ಗೌಪ್ಯತೆ, ದೇಹ ಸ್ವಾಯತ್ತತೆ ಹಾಗೂ ಬದುಕಿನ ಆಯ್ಕೆಗಳಿಲ್ಲದೆ ಘನತೆ ಅಸ್ತಿತ್ವದಲ್ಲಿರದು: ಸಿಜೆಐ ಗವಾಯಿ

ಎಲ್ ಎಂ ಸಿಂಘ್ವಿ ಸ್ಮಾರಕ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಜೆಐ ಅವರು, ವ್ಯಕ್ತಿಗಳ ಘನತೆ ಎತ್ತಿಹಿಡಿಯುವಲ್ಲಿ ಗೌಪ್ಯತೆ ಮತ್ತು ದೇಹ ಸ್ವಾಯತ್ತತೆಯ ಮಹತ್ವವನ್ನು ಒತ್ತಿ ಹೇಳಿದರು.
CJI BR Gavai
CJI BR Gavai
Published on

ಗೌಪ್ಯತೆ, ದೇಹ ಸ್ವಾಯತ್ತತೆ ಹಾಗೂ ಬದುಕಿನ ಆಯ್ಕೆಗೆ ಸ್ವಾತಂತ್ರ್ಯ ಇದ್ದಲ್ಲಿ ಮಾನವ ಘನತೆ ನಿಜವಾಗಿಯೂ ಅರ್ಥಪೂರ್ಣವಾಗುತ್ತದೆ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಬಿ ಆರ್‌ ಗವಾಯಿ ತಿಳಿಸಿದರು.

ಸಿಂಘ್ವಿ ಎಂಡೋಮೆಂಟ್‌ ಮತ್ತು ಒ ಪಿ ಜಿಂದಾಲ್‌ ಗ್ಲೋಬಲ್‌ ಯೂನಿವರ್ಸಿಟಿ ಸಹಯೋಗದಲ್ಲಿ ನವದೆಹಲಿಯಲ್ಲಿ ಬುಧವಾರ ಆಯೋಜಿಸಲಾಗಿದ್ದ ಎಲ್ ಎಂ ಸಿಂಘ್ವಿ ಸ್ಮಾರಕ ಉಪನ್ಯಾಸ ಕಾರ್ಯಕ್ರಮದಲ್ಲಿ "ಸಂವಿಧಾನದ ಆತ್ಮವಾಗಿ ಮಾನವ ಘನತೆ - 21ನೇ ಶತಮಾನದಲ್ಲಿ ನ್ಯಾಯಾಂಗ ಪ್ರತಿಬಿಂಬಗಳು" ಎಂಬ ವಿಷಯದ ಕುರಿತು ಅವರು ಮಾತನಾಡಿದರು.

ಸಂವಿಧಾನವು ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಮತ್ತು ನ್ಯಾಯಕ್ಕೆ ಘನತೆಯನ್ನು ಕೇಂದ್ರಬಿಂದುವಾಗಿ ಗುರುತಿಸುತ್ತದೆ ಎಂದು ಅವರು ಹೇಳಿದರು.

ಸಿಜೆಐ ಅವರ ಉಪನ್ಯಾಸದ ಪ್ರಮುಖ ಅಂಶಗಳು

  • ಗೌಪ್ಯತೆ ಇಲ್ಲದೆ ಘನತೆ ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲ. ಎರಡೂ ಸಂವಿಧಾನ ಗುರುತಿಸಿರುವ ಜೀವನ, ಸ್ವಾತಂತ್ರ್ಯ ಮತ್ತು ಸ್ವಾತಂತ್ರ್ಯದ ಅಳಿಸಲಾಗದ ಮೌಲ್ಯಗಳಲ್ಲಿ ಅಡಕವಾಗಿವೆ ಎಂದು ಕೆ ಎಸ್‌ ಪುಟ್ಟಸ್ವಾಮಿ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣದ ತೀರ್ಪು (ಆಧಾರ್‌ ತೀರ್ಪು) ನುಡಿದಿದೆ.

  • ಸಂತಾನೋತ್ಪತ್ತಿ ಆಯ್ಕೆ, ವೈದ್ಯಕೀಯ ಚಿಕಿತ್ಸೆ ಮತ್ತು ಜೀವನದ ಅಂತ್ಯದ ನಿರ್ಧಾರಗಳ ವಿಷಯಗಳಲ್ಲಿ ಸ್ವಾಯತ್ತತೆಯ ಮೇಲೆ ಘನತೆ ನಿಂತಿರುತ್ತದೆ.

  • ಸುಚಿತಾ ಶ್ರೀವಾಸ್ತವ ಮತ್ತು ಚಂಡೀಗಢ ಸರ್ಕಾರ (2009) ನಡುವಣ ಪ್ರಕರಣ ಹಾಗೂ ಕಾಮನ್‌ ಕಾಸ್‌ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣಗಳು ಸ್ವಾಯತ್ತತೆಯನ್ನು ಘನತೆಯಿಂದ ಬೇರ್ಪಡಿಸಲು ಸಾಧ್ಯವಿಲ್ಲ ಎನ್ನುತ್ತವೆ.  

  •  ಒಬ್ಬ ವ್ಯಕ್ತಿ ತನ್ನ ದೇಹ, ಕ್ರಿಯೆಗಳು ಅಥವಾ ಜೀವನದ ಪರಿಸ್ಥಿತಿಗಳ ಬಗ್ಗೆ ಆಯ್ಕೆ ಮಾಡುವ ಅವಕಾಶದಿಂದ ವಂಚಿತನಾದರೆ, ಅವನು ನಿಜವಾಗಿಯೂ ಗೌರವದಿಂದ ಬದುಕಲು ಸಾಧ್ಯವಿಲ್ಲ.

  • ಕಾನೂನಿನ ಕಣ್ಣಲ್ಲಿ ಕೈದಿಗಳು ಮನುಷ್ಯರು, ಪ್ರಾಣಿಗಳು ಅಲ್ಲ ಎಂದು ಸುನಿಲ್ ಬಾತ್ರಾ (II) ಮತ್ತು ದೆಹಲಿ ಸರ್ಕಾರ ನಡುವಣ ಪ್ರಕರಣ ಹೇಳಿದ್ದು ಕೈದಿಗಳ ಘನತೆಗೆ ಧಕ್ಕೆ ತರುವ ಜೈಲು ಅಧಿಕಾರಿಗಳನ್ನು ಹೊಣೆ ಮಾಡುವ ಕರ್ತವ್ಯ ನ್ಯಾಯಾಲಯಗಳದ್ದಾಗಿದೆ.

  • ಸಂವಿಧಾನ ಶಿಲ್ಪಿಗಳು ಸಂವಿಧಾನ ಪೀಠಿಕೆಯ ಹೃದಯಭಾಗದಲ್ಲಿ ಘನತೆಯನ್ನು ಇರಿಸಿದ್ದು ಅದನ್ನು ದೇಶದ ಭ್ರಾತೃತ್ವ, ಏಕತೆ ಮತ್ತು ಸಮಗ್ರತೆಯೊಂದಿಗೆ ಈ ಬದ್ಧತೆಯು ವೈಯಕ್ತಿಕ ಮೌಲ್ಯಕ್ಕೆ ಮಾತ್ರವಲ್ಲದೆ ಸಾಮಾಜಿಕ ಒಗ್ಗಟ್ಟಿಗೂ ಸಹ ಸಂಬಂಧಿಸಿದೆ.

  • ಬದುಕುವುದು ಎಂದರೆ ಗೌರವದಿಂದ ಬದುಕುವುದು ಎಂದರ್ಥ.  ಪ್ರತಿ ವ್ಯಕ್ತಿಯ ಜೀವನದ ಗೌರವವನ್ನು ಸಾಧಿಸುವುದು ಮೂಲಭೂತ ಹಕ್ಕುಗಳ ಗುರಿಯಾಗಿರುವುದರಿಂದ ಗೌರವವೇ ಮೂಲಭೂತ ಹಕ್ಕುಗಳನ್ನು ಒಂದಾಗಿಸುವ ಕೇಂದ್ರ ಬಿಂದು.

ಕಾರ್ಯಕ್ರಮದಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ , ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಮತ್ತು ವಕೀಲ ಆವಿಷ್ಕರ್ ಸಿಂಘ್ವಿ, ಭಾರತದ ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಮತ್ತು ಭಾರತದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಸೇರಿದಂತೆ ಸುಪ್ರೀಂ ಕೋರ್ಟ್ ಮತ್ತು ದೆಹಲಿ ಹೈಕೋರ್ಟ್‌ನ ವಿವಿಧ ಹಾಲಿ ಮತ್ತು ನಿವೃತ್ತ ನ್ಯಾಯಮೂರ್ತಿಗಳು ಉಪಸ್ಥಿತರಿದ್ದರು.

Kannada Bar & Bench
kannada.barandbench.com