ವಿವರಗಳನ್ನು ಕ್ರೋಢೀಕರಿಸುವಲ್ಲಿ ಸಮಸ್ಯೆಯಾಗುತ್ತಿದೆ ಎನ್ನುವುದು ಮಾಹಿತಿ ಹಕ್ಕು ಕಾಯಿದೆಯಡಿ (ಆರ್‌ಟಿಐ ಕಾಯಿದೆ) ಮಾಹಿತಿ ನಿರಾಕರಿಸಲು ಆಧಾರವಾಗುವುದಿಲ್ಲ ಎಂದು ದೆಹಲಿ ಹೈಕೋರ್ಟ್ ಈಚೆಗೆ ಎಚ್ಚರಿಕೆ ನೀಡಿದೆ [ದೆಹಲಿ ಸರ್ಕಾರ ಮತ್ತು ಪ್ರಭ್‌ಜೋತ್ ಸಿಂಗ್ ಧಿಲ್ಲೋನ್ ಇನ್ನಿತರರ ನಡುವಣ ಪ್ರಕರಣ].
ಕೋರಿದ ಮಾಹಿತಿ ಒಂದೆಡೆ ಸಿಗುತ್ತಿಲ್ಲ ಮತ್ತು ಅದನ್ನು ಸಂಗ್ರಹಿಸಲು ಬಹಳ ಸಮಯ ಹಿಡಿಯುತ್ತದೆ. ಹೀಗಾಗಿ ಆರ್‌ಟಿಐ ಕಾಯಿದೆಯಡಿ ಮಾಹಿತಿ ಒದಗಿಸಲಾಗದು ಎಂಬುದಾಗಿ ಸಾರ್ವಜನಿಕ ಅಧಿಕಾರಿ ನಿಲುವು ತಳೆಯುವಂತಿಲ್ಲ. ಮಾಹಿತಿಯನ್ನು ಕ್ರೋಢೀಕರಿಸಿ ಅದನ್ನು ನೀಡಲು ಸಂಬಂಧಪಟ್ಟ ಇಲಾಖೆ ಯತ್ನಿಸಬೇಕು ಎಂದು ನ್ಯಾಯಮೂರ್ತಿ ಸುಬ್ರಮೊಣಿಯಂ ಪ್ರಸಾದ್ ಹೇಳಿದರು.
ಇಲಾಖೆಗಳ ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವುದು ಕಾಯಿದೆಯ ಉದ್ದೇಶವಾಗಿದ್ದು ಬೃಹತ್ ಮಾಹಿತಿಯನ್ನು ಶೋಧಿಸಬೇಕಾದ ಹಿನ್ನೆಲೆಯಲ್ಲಿ ಮಾಹಿತಿ ನೀಡಲಾಗುತ್ತಿಲ್ಲ ಎಂಬ ಕಾರಣಕ್ಕೆ ಸರ್ಕಾರ ಕಾಯಿದೆಯನ್ನು ತಡೆಹಿಡಿಯುವಂತಿಲ್ಲ ಎಂದು ನ್ಯಾಯಮೂರ್ತಿ ಪ್ರಸಾದ್ ಹೇಳಿದರು.
ಖಾಸಗಿಯಾಗಿ ಟ್ಯೂಷನ್ ನಡೆಸುತ್ತಿದ್ದ ಶಿಕ್ಷಕರ ವಿರುದ್ಧ ಶಿಕ್ಷಣ ಇಲಾಖೆ ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ಕೋರಿ ಅರ್ಜಿ ಸಲ್ಲಿಸಿದ್ದ ಪ್ರಭ್‌ಜೋತ್ ಸಿಂಗ್ ಧಿಲ್ಲೋನ್ ಅವರಿಗೆ ಮಾಹಿತಿ ನೀಡುವಂತೆ ಕೇಂದ್ರ ಮಾಹಿತಿ ಆಯೋಗ (ಸಿಐಸಿ) ಈ ಹಿಂದೆ ಸೂಚಿಸಿತ್ತು. ಇದನ್ನು ಪ್ರಶ್ನಿಸಿ ದೆಹಲಿ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಅನುದಾನರಹಿತ ಶಾಲೆಗಳ ಮೇಲೆ ತನಗೆ ಯಾವುದೇ ನಿಯಂತ್ರಣವಿಲ್ಲ. ಆದ್ದರಿಂದ , ಖಾಸಗಿ ಟ್ಯೂಷನ್ ಮೂಲಕ ಬೋಧನೆ ಮಾಡುತ್ತಿರುವ ಶಿಕ್ಷಕರ ವಿರುದ್ಧ ಖಾಸಗಿ ಅನುದಾನರಹಿತ ಶಾಲೆಗಳು ತೆಗೆದುಕೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ಸರ್ಕಾರ ಸಮಜಾಯಿಷಿ ನೀಡಿತ್ತು.
ಅಕ್ರಮ ಪ್ರಕರಣಗಳ ಪಟ್ಟಿಯನ್ನು ನಿರ್ವಹಿಸಲು ಶಿಕ್ಷಣ ಇಲಾಖೆಯ ವಿಜಿಲೆನ್ಸ್ ವಿಭಾಗದಿಂದ ಯಾವುದೇ ನಿರ್ದೇಶನ ದೊರೆತಿಲ್ಲ. ಖಾಸಗಿ ಅನುದಾನರಹಿತ ಶಾಲೆಗಳು ಆರ್‌ಟಿಐ ಕಾಯಿದೆ ವ್ಯಾಪ್ತಿಗೆ ಬರುವುದಿಲ್ಲ ಎಂದು ಕೂಡ ಸರ್ಕಾರ ಹೇಳಿತ್ತು.
ಸರ್ಕಾರದ ವಾದವನ್ನು ಪೀಠ ಒಪ್ಪಲಿಲ್ಲ. ಇಲಾಖೆಯಲ್ಲಿ ಮಾಹಿತಿ ಒಂದೆಡೆ ಲಭ್ಯವಿರದಿದ್ದರೂ ಅದನ್ನು ಕ್ರೋಢೀಕರಿಸಬಹುದಾದ್ದರಿಂದ ಖಾಸಗಿ ಟ್ಯೂಷನ್ ನೀಡುವ ಶಿಕ್ಷಕರ ವಿರುದ್ಧ ಸರ್ಕಾರಿ ಮತ್ತು ಅನುದಾನಿತ ಶಾಲೆಗಳು ತೆಗೆದುಕೊಳ್ಳುವ ಶಿಸ್ತು ಕ್ರಮಗಳನ್ನು ಆರ್‌ಟಿಐ ಅರ್ಜಿದಾರರಿಗೆ ಲಭ್ಯವಾಗುವಂತೆ ಮಾಡಬಹುದು ಎಂದಿತು. ಅಲ್ಲದೆ, ಖಾಸಗಿ ಅನುದಾನರಹಿತ ಶಾಲೆಗಳಲ್ಲೂ ಸಹ ಶಿಕ್ಷಕರ ಮೇಲೆ ಕೈಗೊಳ್ಳಲಾದ ಗಂಭೀರ ಶಿಸ್ತುಕ್ರಮಗಳ ಕುರಿತಾದ ಮಾಹಿತಿ ದಾಖಲೆಗಳಲ್ಲಿ ಇರಲಿದ್ದು, ಅದನ್ನು ಪರಿಶೀಲಿಸಿ ಒದಗಿಸಬಹುದಾಗಿದೆ. ಹೀಗಾಗಿ ದೆಹಲಿ ಸರ್ಕಾರದ ಮನವಿಯನ್ನು ತಿರಸ್ಕರಿಸಿದ ನ್ಯಾಯಾಲಯವು ಅರ್ಜಿದಾರರು ಕೋರಿದ ಮಾಹಿತಿಯನ್ನು ಒದಗಿಸುವಂತೆ ಸೂಚಿಸಿತು.