
ಧರ್ಮಸ್ಥಳದಲ್ಲಿ ಹಲವು ಮಹಿಳೆಯರು, ಹೆಣ್ಣು ಮಕ್ಕಳ ಮೃತ ದೇಹಗಳೂ ಸೇರಿದಂತೆ ಕೊಲೆಯಾದ ನೂರಾರು ಶವಗಳನ್ನು ಹೂತಿರುವುದಾಗಿ ತಿಳಿಸಿರುವ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಇತ್ತೀಚೆಗೆ ದಾಖಲಾಗಿರುವ ಪ್ರಕರಣದ ತನಿಖೆ ದಾರಿ ತಪ್ಪುತ್ತಿದ್ದು, ತಕ್ಷಣ ಮಧ್ಯ ಪ್ರವೇಶಿಸಬೇಕು ಎಂದು ಕೋರಿ ಇಬ್ಬರು ವಕೀಲರು ಹೈಕೋರ್ಟ್ ರಿಜಿಸ್ಟ್ರಾರ್ ಅವರಿಗೆ ಪತ್ರ ಬರೆದಿದ್ದಾರೆ.
ವಕೀಲರಾದ ಶ್ರೀರಾಮ್ ಟಿ.ನಾಯ್ಕ್ ಮತ್ತು ಪೊನ್ನಣ್ಣ ಟಿ ಎ ಎಂಬುವರು ಹೈಕೋರ್ಟ್ ರಿಜಿಸ್ಟ್ರಾರ್‌ಗೆ ಪತ್ರ ಬರೆದಿದ್ದು, ಪ್ರಕರಣದಲ್ಲಿನ ಆರೋಪಿಗಳು ಅತ್ಯಂತ ಪ್ರಭಾವಿಗಳಾಗಿದ್ದು, ರಾಜ್ಯದಾಧ್ಯಂತ ಹಲವು ಮಂದಿ ಅನುಯಾಯಿಗಳನ್ನು ಹೊಂದಿದ್ದಾರೆ. ತನಿಖೆಗೆ ಪೂರ್ವಗ್ರಹ ಉಂಟಾಗುತ್ತಿದ್ದು, ನ್ಯಾಯಯುತ ತನಿಖೆಗಾಗಿ ಮಧ್ಯ ಪ್ರವೇಶ ಮಾಡಬೇಕು ಎಂದು ಕೋರಿದ್ದಾರೆ.
ಪ್ರಕರಣದ ಸಂಬಂಧ ದೂರುದಾರರನು ನೀಡಿರುವ ಹೇಳಿಕೆಗಳನ್ನು ತನಿಖಾಧಿಕಾರಿಗಳು ಕೆಲವು ವ್ಯಕ್ತಿಗಳೊಂದಿಗೆ ಹಂಚಿಕೊಂಡಿದ್ದಾರೆ. ಇತ್ತೀಚೆಗೆ ನಡೆದಿರುವ ಘಟನಾವಳಿಗಳು ತನಿಖಾ ಸಂಸ್ಥೆಯ ಮೇಲೆ ಅನುಮಾನಕ್ಕೆ ಕಾರಣವಾಗುತ್ತಿದೆ. ಆರೋಪಿ ಯಾರು ಎಂಬುದನ್ನು ಈವರೆಗೂ ತನಿಖೆಯಿಂದ ಬಹಿರಂಗ ಪಡಿಸಿಲ್ಲ. ಆದರೂ, ರಾಜ್ಯದ ಎಲ್ಲ ರಾಜಕೀಯ ವ್ಯಕ್ತಿಗಳು ಕೆಲವು ಪ್ರಭಾವಿಗಳ ಬೆಂಬಲಕ್ಕೆ ನಿಲ್ಲುತ್ತಿದ್ದಾರೆ ಎಂದು ಪತ್ರದಲ್ಲಿ ಹೇಳಲಾಗಿದೆ.
ಈ ಸಂಬಂಧ ದೂರು ದಾಖಲಾದ ತಕ್ಷಣ ಪ್ರಭಾವಿಗಳ ಪರ ವ್ಯಕ್ತಿಯೊಬ್ಬರು ಗೃಹ ಸಚಿವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಗೃಹ ಸಚಿವರು, ಆರೋಗ್ಯ, ವೈದ್ಯಕೀಯ ಶಿಕ್ಷಣ ಖಾತೆ ತಮ್ಮಲ್ಲಿ ಇಲ್ಲದಿದ್ದರೂ ವೈದ್ಯಕೀಯ ಕಾಲೇಜಿನ ವಿಚಾರಕ್ಕಾಗಿ ಭೇಟಿ ಮಾಡಲಾಗಿತ್ತು ಎಂಬುದಾಗಿ ತಿಳಿಸಿದ್ದಾರೆ. ಈ ಅಂಶ ತನಿಖೆಯ ಮೇಲೆ ಸಂಶಯಕ್ಕೆ ಕಾರಣವಾಗಲಿದೆ. ತನಿಖೆಯನ್ನು ದಾರಿ ತಪ್ಪಿಸುವ ಸಾಧ್ಯತೆಯಿದ್ದು, ಅತ್ಯಾಚಾರ ಮತ್ತು ಕೊಲೆಯಂತಹ ಅಮಾನವೀಯ ಕೃತ್ಯಗಳಿಗೊಳಗಾದವರಿಗೆ ಅನ್ಯಾಯವಾದಂತಾಗಲಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಪ್ರಸ್ತುತ ಪ್ರಕರಣದಲ್ಲಿ ಅಪರಾಧ ಕೃತ್ಯವು ಅಪ್ರಾಪ್ತ ಮಕ್ಕಳ ವಿರುದ್ಧದ ಘೋರ ಕೃತ್ಯವಾಗಿದೆ. ಹೀಗಾಗಿ ತನಿಖಾ ಸಂಸ್ಥೆಗಳು ಎಚ್ಚರಿಕೆಯಿಂದ ಮುಂದುವರೆಯಬೇಕು. ಮೃತ ಶವಗಳನ್ನು ವಿಧಿವಿಜ್ಞಾನ ಪ್ರಯೋಗಾಲಯ ಮತ್ತು ಡಿಎನ್‌ಎ ಪರೀಕ್ಷೆಗೆ ಕಳುಹಿಸಬೇಕಾಗುತ್ತದೆ. ಈ ಹಿಂದೆ ದಾಖಲಾದಂತಹ ನಾಪತ್ತೆ ಪ್ರಕಣಗಳ ಪರಿಶೀಲನೆಗೊಳಪಡಿಸಬೇಕು. ದೂರುದಾರರು ನ್ಯಾಯಾಲಯದ ಮುಂದೆ ತಮ್ಮ ಹೇಳಿಕೆ ದಾಖಲಿಸಿ 17 ದಿನಗಳು ಕಳೆದಿದ್ದರೂ, ಈವರೆಗೂ ಯಾವುದೇ ಶವವನ್ನು ಹೊರತೆಗೆದು, ಆರೋಪಿಗಳನ್ನು ಬಂಧಿಸುವ ಪ್ರಯತ್ನ ಮಾಡಿಲ್ಲ ಎನ್ನಲಾಗಿದೆ.
ಅಧಿಕಾರಿಗಳ ವಿಳಂಬ ದೋರಣೆ ಅಪರಾಧಿಗಳು ಶವಗಳನ್ನು ಹೊರತೆಗೆದು ಅವರ ವಿರುದ್ಧದ ಸಾಕ್ಷ್ಯಗಳನ್ನು ನಾಶಪಡಿಸುವುದಕ್ಕೆ ಅವಕಾಶ ನೀಡಿದಂತಾಗಲಿದೆ. ಪ್ರಕರಣ ದಾಖಲಾದ ಬಳಿಕ ಬಿಜೆಪಿ ಮುಖಂಡರೊಬ್ಬರು ಧರ್ಮಸ್ಥಳದ ಪ್ರತಿಷ್ಟೆಯನ್ನು ಹಾಳು ಮಾಡಲಾಗುತ್ತಿದೆ ಎಂಬುದಾಗಿ ಹೇಳಿಕೆ ನೀಡುವ ಮೂಲಕ ಅಪರಿಚಿತ ಆರೋಪಿಯಗೆ ಬೆಂಬಲ ಸೂಚಿಸಿದ್ದಾರೆ ಎಂದು ವಿವರಿಸಿದ್ದಾರೆ.