರ್ಜಿಯಲ್ಲಿ ತಮ್ಮ ವಿರುದ್ಧ ಅನಗತ್ಯ ಹಾಗೂ ಆಧಾರರಹಿತ ಆರೋಪಗಳನ್ನು ಮಾಡಲಾಗಿದೆ ಎಂದು ಆಕ್ಷೇಪಿಸಿ ಚಿತ್ರದುರ್ಗದ ರಮಾ ನಾಗರಾಜ್ ಹಾಗೂ ಜಯಂತ್ ಎಂಬುವರು ಸಲ್ಲಿಸಿದ್ದ ಮಧ್ಯಂತರ ಅರ್ಜಿಗಳನ್ನೂ ನ್ಯಾಯಾಲಯ ಇತ್ಯರ್ಥಪಡಿಸಿದೆ.

ರಿಟ್ ಅರ್ಜಿಯಲ್ಲಿ ತಮ್ಮ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಲಾಗಿದ್ದು, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮಧ್ಯಂತರ ಅರ್ಜಿದಾರರ ಮನವಿಯಾಗಿದೆ. ಅರ್ಜಿಯಲ್ಲಿ ಅಥವಾ ಇನ್ನಾವುದೇ ರೀತಿಯಲ್ಲಿ ಮಾಡಲಾದ ಸುಳ್ಳು ಹೇಳಿಕೆಯಿಂದ ಮಧ್ಯಂತರ ಅರ್ಜಿದಾರರಿಗೆ ಅನ್ಯಾಯವಾಗಿದ್ದರೆ, ಕಾನೂನಿನಡಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ಅವರಿಗೆ ಸದಾ ಮುಕ್ತ ಅವಕಾಶವಿರುತ್ತದೆ. ಅರ್ಜಿಯಲ್ಲಿ ಅವರ ವಿರುದ್ಧ ಮಾಡಲಾದ ಆರೋಪಗಳ ಕುರಿತು ಈ ನ್ಯಾಯಾಲಯ ಯಾವುದೇ ಅಭಿಪ್ರಾಯ ವ್ಯಕ್ತಪಡಿಸಿಲ್ಲ ಎಂದು ಪೀಠ ಆದೇಶದಲ್ಲಿ ಸ್ಪಷ್ಟಪಡಿಸಿದೆ.

Kannada Bar & Bench
kannada.barandbench.com