ಡಿಜಿಟಲ್ ಗೋಲ್ಡ್‌ ಹೂಡಿಕೆ: ಜಾರ್ ಗೋಲ್ಡ್‌ ರಿಟೈಲ್‌, ಜಾರ್ಫಿನ್‌ ರಿಟೈಲ್‌ ವಿರುದ್ಧದ ಪ್ರಕರಣ ರದ್ದತಿಗೆ ನಕಾರ

“ಡಿಜಿಟಲ್ ಚಿನ್ನವು ವಾಣಿಜ್ಯ ಪರಿಕಲ್ಪನೆಯಾಗಿ ವಿಕಸನ ಹೊಂದಿದೆ ಎಂಬುದು ನಿರ್ವಿವಾದ. ಆದರೆ, ದಾಖಲೆಯಲ್ಲಿರುವ ಅಂಶಗಳು ಗಂಭೀರ ಆರೋಪಗಳನ್ನು ಬಹಿರಂಗಪಡಿಸುತ್ತವೆ” ಎಂದಿರುವ ನ್ಯಾಯಾಲಯ.
Karnataka High Court
Karnataka High Court
Published on

ಕಾನೂನು ಬಾಹಿರವಾಗಿ ಡಿಜಿಟಲ್‌ ಗೋಲ್ಡ್‌ ಹೂಡಿಕೆಗಳನ್ನು ಸ್ವೀಕರಿಸಿ ಅಂತಹ ಹೂಡಿಕೆಗಳನ್ನು ನೇರವಾಗಿ ಚಿನ್ನದ ರೂಪದಲ್ಲಿ ಉಳಿಸಿಕೊಂಡು ಅನಿಯಂತ್ರಿತ ಠೇವಣಿ ಯೋಜನೆಗಳ ನಿಷೇಧ ಕಾಯಿದೆ ಅಡಿಯ ಆರೋಪ ಎದುರಿಸುತ್ತಿರುವ ಜಾರ್ ಡಿಜಿಟಲ್‌ ಪ್ರೈವೇಟ್‌ ಲಿಮಿಟೆಡ್‌ ಮತ್ತು ಜಾರ್ಫಿನ್‌ ರಿಟೈಲ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿಗಳ ವಿರುದ್ಧದ ದೂರನ್ನು ವಜಾಗೊಳಿಸಲು ಕರ್ನಾಟಕ ಹೈಕೋರ್ಟ್‌ ಬುಧವಾರ ನಿರಾಕರಿಸಿದೆ.

ಜಾರ್ಫಿನ್‌ ರಿಟೈಲ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿ ನಿರ್ದೇಶಕರಾದ ನಿಶ್ಚಯ ಬಾಬು ಅರಕಲಗೂಡು ಮತ್ತು ಜಾರ್ ಗೋಲ್ಡ್‌ ರಿಟೈಲ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿ ಪ್ರತಿನಿಧಿ ಅವಿನಾಶ್‌ ವಸಂತ ದೇಶಪಾಂಡೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ತಿರಸ್ಕರಿಸಿದೆ.

“ಗ್ರಾಹಕರು ಖರೀದಿ ಪೂರ್ಣಗೊಳಿಸಿದ ನಂತರ ಚಿನ್ನದ ಗಟ್ಟಿಯ ಯಾವುದೇ ಮಾಲೀಕತ್ವ ಅಥವಾ ಭೌತಿಕ ಸ್ವಾಧೀನವನ್ನು ಉಳಿಸಿಕೊಳ್ಳುವುದಿಲ್ಲ” ಎಂಬ ಅರ್ಜಿದಾರರ ಪರ ವಕೀಲರ ವಾದವನ್ನು ಪೀಠ ತಿರಸ್ಕರಿಸಿದೆ.

“ಡಿಜಿಟಲ್ ಚಿನ್ನವು ವಾಣಿಜ್ಯ ಪರಿಕಲ್ಪನೆಯಾಗಿ ವಿಕಸನ ಹೊಂದಿದೆ ಎಂಬುದು ನಿರ್ವಿವಾದ. ಆದರೆ, ದಾಖಲೆಯಲ್ಲಿರುವ ಅಂಶಗಳು ಗಂಭೀರ ಆರೋಪಗಳನ್ನು ಬಹಿರಂಗಪಡಿಸುತ್ತವೆ. ಅಂತೆಯೇ, ಅರ್ಜಿದಾರರಿಗೆ ಈ ಹಂತದಲ್ಲಿ ರಕ್ಷಣೆ ಒದಗಿಸಿದರೆ ಅಪರಾಧ ಪತ್ತೆಗೆ ಅದರ ಆರಂಭಿಕ ಹಂತದಲ್ಲೇ ಅಡ್ಡಿ ಉಂಟು ಮಾಡಿದಂತಾಗುತ್ತದೆ” ಎಂದು ಸ್ಪಷ್ಟಪಡಿಸಿದೆ.

“ಪೊಲೀಸರು ತನಿಖೆ ನಡೆಸುತ್ತಿರುವ ಸಂದರ್ಭದಲ್ಲಿ ದೂರು ಅಥವಾ ಎಫ್‌ಐಆರ್ ತನಿಖೆಗೆ ಅರ್ಹವಲ್ಲ ಅಥವಾ ಅದು ಎಷ್ಟು ಸರಿ ಎಂಬ ಅಸ್ಪಷ್ಟ ಸಂಗತಿಗಳ ಆಧಾರದ ಮೇಲೆ ಯಾವುದಾದರೂ ತೀರ್ಮಾನ ತೆಗೆದುಕೊಳ್ಳುವುದು ಅಕಾಲಿಕ ಎನಿಸುತ್ತದೆ. ಅಷ್ಟೇ ಅಲ್ಲ ಕಾನೂನು ಪ್ರಕ್ರಿಯೆಯ ದುರುಪಯೋಗವಾಗುತ್ತದೆ” ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ.

ಪ್ರಾಸಿಕ್ಯೂಷನ್‌ ಪರ ರಾಜ್ಯ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ ಎನ್‌ ಜಗದೀಶ್‌ “ಅನಿಯಂತ್ರಿತ ಠೇವಣಿಗಳನ್ನು ಮೊಳಕೆಯಲ್ಲೇ ಚಿವುಟಿ ಹಾಕಬೇಕು. ಇದು ಸಾವಿರಾರು ಕೋಟಿ ರೂಪಾಯಿಗಳ ಹಗರಣಕ್ಕೆ ನಾಂದಿಯಾಗಬಹುದಾದ ಪ್ರಕರಣ. ಸಾರ್ವಜನಿಕರು ಹೂಡಿಕೆ ಮಾಡಿದ ಹಣವನ್ನು ಅರ್ಜಿದಾರರು ಲೂಟಿ ಮಾಡಲು ಬಿಡಬಾರದು. ಆ ಕಾರಣಕ್ಕಾಗಿ  ತನಿಖೆಯನ್ನು ಮುಂದುವರಿಸಲು ಅನುಮತಿ ನೀಡಬೇಕು” ಎಂಬ ಮನವಿಯನ್ನು ಪೀಠ ಪುರಸ್ಕರಿಸಿದೆ.

ಕೋರಮಂಗಲ ಠಾಣೆ ಪೊಲೀಸರು ಅನಿಯಂತ್ರಿತ ಠೇವಣಿ ಯೋಜನೆಗಳ ನಿಷೇಧ ಕಾಯಿದೆ ಅಡಿಯಲ್ಲಿ ದಾಖಲಿಸಿಕೊಂಡಿರುವ ಸ್ವಯಂಪ್ರೇರಿತ ಎಫ್‌ಐಆರ್‌ ಮತ್ತು ಇದಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರದ ಪ್ರಧಾನ ಸತ್ರ ನ್ಯಾಯಾಲಯದಲ್ಲಿನ ನ್ಯಾಯಿಕ ವಿಚಾರಣೆ ರದ್ದುಗೊಳಿಸಬೇಕು ಎಂದು ಅರ್ಜಿದಾರರು ಕೋರಿದ್ದರು.

3.3 ಕೋಟಿ ಜನರ ಹೂಡಿಕೆ

ಕಂಪನಿ 2021ರಲ್ಲಿ ಶೂನ್ಯ ವಹಿವಾಟು ಮೂಲಕ ಪ್ರಾರಂಭವಾಗಿ ಇಂದು ₹4 ಸಾವಿರ ಕೋಟಿಗಳ ವಹಿವಾಟು ಹೊಂದಿದೆ. ನಿರ್ದೇಶಕರು ನೀಡಿರುವ ಮಾಹಿತಿಯಂತೆ 3.3 ಕೋಟಿ ಜನರು ತಮ್ಮ ಮೊಬೈಲ್ ಅಪ್ಲಿಕೇಶನ್‌ ಮೂಲಕ ಇ–ಖಾತೆಗಳನ್ನು ತೆರದು ವ್ಯವಹಾರ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಂಪನಿ ಮತ್ತು ಅದರ ನಿರ್ದೇಶಕರು ಸುಮಾರು ₹100 ಕೋಟಿಗೂ ಹೆಚ್ಚಿನ ಮೊತ್ತವನ್ನು ಸಾರ್ವಜನಿಕರಿಂದ ಸ್ವೀಕರಿಸಿ ಅಪರಾಧ ಎಸಗಿರುತ್ತಾರೆ. ಈ ಬಗ್ಗೆ ಅವರು ತಮ್ಮ ಲೆಕ್ಕಪತ್ರಗಳನ್ನು ಮತ್ತು ಮಾಹಿತಿಯನ್ನು ಒದಗಿಸಲು ಹಿಂದೇಟು ಹಾಕಿರುತ್ತಾರೆ ಎಂದು ಪೊಲೀಸರು ದೂರಿನಲ್ಲಿ ತಿಳಿಸಿದ್ದಾರೆ.

ಅನಿಯಂತ್ರಿತ ವ್ಯವಹಾರ ನಡೆಸುತ್ತಿದ್ದೇವೆ ಎಂಬುದು ಗೊತ್ತಿದ್ದರೂ ಸಾರ್ವಜನಿಕರಿಗೆ ಈ ನಿಜ ಸಂಗತಿಯನ್ನು ತಿಳಿಸದೇ ಡಿಜಿಟಲ್‌ ಗೋಲ್ಡ್‌, ಇ–ಗೋಲ್ಡ್‌ ಪ್ರಾಡಕ್ಟ್ಸ್‌ ಹೆಸರಿನಲ್ಲಿ ಡಿಜಿಟಲ್‌ ಪ್ಲಾಟ್‌ಫಾರ್ಮ್‌ ಮೂಲಕ ಇ–ಖಾತೆಯನ್ನು ತೆರೆದು ಹಣ ಹೂಡಿಕೆಗೆ ಉತ್ತೇಜಿಸಲಾಗುತ್ತಿದೆ. ಈ ಮೂಲಕ ಚಿನ್ನ ಖರೀದಿಸಿ ಠೇವಣಿ ಇರಿಸಿಕೊಂಡು ತಮಗೆ ಬೇಕಾದಾಗ ಮಾರಿದ ಹಣವನ್ನು ಅವರ ಖಾತೆಯಿಂದ ಸಂಸ್ಥೆ ಮೂಲಕ ಪಡೆಯಬಹುದು ಎಂದು ನಂಬಿಸಿ ಹಣವನ್ನು ಮರಳಿಸದೇ ಮೋಸ ಮಾಡುವ ಪ್ರಯತ್ನದಲ್ಲಿರುವುದು ಕಂಡು ಬರುತ್ತಿದೆ. ಇದು, ಅನಿಯಂತ್ರಿತ ಠೇವಣಿ ಯೋಜನೆಗಳ ನಿಷೇಧ ಕಾಯಿದೆ-2019ರ ಸೆಕ್ಷನ್‌ 21(1) ಮತ್ತು 21(2) ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧ ಎಂದು ವಿವರಿಸಲಾಗಿದೆ.

ಸ್ವಯಂ ಪ್ರೇರಿತ ದೂರಿನ ಮುಖ್ಯಾಂಶಗಳು

  • ಕಂಪನಿ ಮತ್ತು ಅದರ ನಿರ್ದೇಶಕರು ಡಿಜಿಟಲ್‌ ಅಪ್ಲಿಕೇಶನ್‌ ಮೂಲಕ ಸಾರ್ವಜನಿಕರಿಗೆ ಚಿನ್ನದಲ್ಲಿ ಹೂಡಿಕೆ ಮಾಡಲು ಅವಕಾಶ ಕಲ್ಪಿಸಿದ್ದು, ಈ ವ್ಯವಹಾರಗಳ ಕುರಿತಂತೆ ಸೆಬಿ (ಸೆಕ್ಯುರಿಟೀಸ್‌ ಅಂಡ್‌ ಎಕ್ಸ್‌ಚೇಂಜ್‌ ಬೋರ್ಡ್ ಆಫ್‌ ಇಂಡಿಯಾ) ಅಥವಾ ಸಂಬಂಧಿಸಿದ ನಿಯಂತ್ರಣ ಪ್ರಾಧಿಕಾರದಿಂದ ಅನುಮತಿ ಪಡೆಯದೇ, ನೋಂದಾಯಿಸಿಕೊಳ್ಳದೆ ತನ್ನ ವ್ಯವಹಾರ ನಡೆಸುತ್ತಿದ್ದಾರೆ.

  • ಸಾರ್ವಜನಿಕರಿಂದ ₹10 ಗಳಿಂದ ₹1 ಲಕ್ಷದ ವರೆಗೆ ಡಿಜಿಟಲ್‌ ಗೋಲ್ಡ್‌ ಹೆಸರಿನಲ್ಲಿ ಹೂಡಿಕೆಗಳನ್ನು ಸ್ವೀಕರಿಸುತ್ತಿದ್ದಾರೆ. ಅಸಲಿ ಚಿನ್ನದ ಬದಲಿಗೆ ಡಿಜಿಟಲ್‌ ರೂಪದಲ್ಲಿನ ಚಿನ್ನವು, ಗ್ರಾಹಕರ ಇ–ಖಾತೆಗಳಲ್ಲಿ ಇದೆ ಎಂದು ತೋರಿಸಿ ಅವರಿಗೆ ಬೇಕಾದಾಗ ಅದನ್ನು ಹಿಂಪಡೆಯಲು ಅವಕಾಶ ಮಾಡಿಕೊಡುತ್ತೇವೆ ಎಂದು ಹೇಳುವ ಅನಿಯಂತ್ರಿತ ಯೋಜನೆಯನ್ನು ಸಾರ್ವಜನಿಕಗೊಳಿಸಿದ್ದಾರೆ.

  • ಈ ಅನಿಯಂತ್ರಿತ ಯೋಜನೆಯ ಸೆಳೆತಕ್ಕೆ ಸಿಲುಕಿರುವ ಸಾರ್ವಜನಿಕರು ತಮ್ಮ ಇ–ಖಾತೆಗಳನ್ನು ಸದರಿ ಸಂಸ್ಥೆಯಲ್ಲಿ ತೆರೆದು ಆ ಮೂಲಕ ಹಣವನ್ನು ಹೂಡಿಕೆ ಮಾಡಿ ಡಿಜಿಟಲ್‌ ರೂಪದಲ್ಲಿ ಚಿನ್ನದ ಠೇವಣಿಗಳನ್ನು ಹೊಂದಿದ್ದಾರೆ.

  • ತಮ್ಮ ಜೊತೆಗೆ ಇತರರನ್ನೂ ಸೆಳೆದಲ್ಲಿ ಅಂತಹ ಹೂಡಿಕೆದಾರರಿಗೆ ಶೇ 30ರಿಂದ 40ರಷ್ಟು ರೆಫರಲ್‌ ಬೋನಸ್‌ (ನಗದು ಅಥವಾ ಬಹುಮಾನ ನೀಡಿಕೆ) ಕೊಡುವುದಾಗಿ ಹೇಳಿ ನಂಬಿಸಿ ಹೂಡಿಕೆಗಳನ್ನು ಮತ್ತು ಠೇವಣಿಗಳನ್ನು ಸ್ವೀಕರಿಸಲಾಗುತ್ತಿದೆ.

  • ಡಿಜಿಟಲ್ ಚಿನ್ನ ಅಥವಾ ಆನ್‌ಲೈನ್‌ನಲ್ಲಿ ಚಿನ್ನ ಮಾರಾಟದ ವ್ಯವಹಾರವು 2013ರಲ್ಲಿ ಭಾರತ ಸರ್ಕಾರದ ಕಂಪನಿಯಾದ ಮೆಟಲ್ಸ್ ಅಂಡ್ ಮಿನರಲ್ಸ್ ಟ್ರೇಡಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಗ್ರಾಹಕರಿಗೆ ಆನ್‌ಲೈನ್‌ನಲ್ಲಿ ಚಿನ್ನ ಅಥವಾ ಡಿಜಿಟಲ್ ಚಿನ್ನದ ಮಾರಾಟದ ವ್ಯವಹಾರವನ್ನು ಪ್ರಾರಂಭಿಸಿದಾಗ ಹೊರಹೊಮ್ಮಿದ ಪರಿಕಲ್ಪನೆಯಾಗಿದೆ. 

Attachment
PDF
Nishchay Babu Arkalgud Vs State of Karnataka
Preview
Kannada Bar & Bench
kannada.barandbench.com