ಎದೆ ಹಾಲು ಮಾರಾಟ ಮಾಡಲು ಖಾಸಗಿ ಕಂಪನಿಗಳಿಗೆ ನೀಡಿರುವ ಪರವಾನಗಿ ರದ್ದತಿಗೆ ರಾಜ್ಯಕ್ಕೆ ನಿರ್ದೇಶನ: ಕೇಂದ್ರದ ವಿವರಣೆ

ಎದೆ ಹಾಲಿನ 50 ಎಂಎಲ್‌ ಬಾಟಲ್‌ ಹಾಗೂ 10 ಗ್ರಾಂ ಎದೆಹಾಲಿನ ಪೌಡರ್‌ ಪ್ಯಾಕೆಟ್‌ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಿ, ಅವುಗಳ ಬೆಲೆ ಅತಿ ದುಬಾರಿಯಾಗಿದೆ. ಕ್ರಮವಾಗಿ ₹1239 ಹಾಗೂ ₹313 ನಿಗದಿ ಮಾಡಲಾಗಿದೆ ಎಂದು ತಿಳಿಸಿದ ಅರ್ಜಿದಾರರ ವಕೀಲರು.
Karnataka High Court
Karnataka High Court
Published on

ಎದೆ ಹಾಲನ್ನು ಸಂಗ್ರಹಿಸಿ, ಸಂಸ್ಕರಣೆ ಮಾಡಿ ಅದನ್ನು ಮಾರಾಟ ಮಾಡಲು ಖಾಸಗಿ ಕಂಪನಿಗಳಿಗೆ ನೀಡಿರುವ ಪರವಾನಗಿಯನ್ನು ರದ್ದುಗೊಳಿಸುವಂತೆ ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡಲಾಗಿದೆ ಎಂದು ಕೇಂದ್ರ ಸರ್ಕಾರವು ಬುಧವಾರ ಕರ್ನಾಟಕ ಹೈಕೋರ್ಟ್‌ಗೆ ತಿಳಿಸಿದೆ.

ಎದೆ ಹಾಲಿನ ವಾಣಿಜ್ಯೀಕರಣವನ್ನು ತಡೆಯುವಂತೆ ಕೋರಿ ಮುನೇಗೌಡ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್‌ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್‌ ಅವರ ವಿಭಾಗೀಯ ಪೀಠ ನಡೆಸಿತು.

ಕೇಂದ್ರ ಸರ್ಕಾರ ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಅರವಿಂದ್‌ ಕಾಮತ್‌ ಅವರು “ಕೇಂದ್ರ ಆಯುಷ್‌ ಸಚಿವಾಲಯ ಇತ್ತೀಚೆಗೆ ಕರ್ನಾಟಕ ಸರ್ಕಾರಕ್ಕೆ ಖಾಸಗಿ ಕಂಪನಿಗಳಿಗೆ ಎದೆ ಹಾಲು ಸಂಗ್ರಹಕ್ಕೆ ಅನುಮತಿಸಿ ನೀಡಿರುವ ಪರವಾನಗಿಗಳನ್ನು ರದ್ದುಗೊಳಿಸಬೇಕು ಎಂದು ನಿರ್ದೇಶನ ನೀಡಿದೆ” ಎಂದರು.

“ರಾಜ್ಯಗಳು ನೀಡಿರುವ ಅಂತಹ ಪರವಾನಗಿಗಳನ್ನು ರದ್ದುಗೊಳಿಸುವಂತೆ ಕೇಂದ್ರ ಸೂಚಿಸಿದೆ. ಕೆಲವು ಖಾಸಗಿ ಕಂಪನಿಗಳು ಆಯುಷ್‌ ನಿಯಮಗಳಡಿ ಎದೆ ಹಾಲನ್ನು ವಾಣಿಜ್ಯೀಕರಣಗೊಳಿಸಲು ಪರವಾನಗಿ ಪಡೆದುಕೊಂಡಿದೆ. ಆದರೆ ಇದೀಗ ಕೇಂದ್ರ ಸರ್ಕಾರ ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡಿದೆ. ರಾಜ್ಯಗಳಿಗೆ ಈಗಾಗಲೇ ನೀಡಿರುವ ಲೈಸನ್ಸ್‌ಗಳನ್ನು ರದ್ದುಗೊಳಿಸಲು ಸೂಚಿಸಿದೆ. ಈಗಾಗಲೇ ಒಂದು ಕಂಪನಿಯ ಲೈಸನ್ಸ್‌ ರದ್ದಾಗಿದ್ದು, ಆ ಕಂಪನಿ ಅದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದೆ” ಎಂದರು.

ಅರ್ಜಿದಾರರ ಪರ ವಕೀಲ ಬಿ ವಿಶ್ವೇಶ್ವರಯ್ಯ ಅವರು “ಎದೆ ಹಾಲಿನ 50 ಎಂಎಲ್‌ ಬಾಟಲ್‌ ಹಾಗೂ 10 ಗ್ರಾಂ ಎದೆಹಾಲಿನ ಪೌಡರ್‌ ಪ್ಯಾಕೆಟ್‌ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಿ, ಅವುಗಳ ಬೆಲೆ ಅತಿ ದುಬಾರಿಯಾಗಿದೆ. ಕ್ರಮವಾಗಿ ₹1,239 ಹಾಗೂ ₹313 ನಿಗದಿ ಮಾಡಲಾಗಿದೆ. ಆ ಮೂಲಕ ಎದೆ ಹಾಲನ್ನು ವಾಣಿಜ್ಯೀಕರಣ ಮಾಡಿ ಖಾಸಗಿ ಕಂಪನಿಗಳು ಸಿಕ್ಕಾಪಟ್ಟೆ ಲಾಭ ಮಾಡಿಕೊಳ್ಳುತ್ತಿವೆ” ಎಂದು ದೂರಿದರು.

ಕೇಂದ್ರ ಸರ್ಕಾರದ ವಾದದ ಹಿನ್ನೆಲೆಯಲ್ಲಿ ನ್ಯಾಯಾಲಯ ಆಯುಷ್‌ ಸಚಿವಾಲಯವನ್ನು ಪ್ರತಿವಾದಿಯನ್ನಾಗಿ ಅರ್ಜಿಯಲ್ಲಿ ತಿದ್ದುಪಡಿ ಮಾಡುವಂತೆ ಅರ್ಜಿದಾರರಿಗೆ ಸೂಚನೆ ನೀಡಿ, ಆಯುಷ್‌ ಸಚಿವಾಲಯಕ್ಕೆ ನೋಟಿಸ್‌ ನೀಡಿ ವಿಚಾರಣೆಯನ್ನು ಮುಂದೂಡಿತು.

Kannada Bar & Bench
kannada.barandbench.com