ಪ್ರಸಕ್ತ ವರ್ಷದ ಪ್ರವೇಶಾತಿಗಾಗಿ ತನ್ನದೇ ಆದ ಆನ್‌ಲೈನ್ ಪ್ರವೇಶ ಪರೀಕ್ಷೆ ನಡೆಸುವ ಉದ್ದೇಶದ ಹಿಂದಿನ ಕಾರಣಗಳನ್ನೊಳಗೊಂಡ ಅಫಿಡವಿಟ್ ಅನ್ನು ಬೆಂಗಳೂರಿನ ಭಾರತೀಯ ವಿಶ್ವವಿದ್ಯಾಲಯದ ರಾಷ್ಟ್ರೀಯ ಕಾನೂನು ಶಾಲೆಯು (ಎನ್ಎಲ್ಎಸ್ಐಯು) ಹೈಕೋರ್ಟ್‌ಗೆ ಸಲ್ಲಿಸಿದೆ.
ಈಚೆಗೆ ವಿಶ್ವವಿದ್ಯಾಲಯದಲ್ಲಿ ಜಾರಿಗೊಳಿಸಲಾಗಿರುವ ಸ್ಥಳೀಯರಿಗೆ ಶೇ.25 ಮೀಸಲಾತಿ ಕಲ್ಪಿಸುವ ನಿರ್ಧಾರ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ಆದೇಶವನ್ನು ಹೈಕೋರ್ಟ್ ಕಾಯ್ದಿರಿಸುವ ಸಂದರ್ಭದಲ್ಲಿ ಎನ್ಎಲ್ಎಸ್‌ಐಯು ಅಫಿಡವಿಟ್ ಸಲ್ಲಿಸಿದೆ.
ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆ (ಸಿಎಲ್ಎಟಿ) ನಡೆಸಲು ನಿರಂತರವಾಗಿ ಎದುರಾಗುತ್ತಿರುವ ಅಡೆತಡೆ ಮತ್ತು ಪರೀಕ್ಷೆ ಮುಂದೂಡಿಕೆಯ ಹಿನ್ನೆಲೆಯಲ್ಲಿ ರಾಷ್ಟ್ರೀಯ ಕಾನೂನು ಪ್ರವೃತ್ತಿ ಪರೀಕ್ಷೆ-2020 (ಎನ್ಎಲ್ಎಟಿ) ನಡೆಸಲು ನಿರ್ಧರಿಸಲಾಗಿದೆ ಎಂದು ಅಫಿಡವಿಟ್‌ನಲ್ಲಿ ವಿವರಿಸಲಾಗಿದೆ.
“... ಸಿಎಲ್‌ಎಟಿ-2020 ನಡೆಸಲು ಸಾಕಷ್ಟು ಅಡೆತಡೆಯಾಗುತ್ತಿದ್ದು, ಕೋವಿಡ್ ಹಿನ್ನೆಲೆಯಲ್ಲಿ ಹಲವು ಬಾರಿ ಪರೀಕ್ಷೆ ಮುಂದೂಡಲಾಗುತ್ತಿರುವುದು ಹಾಗೂ ಟ್ರೈಮೆಸ್ಟರ್ ವ್ಯವಸ್ಥೆ ಅಳವಡಿಸಿಕೊಂಡಿರುವುದರಿಂದ ಎನ್ಎಲ್ಎಸ್ಐಯುಗೆ ವಿಶೇಷ ಸವಾಲುಗಳಿವೆ (ಸಿಎಲ್ಎಟಿಯಲ್ಲಿ ಹಲವು ವಿಶ್ವವಿದ್ಯಾಲಯಗಳು ಭಾಗವಹಿಸುತ್ತವೆ). ಟ್ರೈಮೆಸ್ಟರ್ ವ್ಯವಸ್ಥೆಯ ಪ್ರಕಾರ ಎನ್ಎಲ್ಎಸ್‌ಐಯು ಶೈಕ್ಷಣಿಕ ವರ್ಷವು 90 ದಿನಗಳ ಮೂರು ಅವಧಿಯನ್ನು ಒಳಗೊಂಡಿರುತ್ತವೆ. ಪ್ರತಿ ಅವಧಿಯಲ್ಲಿ ಪ್ರತಿ ಕೋರ್ಸ್‌ಗೆ 60 ಗಂಟೆಗಳ ತರಗತಿ ಬೋಧನೆ ಮತ್ತು ಪರೀಕ್ಷೆ, ಮೌಲ್ಯಮಾಪನ ವ್ಯವಸ್ಥೆ ಇರುತ್ತದೆ.”
ಸೆಪ್ಟೆಂಬರ್ 28ಕ್ಕೆ ನಿಗದಿಯಾಗಿರುವ ಸಿಎಲ್ಎಟಿ ಹಿಂದೆ ನಾಲ್ಕು ಬಾರಿ ಮುಂದೂಲ್ಪಟ್ಟಿತ್ತು. ಒಂದೊಮ್ಮೆ ಎನ್‌ಎಲ್‌ಎಸ್‌ಐಯು 2020ರ ಸೆಪ್ಟೆಂಬರ್ ಅಂತ್ಯದೊಳಗೆ ಪ್ರವೇಶಾತಿಗಳನ್ನು ಕಲ್ಪಿಸದೆ ಹೋದರೆ, ಅದು ಪ್ರವೇಶಾತಿ ರಹಿತ ‘ಶೂನ್ಯ ವರ್ಷ’ವಾಗಿ ಪರಿಗಣಿತವಾಗುತ್ತದೆ ಎಂದು ಅಫಿಡವಿಟ್‌ನಲ್ಲಿ ಉಲ್ಲೇಖಿಸಲಾಗಿದೆ. ಇದನ್ನು ಹೊರತುಪಡಿಸಿ ಶೈಕ್ಷಣಿಕ ವರ್ಷದಲ್ಲಿ ಯಾವುದೇ ಬದಲಾವಣೆಯಾದರೂ ಎನ್ಎಲ್ಎಸ್ಐಯುನ ಹಿಂದಿನ ವರ್ಷದ ಶೈಕ್ಷಣಿಕ ಕಾರ್ಯಕ್ರಮದಲ್ಲಿ ವ್ಯಾಪಕ ಬದಲಾವಣೆಯಾಗುತ್ತದೆ ಎಂದು ಅಫಿಡವಿಟ್‌ನಲ್ಲಿ ವಿವರಿಸಲಾಗಿದೆ.
ಇದರ ಜೊತೆಗೆ 2020-21 ಶೈಕ್ಷಣಿಕ ಪ್ರವೇಶಾತಿಗೆ ವಿಶ್ವವಿದ್ಯಾಲಯವು ಸಿಎಲ್ಎಟಿ-2020 ಅಂಕಗಳನ್ನು ಪರಿಗಣಿಸುವುದಿಲ್ಲ ಎಂದೂ ಹೇಳಿದೆ.
ಆನ್‌ಲೈನ್ ಅರ್ಜಿ ಪೋರ್ಟಲ್ ಸೆಪ್ಟೆಂಬರ್ 3ರಿಂದ ಆರಂಭಗೊಂಡಿದ್ದು ಸೆಪ್ಟೆಂಬರ್ 10, 2020ರ ಮಧ್ಯರಾತ್ರಿಗೆ ಮುಕ್ತಾಯವಾಗಲಿದೆ. ಎಲ್ಲ ಅರ್ಜಿಗಳನ್ನೂ ಆನ್‌ಲೈನ್ ಮೂಲಕವೇ ಈ ಲಿಂಕ್‌ನಲ್ಲಿ ಸಲ್ಲಿಸಬೇಕು: https://admissions.nls.ac.in/. ಪ್ರವೇಶ ಪರೀಕ್ಷೆಯನ್ನು ಸೆಪ್ಟೆಂಬರ್ 12, 2020ರಂದು ನಿರ್ಧರಿಸಲಾಗಿದ್ದು, ಮೀಸಲಾತಿ ಅಧಿಸೂಚನೆ ಸೇರಿದಂತೆ ಹೊಸ ಸೀಟು ಮ್ಯಾಟ್ರಿಕ್ಸ್ ಅನ್ನೂ ಅಫಿಡವಿಟ್ ನಲ್ಲಿ ಅಡಕಗೊಳಿಸಲಾಗಿದೆ.