ತನಿಖಾಧಿಕಾರಿಗಳ ಹತ್ಯೆ ಸಂಚು: ನಟ ದಿಲೀಪ್‌ಗೆ ಮಧ್ಯಂತರ ರಕ್ಷಣೆ; ವಿಚಲಿತಗೊಳಿಸುವ ಮಾಹಿತಿ ನ್ಯಾಯಾಲಯದ ಮುಂದೆ

ಷರತ್ತು ಉಲ್ಲಂಘಿಸಿದರೆ ನಟ ಗಂಭೀರ ಪರಿಣಾಮ ಎದುರಿಸಬೇಕಾಗುವುದು ಎಂದು ಏಕಸದಸ್ಯ ಪೀಠ ಇದೇ ವೇಳೆ ಎಚ್ಚರಿಕೆ ನೀಡಿತು.
ತನಿಖಾಧಿಕಾರಿಗಳ ಹತ್ಯೆ ಸಂಚು: ನಟ ದಿಲೀಪ್‌ಗೆ ಮಧ್ಯಂತರ ರಕ್ಷಣೆ; ವಿಚಲಿತಗೊಳಿಸುವ ಮಾಹಿತಿ ನ್ಯಾಯಾಲಯದ ಮುಂದೆ

Kerala HC with Dileep

ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆ ನಡೆಸುತ್ತಿದ್ದ ಪೊಲೀಸ್ ಅಧಿಕಾರಿಗಳ ಹತ್ಯೆಗೆ ಸಂಚು ರೂಪಿಸಿದ ಆರೋಪದಡಿ ಕೇರಳ ಪೊಲೀಸರು ದಾಖಲಿಸಿರುವ ಪ್ರಕರಣದಲ್ಲಿ ಮಲಯಾಳಂ ಸಿನಿಮಾ ನಟ ದಿಲೀಪ್‌ಗೆ ಕೇರಳ ಹೈಕೋರ್ಟ್ ಜನವರಿ 27ರವರೆಗೆ ಬಂಧನದಿಂದ ಮಧ್ಯಂತರ ರಕ್ಷಣೆ ನೀಡಿದೆ [ಪಿ ಗೋಪಾಲಕೃಷ್ಣನ್ ಅಲಿಯಾಸ್ ದಿಲೀಪ್ ಇನ್ನಿತರರು ಮತ್ತು ಕೇರಳ ಸರ್ಕಾರ ಮತ್ತಿತರರ ನಡುವಣ ಪ್ರಕರಣ].

ನಟ ತನಿಖೆಯನ್ನು ಪ್ರಭಾವಿಸಿರುವ ಕುರಿತಂತೆ ವಿಚಲಿತವಾಗಿಸುವಂತಹ ಕೆಲ ಗಂಭೀರ ವಿಚಾರಗಳಿವೆ ಎಂದು ನ್ಯಾಯಮೂರ್ತಿ ಗೋಪಿನಾಥ್ ಪಿ ಹೇಳಿದ್ದಾರೆ. ದಿಲೀಪ್ ಮತ್ತು ಇತರ ಆರೋಪಿಗಳು ಜನವರಿ 23, 24 ಮತ್ತು 25 ರಂದು ಬೆಳಿಗ್ಗೆ 9 ಗಂಟೆಗೆ ಎರ್ನಾಕುಲಂ ಪೊಲೀಸ್‌ ಅಪರಾಧ ದಳದ ಎದುರು ಹಾಜರಾಗಿ ಬೆಳಿಗ್ಗೆ 9ರಿಂದ ರಾತ್ರಿ 8ರವರೆಗೆ ವಿಚಾರಣೆಗೆ ಲಭ್ಯವಾಗಬೇಕು. ಆರೋಪಿಗಳು ತನಿಖೆಗೆ ಸಂಪೂರ್ಣ ಸಹಕಾರ ನೀಡಬೇಕು ಎಂದಿರುವ ಅವರು ಷರತ್ತು ಉಲ್ಲಂಘಿಸಿದರೆ ನಟ ಗಂಭೀರ ಪರಿಣಾಮ ಎದುರಿಸಬೇಕಾಗುವುದು ಎಂಬುದಾಗಿ ಎಚ್ಚರಿಸಿದ್ದಾರೆ.

"ಪ್ರಾಸಿಕ್ಯೂಷನ್‌ ತಮಗೆ ಕೆಲ ದಾಖಲೆಗಳನ್ನು ತೋರಿಸಿದ್ದು, ಅದನ್ನು ಈ ಸಂದರ್ಭದಲ್ಲಿ ನಾನು ವಿವರಿಸಲು ಸಾದ್ಯವಿಲ್ಲ. ಆದರೆ, ಅದು ತನಿಖೆಯನ್ನು ಪ್ರಭಾವಿಸುವ ಸಾಧ್ಯತೆ ತೋರಿಸುತ್ತದೆ. ನಾನು ಮತ್ತೊಮ್ಮೆ ಹೇಳುತ್ತಿದ್ದೇನೆ, ಪ್ರಾಸಿಕ್ಯೂಷನ್‌ ನನ್ನನ್ನು ವಿಚಲಿತಗೊಳಿಸುವಂತಹ ಮಾಹಿತಿ ತೋರಿಸಿದೆ ಎಂದಷ್ಟೇ ಹೇಳಬಲ್ಲೆ," ಎಂದು ಅವರು ಪ್ರಕರಣದ ಗಂಭೀರತೆಯನ್ನು ತಿಳಿಸಿದರು.

Also Read
[ಚುಟುಕು] ನಟ ದಿಲೀಪ್‌ ನಿರೀಕ್ಷಣಾ ಜಾಮೀನು: ಶನಿವಾರ ವಿಶೇಷ ಭೌತಿಕ ವಿಚಾರಣೆ ನಡೆಸಲಿರುವ ಕೇರಳ ಹೈಕೋರ್ಟ್‌

ಆರೋಪಿಗಳ ವಿರುದ್ಧದ ಆರೋಪಗಳು ಗಂಭೀರವಾಗಿದ್ದು, ತನಿಖೆಯನ್ನು ರಕ್ಷಿಸಬೇಕಿದೆ ಎಂದು ಅಭಿಪ್ರಾಯಪಟ್ಟ ನ್ಯಾಯಾಲಯ, ಅಪರಾಧ ಎಸಗಲು ಪಿತೂರಿ ನಡೆಸುವುದು ಕೂಡ ಅಪರಾಧ ಎಂದು ಹೇಳಿತು. "ಆರೋಪಿಗಳು ಪೊಲೀಸ್ ಅಧಿಕಾರಿಗಳನ್ನು ಕೊಲ್ಲಲು ಸಂಚು ರೂಪಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ, ಇದು ಅತ್ಯಂತ ಗಂಭೀರವಾದ ಆರೋಪವಾಗಿದ್ದು ಘನ ಸರ್ಕಾರ ಅದನ್ನು ತನಿಖೆ ಮಾಡಲು ಸಂಪೂರ್ಣ ಅರ್ಹವಾಗಿದೆ" ಎಂದು ನ್ಯಾಯಾಧೀಶರು ವಿವರಿಸಿದರು.

ನಟಿಯೊಬ್ಬರನ್ನು ಕಾರಿನಲ್ಲಿ ಎಳೆದೊಯ್ದು, ಲೈಂಗಿಕ ದೌರ್ಜನ್ಯ ಎಸಗಿ ಛಾಯಾಚಿತ್ರಗಳನ್ನು ತೆಗೆದು ಸೇಡು ತೀರಿಸಿಕೊಳ್ಳಲು ಯತ್ನಿಸಿದ ಆರೋಪದಡಿ ದಿಲೀಪ್‌ ಹಾಗೂ ಇತರ ಆರೋಪಿಗಳು ಈಗಾಗಲೇ ವಿಚಾರಣೆ ಎದುರಿಸುತ್ತಿದ್ದಾರೆ.

Related Stories

No stories found.