ಶಾಪಿಂಗ್‌ ಮಾಲ್‌ ಮಾಲೀಕರು ಡೀಸೆಲ್‌ ಜನರೇಟರ್‌ ಸೆಟ್‌ಗೆ ವಾರ್ಷಿಕ ಟ್ರೇಡ್‌ ಲೈಸನ್ಸ್‌ ಪಡೆವ ಅಗತ್ಯವಿಲ್ಲ: ಹೈಕೋರ್ಟ್‌

“ಮಾಲ್‌ನೊಳಗೆ ಕಾರ್ಯನಿರ್ವಹಿಸುವ ಪ್ರತ್ಯೇಕ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳು ತಮ್ಮದೇ ಟ್ರೇಡ್‌ ಲೈಸೆನ್ಸ್‌ ಪಡೆಯಬೇಕು” ಎಂದು ಹೇಳಿದೆ.
Karnataka High Court
Karnataka High Court
Published on

ಶಾಪಿಂಗ್‌ ಮಾಲ್‌ ಮಾಲೀಕರೇ ಹೊಂದಿರುವ ಮತ್ತು ನಿರ್ವಹಿಸುತ್ತಿರುವ ಡೀಸೆಲ್‌ ಜನರೇಟರ್‌ ಸೆಟ್‌ಗೆ ಬಿಬಿಎಂಪಿ (ಜಿಬಿಎ)ಯಿಂದ ವಾರ್ಷಿಕ ಟ್ರೇಡ್‌ ಲೈಸೆನ್ಸ್‌ ಪಡೆಯುವ ಅಥವಾ ನವೀಕರಿಸುವ ಅಗತ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್‌ ಈಚೆಗೆ ಸ್ಪಷ್ಟಪಡಿಸಿದೆ.

ಬೆಂಗಳೂರಿನ ಫೀನಿಕ್ಸ್‌ ಮಾರ್ಕೆಟ್‌ ಸಿಟಿ ಮಾಲ್‌ ನಿರ್ವಹಿಸುತ್ತಿರುವ ಐಲ್ಯಾಂಡ್‌ ಸ್ಟಾರ್‌ ಮಾಲ್‌ ಡೆವಲಪರ್ಸ್‌ ಪ್ರೈವೇಟ್‌ ಲಿಮಿಟೆಡ್‌ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಅನು ಶಿವರಾಮನ್‌ ಮತ್ತು ಟಿ ಪಿ ವಿವೇಕಾನಂದ ಅವರ ವಿಭಾಗೀಯ ಪೀಠ ಪುರಸ್ಕರಿಸಿದೆ.

Justice Anu Sivaraman & Justice T P Vivekananda
Justice Anu Sivaraman & Justice T P Vivekananda

“ಜನರೇಟರ್‌ ಸೆಟ್‌ಗೆ ಅಗತ್ಯವಾದ ತಪಾಸಣೆ ಹಾಗೂ ಪ್ರಮಾಣೀಕರಣವನ್ನು ವಿದ್ಯುತ್‌ ನಿರೀಕ್ಷಕರು ಮತ್ತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ(ಕೆಎಸ್‌ಪಿಸಿಬಿ)ನಡೆಸುತ್ತಿರುವಾಗ, ಬಿಬಿಎಂಪಿ ವಾರ್ಷಿಕ ಟ್ರೇಡ್‌ ಲೈಸೆನ್ಸ್‌ ಪಡೆಯುವಂತೆ ಒತ್ತಾಯಿಸಿ ಭಾರಿ ನವೀಕರಣ ಶುಲ್ಕ ವಿಧಿಸುವುದು ಸಮರ್ಥನೀಯವಲ್ಲ” ಎಂದು ಪೀಠ ಹೇಳಿದೆ.

ಏಕಸದಸ್ಯ ಪೀಠದ ಅಭಿಪ್ರಾಯ ಒಪ್ಪದ ವಿಭಾಗೀಯ ಪೀಠವು “ಬಿಬಿಎಂಪಿ ವ್ಯಾಪ್ತಿಯಲ್ಲಿ ಶಾಪಿಂಗ್‌ ಮಾಲ್‌ ನಡೆಸುತ್ತಿರುವ ಕಾರಣಕ್ಕೆ ಮಾತ್ರ ಅದರ ಮಾಲೀಕರು ಟ್ರೇಡ್‌ ಲೈಸೆನ್ಸ್‌ ಪಡೆಯಬೇಕಾಗಿಲ್ಲ. ಆದರೆ, ಮಾಲ್‌ನೊಳಗೆ ಕಾರ್ಯನಿರ್ವಹಿಸುವ ಪ್ರತ್ಯೇಕ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳು ತಮ್ಮದೇ ಟ್ರೇಡ್‌ ಲೈಸೆನ್ಸ್‌ ಪಡೆಯಬೇಕು” ಎಂದು ಸ್ಪಷ್ಟಪಡಿಸಿದೆ.

ಅಲ್ಲದೆ, “ಮಾಲ್‌, ವಾಣಿಜ್ಯ ಸಂಕೀರ್ಣ ಅಥವಾ ವ್ಯವಹಾರ ಸಂಸ್ಥೆಗಳ ಮಾಲೀಕರು ಬಿಬಿಎಂಪಿ ಕಾಯಿದೆಯ ಸಂಬಂಧಿತ ನಿಯಮಗಳ ಪ್ರಕಾರ ವಾರ್ಷಿಕ ಆಸ್ತಿ ತೆರಿಗೆ ಪಾವತಿಸಬೇಕು” ಎಂದು ಪೀಠ ತಿಳಿಸಿದೆ.

“ಜನರೇಟರ್‌ ಸೆಟ್‌ನ ಕಾರ್ಯಕ್ಷಮತೆ ಅಥವಾ ಸುರಕ್ಷತೆಯನ್ನು ಬಿಬಿಎಂಪಿ ತಪಾಸಣೆ ಮಾಡುತ್ತಿಲ್ಲ. ನಿಗದಿತ ಶುಲ್ಕ ಸಂಗ್ರಹಿಸಿ ಪರವಾನಗಿ ನೀಡುವ ಕಾಗದಪತ್ರದ ಕೆಲಸವನ್ನು ಹೊರತುಪಡಿಸಿ ಬಿಬಿಎಂಪಿ ಯಾವುದೇ ಸೇವೆ ಒದಗಿಸುತ್ತಿಲ್ಲ. ಅಗತ್ಯವಾದ ಎಲ್ಲ ತಪಾಸಣೆ ಮತ್ತು ಪ್ರಮಾಣೀಕರಣವನ್ನು ವಿದ್ಯುತ್‌ ನಿರೀಕ್ಷಕರು ಹಾಗೂ ಕೆಎಸ್‌ಪಿಸಿಬಿ ನಡೆಸುತ್ತಿವೆ. ಹೀಗಾಗಿ ಮಾಲ್‌ ಮಾಲೀಕರೇ ಹೊಂದಿರುವ ಜನರೇಟರ್‌ಗೆ ಪ್ರತಿ ವರ್ಷ ಗಣನೀಯ ಶುಲ್ಕ ಪಾವತಿಸಿ ಟ್ರೇಡ್‌ ಲೈಸೆನ್ಸ್‌ ಪಡೆಯಬೇಕು ಮತ್ತು ನವೀಕರಿಸಬೇಕು ಎಂಬ ಬಿಬಿಎಂಪಿಯ ಒತ್ತಾಯವನ್ನು ಒಪ್ಪಲಾಗದು” ಎಂದು ಪೀಠ ಆದೇಶಿಸಿದೆ.

ಮಾಲ್‌ ಮಾಲೀಕರಲ್ಲದೆ, ಬೇರೊಬ್ಬ ವ್ಯಕ್ತಿ ಅಥವಾ ಸಂಸ್ಥೆ ಡೀಸೆಲ್‌ ಜನರೇಟರ್‌ ಅಳವಡಿಸಿ ನಿರ್ವಹಿಸುತ್ತಿದ್ದರೆ ಈ ತೀರ್ಪು ಅನ್ವಯಿಸುವುದಿಲ್ಲಎಂದು ಸ್ಪಷ್ಟಪಡಿಸಿರುವ ನ್ಯಾಯಾಲಯವು ಅಂತಹ ಸಂದರ್ಭದಲ್ಲಿ ಜನರೇಟರ್‌ ನಿರ್ವಹಣೆಯು ಪ್ರತ್ಯೇಕ ವ್ಯಾಪಾರ ಅಥವಾ ವ್ಯವಹಾರವಾಗಲಿದ್ದು, ಅದಕ್ಕೆ ಟ್ರೇಡ್‌ ಲೈಸೆನ್ಸ್‌ ಪಡೆಯಬೇಕಾಗುತ್ತದೆ ಎಂದು ಹೇಳಿದೆ.

ಕಂಪನಿಯ ಮೇಲ್ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯವು ಈ ಹಿಂದೆ ಪಾವತಿಸಿರುವ ಪರವಾನಗಿ ಶುಲ್ಕ ಮರುಪಾವತಿಸಬೇಕು ಎಂಬ ಮನವಿಯನ್ನು ತಿರಸ್ಕರಿಸಿದೆ.

ಪ್ರಕರಣದ ಹಿನ್ನೆಲೆ: ಬೆಂಗಳೂರಿನ ದೇವಸಂದ್ರ ಎರಡನೇ ಹಂತದ ಕೈಗಾರಿಕಾ ಪ್ರದೇಶದಲ್ಲಿರುವ ಫೀನಿಕ್ಸ್‌ ಮಾರ್ಕೆಟ್‌ ಸಿಟಿ ಮಾಲ್‌ನಲ್ಲಿ ಕಂಪನಿಯು ಡೀಸೆಲ್‌ ಜನರೇಟರ್‌ ಅಳವಡಿಸಿತ್ತು. ಅದಕ್ಕಾಗಿ 2011ರಲ್ಲಿ ಬಿಬಿಎಂಪಿಗೆ 10 ಲಕ್ಷ ರೂಪಾಯಿ ಪಾವತಿಸಿ ಪರವಾನಗಿ ಪಡೆದಿತ್ತು. 2013ರಲ್ಲಿ ಸ್ಪಷ್ಟನೆ ಕೋರುತ್ತಲೇ ನವೀಕರಣ ಶುಲ್ಕ ಮತ್ತು ದಂಡದ ರೂಪದಲ್ಲಿ12.5 ಲಕ್ಷ ರೂಪಾಯಿ ಪಾವತಿಸಿತ್ತು. 2015ರಲ್ಲಿ ಬಿಬಿಎಂಪಿ ಮತ್ತೊಮ್ಮೆ ಪರವಾನಗಿ ನವೀಕರಣ ಶುಲ್ಕ ಪಾವತಿಸುವಂತೆ ಬೇಡಿಕೆ ಇಟ್ಟಿತ್ತು.

ಅದನ್ನು ಪ್ರಶ್ನಿಸಿ ಮಾಲ್‌ ಅಭಿವೃದ್ಧಿ ಕಂಪನಿ ಹೈಕೋರ್ಟ್‌ ಮೆಟ್ಟಿಲೇರಿತ್ತು. ಏಕಸದಸ್ಯ ಪೀಠವು 2022ರಲ್ಲಿ ಕರ್ನಾಟಕ ಮಹಾನಗರ ಪಾಲಿಕೆ ಕಾಯಿದೆಯ ಸೆಕ್ಷ ನ್‌ 354ರ ಅಡಿ ಬಿಬಿಎಂಪಿ ಶುಲ್ಕ ವಿಧಿಸಬಹುದು ಎಂಬ ಅಭಿಪ್ರಾಯಪಟ್ಟು ಕಂಪನಿಯ ಅರ್ಜಿ ವಜಾಗೊಳಿಸಿತ್ತು. ಆ ಆದೇಶವನ್ನು ಪ್ರಶ್ನಿಸಿ ಕಂಪನಿ ಮೇಲ್ಮನವಿ ಸಲ್ಲಿಸಿತ್ತು.

Kannada Bar & Bench
kannada.barandbench.com