ಸುಮಾರು ₹34,000 ಕೋಟಿ ಬ್ಯಾಂಕ್ ಸಾಲ ಹಗರಣಕ್ಕೆ ಸಂಬಂಧಿಸಿದಂತೆ ದಿವಾನ್ ಹೌಸಿಂಗ್ ಮತ್ತು ಫೈನಾನ್ಸ್ ಲಿಮಿಟೆಡ್ (ಡಿಎಚ್‌ಎಫ್‌ಎಲ್) ಮಾಜಿ ವ್ಯವಸ್ಥಾಪಕ ನಿರ್ದೇಶಕ ಕಪಿಲ್ ವಾಧ್ವಾನ್ ಮತ್ತು ನಿರ್ದೇಶಕ ಧೀರಜ್ ವಾಧ್ವಾನ್ ಅವರಿಗೆ ದೆಹಲಿ ನ್ಯಾಯಾಲಯವು ಶಾಸನಬದ್ಧ ಜಾಮೀನು ನಿರಾಕರಿಸಿದೆ.
ತಮ್ಮ ಬಂಧನವಾಗಿ 60 ದಿನಗಳು ಕಳೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಸಿಬಿಐ ತನಿಖೆ ಪೂರ್ಣಗೊಳಿಸಿಲ್ಲ ಮತ್ತು ಆರೋಪ ಪಟ್ಟಿಯನ್ನು ಇನ್ನೂ ಸಲ್ಲಿಸಿಲ್ಲ ಎಂದು ವಾದಿಸಿದ್ದರು. ಹೀಗಾಗಿ, ಸಿಆರ್‌ಪಿಸಿ ಸೆಕ್ಷನ್ 167ರ ಅಡಿ ಅವರು ಶಾಸನಬದ್ಧ ಜಾಮೀನಿಗೆ ಅರ್ಹರು ಎಂದು ಅರ್ಜಿಯಲ್ಲಿ ವಿವರಿಸಲಾಗಿತ್ತು. 2022ರ ಜುಲೈ 19ರಂದು ಕಪಿಲ್ ಮತ್ತು ಧೀರಜ್ ಅವರನ್ನು ಸಿಬಿಐ ಬಂಧಿಸಿತ್ತು.
ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 409ರ ಅಡಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಪೂರ್ಣಗಳಿಸಲು ಸಿಆರ್‌ಪಿಸಿ 167(2)(ಎ)(i) ಅಡಿ 90 ದಿನಗಳ ಕಾಲಾವಕಾಶ ಇರಲಿದೆ. ಹೀಗಾಗಿ, ಸಿಆರ್‌ಪಿಸಿ ಸೆಕ್ಷನ್ 167(2) ಅಡಿ ಅವರು ಶಾಸನಬದ್ಧ ಜಾಮೀನಿಗೆ ಅರ್ಹರಲ್ಲ ಎಂದು ವಿಶೇಷ ನ್ಯಾಯಾಧೀಶ ವಿಶಾಲ್ ಗೋಗ್ನೆ ಅವರು ಆದೇಶದಲ್ಲಿ ಹೇಳಿದ್ದಾರೆ.
ಕಪಿಲ್ ಮತ್ತು ಧೀರಜ್ ಅವರು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದ 17 ಬ್ಯಾಂಕ್‌ಗಳ ಒಕ್ಕೂಟಕ್ಕೆ ಕ್ರಿಮಿನಲ್ ಪಿತೂರಿ ನಡೆಸಿ, ₹34,615 ಕೋಟಿ ವಂಚನೆ ಮಾಡಿದ್ದಾರೆ ಎಂಬುದು ಆರೋಪವಾಗಿದೆ.