
ಕರ್ನಾಟಕ ಹೈಕೋರ್ಟ್‌ನ ನಾಲ್ವರು ಪ್ರಮುಖ ನ್ಯಾಯಮೂರ್ತಿಗಳನ್ನು ದೇಶದ ಬೇರೆಬೇರೆ ಹೈಕೋರ್ಟ್‌ಗಳಿಗೆ ವರ್ಗಾವಣೆ ಮಾಡಲಾಗುತ್ತದೆ ಎಂಬ ಪ್ರಸ್ತಾವನೆ ಇರುವುದಾಗಿ ಶಂಕೆ ವ್ಯಕ್ತಪಡಿಸಿರುವ ಹೈಕೋರ್ಟ್‌ನ ಧಾರವಾಡ ಪೀಠದ ವಕೀಲರ ಸಂಘವು ಇದಕ್ಕೆ ಪ್ರಬಲ ವಿರೋಧ ದಾಖಲಿಸಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರಿಗೆ ಗುರುವಾರ ಪತ್ರ ಬರೆದಿದೆ.
ನ್ಯಾಯಮೂರ್ತಿಗಳಾದ ಕೃಷ್ಣ ಎಸ್. ದೀಕ್ಷಿತ್, ಕೆ ನಟರಾಜನ್, ಎನ್ ಎಸ್ ಸಂಜಯ್ ಗೌಡ ಮತ್ತು ಹೇಮಂತ್ ಚಂದನಗೌಡರ್ ಅವರನ್ನು ವರ್ಗಾವಣೆ ಮಾಡುವ ಪ್ರಸ್ತಾವ ಇದೆ ಎಂಬ ಮಾಹಿತಿ ಲಭ್ಯವಾಗಿದೆ. ಯಾವುದೇ ಕಾರಣಕ್ಕೂ ಈ ನ್ಯಾಯಮೂರ್ತಿಗಳ ವರ್ಗಾವಣೆಗೆ ಅವಕಾಶ ನೀಡುವುದಿಲ್ಲ ಎಂದು ಸಂಘದ ಅಧ್ಯಕ್ಷ ವಿ ಎಂ ಶೀಲವಂತ್ ಹೇಳಿದ್ದಾರೆ.
"ಮೇಲೆ ಉಲ್ಲೇಖಿಸಿರುವ ನ್ಯಾಯಮೂರ್ತಿಗಳು ನಿಸ್ವಾರ್ಥ ಸೇವೆ, ಪ್ರಶ್ನಾತೀತವಾದ ಪ್ರಾಮಾಣಿಕತೆ, ನ್ಯಾಯಿಕ ಸಂವೇದನೆ, ಸಮತೆ ಮತ್ತು ಸಾಮರ್ಥ್ಯಕ್ಕೆ ಹೆಸರಾಗಿದ್ದಾರೆ. ಈ ಅತ್ಯುತ್ತಮ ಕಾನೂನು ವಿಶಾರದ ನ್ಯಾಯಮೂರ್ತಿಗಳ ವರ್ಗಾವಣೆ ಪ್ರಸ್ತಾವವು ನ್ಯಾಯವಾದಿ ವರ್ಗ ಹಾಗೂ ದಾವೆದಾರ ಸಾರ್ವಜನಿಕರನ್ನು ವಂಚಿತರನ್ನಾಗಿಸಲಿದ್ದು, ದಿಟವಾಗಿಯೂ ಈ ನ್ಯಾಯಮೂರ್ತಿಗಳ ಮನೋಬಲ ಕುಗ್ಗಿಸಲಿದೆ. ಇದು ಕರ್ನಾಟಕ ಹೈಕೋರ್ಟ್‌ನ ಕಾರ್ಯನಿರ್ವಹಣೆಗೆ ಭಂಗ ತರಲಿದ್ದು, ಅದನ್ನು ಕುಂಠಿತಗೊಳಿಸಲಿದೆ. ಅಲ್ಲದೆ, ನ್ಯಾಯವರ್ಗದ ಸ್ಥೈರ್ಯವನ್ನು ಕುಗ್ಗಿಸಿ, ದಾವೆದಾರರಾದ ಸಾರ್ವಜನಿಕರಿಗೆ ಆಘಾತಕಾರಿಯಾಗಲಿದೆ" ಎಂದು ಪತ್ರದಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ.
ದಾವೆದಾರರು ಹಾಗೂ ನ್ಯಾಯವಾದಿ ವರ್ಗದ ಹಿತದೃಷ್ಟಿಯಿಂದ ಈ ನ್ಯಾಯಮೂರ್ತಿಗಳನ್ನು ಕರ್ನಾಟಕ ಹೈಕೋರ್ಟ್‌ನಿಂದ ವರ್ಗಾವಣೆ ಮಾಡಲು ಅವಕಾಶ ನೀಡುವುದಿಲ್ಲ ಎನ್ನುವುದು ನ್ಯಾಯವಾದಿ ವರ್ಗದ ದೃಢ ನಿರ್ಧಾರವಾಗಿದೆ. ಇಂತಹ ಕ್ರಮವು ನೇತ್ಯಾತ್ಮಕವಾಗಿದ್ದು, ಅಡಚಣೆಕಾರಿಯಾಗಲಿದೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.
ವರ್ಗಾವಣೆ ವಿಚಾರವಾಗಿ ನ್ಯಾಯವಾದಿ ವರ್ಗವನ್ನು ಸಂಪರ್ಕಿಸಲಾಗಿಲ್ಲ ಎಂದು ಆಕ್ಷೇಪಿಸಲಾಗಿದ್ದು, ವರ್ಗಾವಣೆಯ ಪ್ರಸ್ತಾವಕ್ಕೆ ವಕೀಲರ ಸಂಘವು ಒಕ್ಕೊರಲ ಪ್ರಬಲ ವಿರೋಧ ದಾಖಲಿಸುತ್ತಿದೆ ಎಂದು ವಿವರಿಸಲಾಗಿದೆ.