

"ಮೈಸೂರಿನ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ನಿವೃತ್ತ ಸಹಾಯಕ ಆಡಳಿತಾಧಿಕಾರಿ ವೈ ವೈ ಬಗಲಿ ಅವರು ಕಾಡುಗಳ್ಳ ವೀರಪ್ಪನ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರೇ?" ಎಂಬ ಬಗ್ಗೆ ಪರಿಶೀಲಿಸಿ ಮಾಹಿತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಬುಧವಾರ ನಿರ್ದೇಶಿಸಿದೆ.
ಹೈಕೋರ್ಟ್ ಆದೇಶದ ಹೊರತಾಗಿಯೂ ತಮಗೆ ಪ್ರತಿ ಚದರ ಮೀಟರ್‌ಗೆ 2,100 ರೂಪಾಯಿ ದರದಲ್ಲಿ ನಿವೇಶನ ಮಂಜೂರು ಮಾಡಲು ಬಿಡಿಎ ಹಾಗೂ ಸರ್ಕಾರ ವಿಫಲವಾಗಿದೆ ಎಂದು ಆಕ್ಷೇಪಿಸಿ ನಿವೃತ್ತ ಕಮಾಂಡಂಟ್ ರಾಮದಾಸ್ ಗೌಡ ಮತ್ತು ನಿವೃತ್ತ ಸಹಾಯಕ ಆಡಳಿತಾಧಿಕಾರಿ ವೈ ವೈ ಬಗಲಿ ಅವರು ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಕೆ ಸೋಮಶೇಖರ್ ಮತ್ತು ಟಿ ವೆಂಕಟೇಶ್ ನಾಯ್ಕ್ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಿತು.
ಅರ್ಜಿ ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು “ಬಗಲಿ ಅವರು ವೀರಪ್ಪನ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿಲ್ಲ” ಎಂದು ಪೀಠದ ಗಮನಕ್ಕೆ ತಂದರು.
ಇದಕ್ಕೆ ಆಕ್ಷೇಪಿಸಿದ ಬಗಲಿ ಪರ ವಕೀಲರು “ತಮ್ಮ ಕಕ್ಷಿದಾರರು ವೀರಪ್ಪನ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ” ಎಂದು ಸ್ಪಷ್ಟಪಡಿಸಿದರು.
ವಾದ-ಪ್ರತಿವಾದ ಆಲಿಸಿದ ಪೀಠವು “ಬಗಲಿ ಅವರು ವೀರಪ್ಪನ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆಯೇ ಎಂಬುದನ್ನು ಪರಿಶೀಲಿಸಿ ನ್ಯಾಯಾಲಯಕ್ಕೆ ಸ್ಪಷ್ಟ ಮಾಹಿತಿ ನೀಡಬೇಕು” ಎಂದು ಸರ್ಕಾರಕ್ಕೆ ನಿರ್ದೇಶಿಸಿ, ಅರ್ಜಿ ವಿಚಾರಣೆಯನ್ನು ಫೆಬ್ರವರಿ 12ಕ್ಕೆ ಮುಂದೂಡಿತು.
“ಒಂದೊಮ್ಮೆ ವೀರಪ್ಪನ್ ಕಾರ್ಯಾಚರಣೆಯಲ್ಲಿ ಭಾಗವಹಿಸಿಲ್ಲ ಎಂಬುದು ದೃಢಪಟ್ಟರೆ, ಬಗಲಿ ಅವರು ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ. ಅವರಿಗೆ ಮಂಜೂರು ಮಾಡಿರುವ ನಿವೇಶನ ಹಿಂಪಡೆಯುವಂತೆ ಸರ್ಕಾರಕ್ಕೆ ಸೂಚಿಸಬೇಕಾಗುತ್ತದೆ” ಎಂದು ಪೀಠ ಎಚ್ಚರಿಕೆ ನೀಡಿದೆ.
ವೀರಪ್ಪನ್ ಹುಟ್ಟೂರಲ್ಲಿ ನಿವೇಶನ ನೀಡಬೇಕಿತ್ತು: "ಕೆಂಪೇಗೌಡ ಬಡಾವಣೆಯಲ್ಲಿ ನಿವೇಶನ ಪಡೆಯಬೇಕಾದರೆ ಯಾವುದೋ ಜನ್ಮದಲ್ಲಿ ಪುಣ್ಯ ಮಾಡಿರಬೇಕಿತ್ತು. ವೀರಪ್ಪನ್ ಅನ್ನು ಜೀವಂತವಾಗಿ ಸೆರೆಹಿಡಿಯಲಿಲ್ಲ. ಆದರೆ, ಕೆಂಪೇಗೌಡ ಬಡಾವಣೆಯಲ್ಲಿ ಮಂಜೂರು ಮಾಡಿರುವ ನಿವೇಶನವನ್ನು ಪಡೆದು ಸುಮ್ಮನಿರುವ ಬದಲು ಹೆಚ್ಚಿನ ದರದಲ್ಲಿ ನಿವೇಶನ ಮಂಜೂರು ಮಾಡಲಾಗಿದೆ ಎಂದು ಆಕ್ಷೇಪಿಸಿ ಅರ್ಜಿದಾರರು ನ್ಯಾಯಾಲಯಕ್ಕೆ ಬಂದಿರುವುದು ವಿಪರ್ಯಾಸ" ಎಂದು ಪೀಠ ಬೇಸರ ವ್ಯಕ್ತಪಡಿಸಿತು.
ಹಾಗೆಯೇ, ಸರ್ಕಾರವು ಸಿಕ್ಕಸಿಕ್ಕ ಕಡೆಯೆಲ್ಲೆಲ್ಲಾ ನಿವೇಶನ ನೀಡಿದರೆ ಇಂತಹ ಬೆಳವಣಿಗೆಗಳೇ ನಡೆಯುತ್ತವೆ. ವೀರಪ್ಪನ್ ಹುಟ್ಟೂರು ಗೋಪಿನಾಥಂನಲ್ಲಿ ನಿವೇಶನ ಮಂಜೂರು ಮಾಡಿದ್ದರೆ ಚೆನ್ನಾಗಿರುತ್ತಿತ್ತು. ಆಗ ಮಂಜೂರುದಾರರು ಗೋಪಿನಾಂಥ್‌ಗೆ ತೆರಳಿ ನೆಲೆಸುತ್ತಿದ್ದರೇ? ಎಂಬುದನ್ನು ನೋಡಬಹುದಿತ್ತು ಎಂದು ಮಾರ್ಮಿಕವಾಗಿ ಹೇಳಿತು.
ಪ್ರಕರಣದ ಹಿನ್ನೆಲೆ: ಕೆಂಪೇಗೌಡ ಬಡಾವಣೆಯಲ್ಲಿ ರಾಮದಾಸ್ ಗೌಡ ಅವರಿಗೆ 60X40 ಮತ್ತು ವೈ ವೈ ಬಗಲಿ ಅವರಿಗೆ 30X40 ಚದರ ಅಡಿ ವಿಸ್ತೀರ್ಣದ ನಿವೇಶನ ಮಂಜೂರು ಮಾಡಿ 2017ರಲ್ಲಿ ಬಿಡಿಎ ಪತ್ರ ನೀಡಿತ್ತು. ಆದರೆ, 2018ರಲ್ಲಿ ಹೈಕೋರ್ಟ್ ಮೆಟ್ಟಿಲೇರಿದ್ದ ಅವರು, ಸರ್ಕಾರ 2010ರ ಡಿಸೆಂಬರ್ 18ರಂದು ಹೊರಡಿಸಿದ ಆದೇಶದಂತೆ ವೀರಪ್ಪನ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಪೊಲೀಸ್ ಅಧಿಕಾರಿಗಳು ಪ್ರತಿ ಚದರ ಮೀಟರ್‌ಗೆ 2,100 ರೂಪಾಯಿ ದರದಲ್ಲಿ ನಿವೇಶನ ಪಡೆಯಲು ಅರ್ಹರಾಗಿದ್ದಾರೆ. ಆದರೆ, ತಮಗೆ ಮಂಜೂರು ಮಾಡಲಾದ ನಿವೇಶನದ ಪ್ರತಿ ಚದರ ಮೀಟರ್‌ಗೆ ಕ್ರಮವಾಗಿ 24,219 ರೂಪಾಯಿ ಮತ್ತು 21,258 ರೂಪಾಯಿ ದರ ನಿಗದಿಪಡಿಸಲಾಗಿದೆ ಎಂದು ಆಕ್ಷೇಪಿಸಿದ್ದರು.
ಅರ್ಜಿಯನ್ನು 2021ರ ನವೆಂಬರ್ 17ರಂದು ವಿಚಾರಣೆ ನಡೆಸಿದ್ದ ಹೈಕೋರ್ಟ್ ಏಕ ಸದಸ್ಯ ಪೀಠವು 2010ರಲ್ಲಿ ರಾಜ್ಯ ಸರ್ಕಾರ ಹೊರಡಿಸಿದ ಆದೇಶದಂತೆ ಅದರಂತೆ ಪ್ರತಿ ಚದರ ಮೀಟರ್‌ಗೆ 2,100 ರೂಪಾಯಿ ದರದಲ್ಲಿ ನಿವೇಶನ ಮಂಜೂರು ಮಾಡಬೇಕು ಎಂಬ ಅರ್ಜಿದಾರರ ಮನವಿ ಪರಿಗಣಿಸಿ ಸೂಕ್ತ ಆದೇಶ ಹೊರಡಿಸಬೇಕು ಎಂದು ಸರ್ಕಾರ ಹಾಗೂ ಬಿಡಿಎಗೆ ನಿರ್ದೇಶಿಸಿತ್ತು.
ಇದೀಗ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿರುವ ಅರ್ಜಿದಾರರು, ಹೈಕೋರ್ಟ್ ಆದೇಶವನ್ನು ಉದ್ದೇಶಪೂರ್ವಕವಾಗಿ ಬಿಡಿಎ ಹಾಗೂ ಸರ್ಕಾರ ಪಾಲಿಸಿಲ್ಲ. ಹೀಗಾಗಿ, ಬಿಡಿಎ ಆಯುಕ್ತರು ಮತ್ತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ವಿರುದ್ಧ ನ್ಯಾಯಾಂಗ ನಿಂದನೆ ಆರೋಪದಡಿ ಕ್ರಮ ಜರುಗಿಸುವಂತೆ ಕೋರಿದ್ದಾರೆ.