ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯಿದೆಯಡಿ ದಾಖಲಾದ ಪ್ರಕರಣ ಕುರಿತಂತೆ ಕೇರಳದ ಪ್ರಸಿದ್ಧ ನೃತ್ಯ ಪ್ರಕಾರ ಮೋಹಿನಿಯಾಟ್ಟಂ ಕಲಾವಿದೆ ಕಲಾಮಂಡಲಂ ಸತ್ಯಭಾಮಾ ಅವರು ಪರಿಶಿಷ್ಟ ಜಾತಿಗೆ ಸೇರಿದ ಸಹ ಕಲಾವಿದ ಆರ್ ಎಲ್ ವಿ ರಾಮಕೃಷ್ಣನ್ ಅವರ ವಿರುದ್ಧ ಜಾತಿ ಕಾರಣಕ್ಕಾಗಿಯೇ ಹೇಳಿಕೆ ನೀಡಿದ್ದರೆ ಎಂದು ಕೇರಳ ಹೈಕೋರ್ಟ್ ಮಂಗಳವಾರ ಪ್ರಶ್ನಿಸಿದೆ.
ಎಸ್‌ಸಿ/ಎಸ್‌ಟಿ ಕಾಯಿದೆಯಡಿ ರೂಪುಗೊಂಡಿರುವ ವಿಶೇಷ ನ್ಯಾಯಾಲಯ ತಮಗೆ ನಿರೀಕ್ಷಣಾ ಜಾಮೀನು ನೀಡದೆ ಇರುವುದನ್ನು ಪಶ್ನಿಸಿ ಸತ್ಯಭಾಮಾ ಅವರು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿ ಕೆ ಬಾಬು ಅವರು ಈ ಪ್ರಶ್ನೆ ಕೇಳಿದರು.
ಕೆಲ ದಿನಗಳ ಹಿಂದೆ ಬಂಧನದಿಂದ ನೃತ್ಯಗಾರ್ತಿಗೆ ಮಧ್ಯಂತರ ರಕ್ಷಣೆ ನೀಡಿದ್ದ ನ್ಯಾಯಾಲಯ ಪ್ರಾಸಿಕ್ಯೂಷನ್ ಪ್ರತಿಕ್ರಿಯೆ ಕೇಳಿತ್ತು.
ಇಂದು ನಡೆದ ವಿಚಾರಣೆ ವೇಳೆ ನ್ಯಾ. ಬಾಬು ಅವರು ಪರಿಶಿಷ್ಟ ಜಾತಿ ಸದಸ್ಯ ರಾಮಕೃಷ್ಣನ್ ವಿರುದ್ಧ ಸತ್ಯಭಾಮಾ ನೀಡಿರುವ ಹೇಳಿಕೆಗಳು ಎಸ್‌ಸಿ/ಎಸ್‌ಟಿ ಕಾಯಿದೆಯ ಸೆಕ್ಷನ್ 3 (1) (ಆರ್) ಅಡಿ ಬರುತ್ತವೆಯೇ ಎಂದು ಕೇಳಿದರು.
ಸಾರ್ವಜನಿಕವಾಗಿ ಪರಿಶಿಷ್ಟ ಜಾತಿ ಅಥವಾ ಪಂಗಡದ ಸದಸ್ಯರನ್ನು ಉದ್ದೇಶಪೂರ್ವಕವಾಗಿ ಅವಮಾನಿಸುವುದು ಅಥವಾ ಬೆದರಿಕೆ ಹಾಕುವುದು ಎಸ್‌ಸಿ/ಎಸ್‌ಟಿ ಕಾಯಿದೆಯಡಿ ದೌರ್ಜನ್ಯ ಎಂದು ಈ ಸೆಕ್ಷನ್ ಹೇಳುತ್ತದೆ.
ಆನ್‌ಲೈನ್ ಸಂದರ್ಶನವೊಂದರಲ್ಲಿ ಸತ್ಯಭಾಮಾ ಅವರು ರಾಮಕೃಷ್ಣನ್ ಕಣ್ಣೋಟ ಮತ್ತು ಚರ್ಮದ ಬಣ್ಣದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಬಳಿಕ ರಾಮಕೃಷ್ಣನ್ ಅವರು ನೀಡಿದ್ದ ದೂರಿನ ಮೇರೆಗೆ ಪೊಲೀಸರು ಎಸ್‌ಸಿ/ಎಸ್‌ಟಿ ಕಾಯಿದೆಯಡಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿಕೊಂಡಿದ್ದರು. ನಂತರ ಆಕೆ ನಿರೀಕ್ಷಣಾ ಜಾಮೀನಿಗಾಗಿ ವಿಶೇಷ ನ್ಯಾಯಾಲಯದ ಮೊರೆ ಹೋಗಿದ್ದರು ಆದರೆ ಮೇಲ್ನೋಟಕ್ಕೆ ಕೃತ್ಯ ಎಸಗಿರುವುದು ಸಾಬೀತಾಗಿದೆ ಎಂದಿದ್ದ ನ್ಯಾಯಾಲಯ ಆಕೆಯ ಅರ್ಜಿ ತಿರಸ್ಕರಿಸಿತ್ತು.
ಮೋಹಿನಿಯಾಟ್ಟಂನ ಕಲಾತ್ಮಕ ಮಾನದಂಡಗಳ ಕುರಿತು ಸತ್ಯಭಾಮಾ ಅವರು ವೈಯಕ್ತಿಕ ಅಭಿಪ್ರಾಯ ನೀಡಿದ್ದರೆ ವಿನಾ ಯಾರನ್ನೂ ಗುರಿಯಾಗಿಸಿಕೊಂಡಿರಲಿಲ್ಲ ಎಂದು ಅವರ ಪರ ವಕೀಲರು ವಾದಿಸಿದರು.
ಆದರೆ, ಸತ್ಯಭಾಮಾರ ಹೇಳಿಕೆಗಳು ರಾಮಕೃಷ್ಣನ್ ಅವರನ್ನು ನಿರ್ದಿಷ್ಟವಾಗಿ ಉಲ್ಲೇಖಿಸಿದ್ದು ಇದರಿಂದ ಅವರು ತೀವ್ರ ಅವಮಾನ ಎದುರಿಸುವಂತಾಯಿತು ಎಂದು ರಾಮಕೃಷ್ಣನ್ ಪರ ವಕೀಲರು ವಾದಿಸಿದರು.
ಪ್ರಕರಣವನ್ನು ನಾಳೆಗೆ (ಜೂನ್ 6) ಮುಂದೂಡಿದ ನ್ಯಾಯಾಲಯ, ಸತ್ಯಭಾಮಾ ಅವರು ನೀಡಿದ ಹೇಳಿಕೆಗಳು ಎಸ್‌ಸಿ/ಎಸ್‌ಟಿ ಕಾಯಿದೆ ವ್ಯಾಪ್ತಿಗೆ ಹೇಗೆ ಬರುತ್ತವೆ ಎಂಬುದನ್ನು ತಿಳಿಸುವಂತೆ ಕಕ್ಷಿದಾರರಿಗೆ ಸೂಚಿಸಿತು.