ಪ್ರತಿಪಕ್ಷಗಳ ವಿರೋಧದ ನಡುವೆಯೇ ಲೋಕಸಭೆಯಲ್ಲಿ ಡಿಜಿಟಲ್ ವೈಯಕ್ತಿಕ ದತ್ತಾಂಶ ಸಂರಕ್ಷಣಾ ಮಸೂದೆ- 2023ನ್ನು ಅಂಗೀಕರಿಸಲಾಯಿತು.
ಸಂಬಂಧಿತ ಉದ್ದೇಶಗಳಿಗಾಗಿ ಡಿಜಿಟಲ್ ವೈಯಕ್ತಿಕ ಮಾಹಿತಿಯನ್ನು ಕಾನೂನು ಬದ್ಧವಾಗಿ ಬಳಸುವ ಅಗತ್ಯತೆಗಳ ಜೊತೆಗೆ ಮಾಹಿತಿ ರಕ್ಷಿಸುವ ವ್ಯಕ್ತಿಗಳ ಹಕ್ಕನ್ನೂ ಕಾಯ್ದುಕೊಳ್ಳುವ ಮೂಲಕ ಡಿಜಿಟಲ್ ವೈಯಕ್ತಿಕದತ್ತಾಂಶ ನಿರ್ವಹಿಸುವ ಗುರಿ ಮಸೂದೆಯದ್ದಾಗಿದೆ.
ತಮ್ಮ ವೈಯಕ್ತಿಕ ದತ್ತಾಂಶವನ್ನು ರಕ್ಷಿಸುವ ವ್ಯಕ್ತಿಗಳ ಹಕ್ಕಿಗೆ ಮಾನ್ಯತೆ ನೀಡುವ ಜೊತೆಗೆ ಕಾನೂನುಬದ್ಧ ಉದ್ದೇಶಗಳಿಗಾಗಿ ಮತ್ತು ಅದಕ್ಕೆ ಸಂಬಂಧಿಸಿದ ಅಥವಾ ಪ್ರಾಸಂಗಿಕ ವಿಷಯಗಳಿಗಾಗಿ ಅಂತಹ ವೈಯಕ್ತಿಕ ಮಾಹಿತಿಯನ್ನು ಪ್ರಕ್ರಿಯೆಗೊಳಪಡಿಸುವ ಅಗತ್ಯತೆಗಾಗಿ ಮಸೂದೆ ರೂಪುಗೊಂಡಿದೆ ಎಂದು ಮಸೂದೆಯ ಪಠ್ಯದಲ್ಲಿ ತಿಳಿಸಲಾಗಿದೆ.
ಮಸೂದೆಯನ್ನು ಹಣಕಾಸು ಮಸೂದೆಯಾಗಿ ಮಂಡಿಸಲಾಗುತ್ತಿದೆ ಎಂಬ ವರದಿಗಳ ನಡುವೆಯೇ ಆಗಸ್ಟ್ 3ರಂದು ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರು ಮಸೂದೆಯನ್ನು ಮಂಡಿಸಿದ್ದರು. ಮಸೂದೆಯು ಸಾಮಾನ್ಯ ಮಸೂದೆಯಾಗಿ ಮಂಡಿಸಲಾಗುತ್ತಿದೆ ಎಂದು ಅವರು ಸ್ಪಷ್ಟ ಪಡಿಸಿದ್ದರು.
ಕಾಂಗ್ರೆಸ್ ರಾಜಕಾರಣಿ ಮತ್ತು ಮಾಜಿ ಕೇಂದ್ರ ಸಚಿವ ಮನೀಶ್ ತಿವಾರಿ ಅವರು ಈ ಮಸೂದೆಯನ್ನು ಹಣಕಾಸು ಮಸೂದೆಯಾಗಿ ಮಂಡಿಸುವುದಕ್ಕೆ ಅಸಮ್ಮತಿ ವ್ಯಕ್ತಪಡಿಸಿದ ನಂತರ ಸ್ಪಷ್ಟೀಕರಣ ನೀಡಲಾಗಿತ್ತು.
ಆನ್‌ಲೈನ್ ಮತ್ತು ಡಿಜಿಟಲೀಕರಣಗೊಂಡ ಆಫ್‌ಲೈನ್ ದತ್ತಾಂಶ ಸೇರಿದಂತೆ ಭಾರತದಲ್ಲಿ ಡಿಜಿಟಲ್ ವೈಯಕ್ತಿಕ ಮಾಹಿತಿ ದತ್ತಾಂಶ ಸಂಸ್ಕರಣೆಗೆ ಮಸೂದೆಯು ಅನುವು ಮಾಡಿಕೊಡುತ್ತದೆ. ಇದು ಭಾರತೀಯ ಸರಕುಗಳು ಅಥವಾ ಸೇವೆಗಳನ್ನು ನೀಡುವುದಕ್ಕಾಗಿ ಭಾರತದ ಹೊರಗಿನ ಪ್ರಕ್ರಿಯೆಗೂ ವಿಸ್ತರಣೆಯಾಗುತ್ತದೆ.
ಸ್ವಯಂಪ್ರೇರಿತವಾಗಿ ಮಾಹಿತಿ ಹಂಚಿಕೊಳ್ಳುವಿಕೆ ಇಲ್ಲವೇ ಪ್ರಭುತ್ವ -ಸಂಬಂಧಿತ ಪ್ರಕ್ರಿಯೆಯಂತಹ ವಿನಾಯಿತಿಗಳ ಹೊರತಾಗಿ ಕಾನೂನುಬದ್ಧ ಪ್ರಕ್ರಿಯೆಗಾಗಿ ವೈಯಕ್ತಿಕ ಮಾಹಿತಿ ಪಡೆಯಲು ಸಮ್ಮತಿ ಅಗತ್ಯವಿದೆ.
ಮಾಹಿತಿ ನಿಖರತೆಯನ್ನು ಕಾಪಾಡಿಕೊಳ್ಳುವ, ಪಡೆದ ಮಾಹಿತಿಗೆ ಸುರಕ್ಷತೆಯನ್ನು ಒದಗಿಸುವ ಹಾಗೂ ತನ್ನ ಉದ್ದೇಶ ಪೂರ್ಣಗೊಂಡ ನಂತರ ಮಾಹಿತಿಯನ್ನು ತೆಗೆದುಹಾಕುವ ಜವಾಬ್ದಾರಿ ಮಾಹಿತಿ ಸಂಗ್ರಾಹಕರದ್ದಾಗಿರುತ್ತದೆ.