ಲಲಿತಾ ಕುಮಾರಿ ತೀರ್ಪಿನ ಕನ್ನಡ ಅನುವಾದವನ್ನು ಎಲ್ಲಾ ಪೊಲೀಸ್‌ ಠಾಣೆಗೆ ಕಳುಹಿಸಿಕೊಡಲು ಡಿಜಿಪಿಗೆ ಹೈಕೋರ್ಟ್‌ ನಿರ್ದೇಶನ

ಲಲಿತಾ ಕುಮಾರಿ ವರ್ಸಸ್‌ ಉತ್ತರ ಪ್ರದೇಶ ಸರ್ಕಾರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ರೂಪಿಸಿರುವ ನಿಯಮಾವಳಿ ಉಲ್ಲೇಖಿಸಿರುವ ಹೈಕೋರ್ಟ್‌ “ದೂರಿನಲ್ಲಿ ಸಂಜ್ಞೇಯ ಅಪರಾಧದ ಕುರಿತು ಉಲ್ಲೇಖಿಸಿದಾಗ ಪೊಲೀಸರು ಎಫ್‌ಐಆರ್‌ ದಾಖಲಿಸಬೇಕು” ಎಂದಿದೆ.
Justice Suraj Govindaraj and Karnataka HC, Kalburgi bench
Justice Suraj Govindaraj and Karnataka HC, Kalburgi bench

ದೂರು ನೀಡಿ ತಿಂಗಳಾದರೂ ಎಫ್‌ಐಆರ್‌ ದಾಖಲಿಸದ ಪೊಲೀಸರ ಕ್ರಮವನ್ನು ಕರ್ತವ್ಯ ಲೋಪ ಎಂದು ವ್ಯಾಖ್ಯಾನಿಸಿರುವ ಕರ್ನಾಟಕ ಹೈಕೋರ್ಟ್‌ನ ಕಲಬುರ್ಗಿ ಪೀಠವು ರಾಜ್ಯದ ಎಲ್ಲಾ ಪೊಲೀಸ್‌ ಠಾಣೆಗಳಿಗೆ ಸುಪ್ರೀಂ ಕೋರ್ಟ್‌ನ ಲಲಿತಾ ಕುಮಾರಿ ತೀರ್ಪಿನ ಕನ್ನಡ ಅನುವಾದವನ್ನು ಕಳುಹಿಸಿಕೊಡುವಂತೆ ಪೊಲೀಸ್‌ ಮಹಾನಿರ್ದೇಶಕರಿಗೆ ಆದೇಶಿಸಿದೆ. ಲಲಿತಾ ಕುಮಾರಿ ಪ್ರಕರಣದಲ್ಲಿ ಎಫ್‌ಐಆರ್‌ ದಾಖಲಿಸುವಾಗ ಪೊಲೀಸರು ಪಾಲಿಸಬೇಕಾದ ತತ್ವಗಳನ್ನು ಸರ್ವೋಚ್ಚ ನ್ಯಾಯಾಲಯವು ರೂಪಿಸಿದೆ.

2022ರ ನವೆಂಬರ್‌ 18ರಂದು ವಿಜಯಪುರದ ಬಬಲೇಶ್ವರ ಠಾಣೆಯಲ್ಲಿ ದೂರು ದಾಖಲಿಸಿದ್ದು, ಇದುವರೆಗೂ ಪೊಲೀಸರು ಎಫ್‌ಐಆರ್‌ ದಾಖಲಿಸಿಲ್ಲ ಎಂದು ಆಕ್ಷೇಪಿಸಿ ರೈತ ವಿಠ್ಠಲ್‌ ಎಂಬವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರ ನೇತೃತ್ವದ ಏಕಸದಸ್ಯ ಪೀಠ ನಡೆಸಿತು. ಸೊಸೆಯ ಮೇಲೆ ಹಲ್ಲೆ ನಡೆಸಿ, ಆಕೆಯ ಮೊಬೈಲ್‌ ಫೋನ್‌ ಕಸಿದುಕೊಳ್ಳಲಾಗಿದ್ದು, ಆಕೆಯನ್ನು ನಿಂದಿಸಿ ಕೊಲೆ ಬೆದರಿಕೆ ಹಾಕಲಾಗಿದೆ ಎಂದು ವಿಠ್ಠಲ್‌ ದೂರಿನಲ್ಲಿ ವಿವರಿಸಿದ್ದರು.

18.11.2022ರಂದು ದೂರು ನೀಡಲಾಗಿದ್ದು, ಇದುವರೆಗೂ ಎಫ್‌ಐಆರ್‌ ದಾಖಲಿಸದಿರುವುದಕ್ಕೆ ಅವಕಾಶವಿಲ್ಲ. ಇದು ಕರ್ತವ್ಯ ಲೋಪಕ್ಕೆ ಸಮನಾಗಿದೆ. ಹಾಲಿ ಪ್ರಕರಣವು ಅಪರೂಪದ್ದೇನಲ್ಲ. ಇಂಥ ಸ್ವರೂಪದ ಹಲವು ಪ್ರಕರಣಗಳು ಈ ನ್ಯಾಯಾಲಯದ ಮುಂದೆ ಬಂದಿದ್ದು, ಈ ನ್ಯಾಯಾಲಯವು ಲಲಿತಾ ಕುಮಾರಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ರೂಪಿಸಿರುವ ತತ್ವಗಳ ಅನ್ವಯ ಎಫ್‌ಐಆರ್‌ ದಾಖಲಿಸುವಂತೆ ಪೊಲೀಸರಿಗೆ ನಿರ್ದೇಶಿಸಿದೆ” ಎಂದು ಪೀಠ ಹೇಳಿದೆ.

ಲಲಿತಾ ಕುಮಾರಿ ವರ್ಸಸ್‌ ಉತ್ತರ ಪ್ರದೇಶ ಸರ್ಕಾರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ರೂಪಿಸಿರುವ ನಿಯಮಾವಳಿ ಉಲ್ಲೇಖಿಸಿರುವ ಹೈಕೋರ್ಟ್‌ “ದೂರಿನಲ್ಲಿ ಸಂಜ್ಞೇಯ ಅಪರಾಧದ ಕುರಿತು ಉಲ್ಲೇಖಿಸಿದಾಗ ಪೊಲೀಸರು ಎಫ್‌ಐಆರ್‌ ದಾಖಲಿಸಬೇಕು” ಎಂದಿದೆ.

ವಿಠ್ಠಲ್‌ ಅವರ ದೂರು ಆಧರಿಸಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ನಿರ್ದೇಶಿಸಿರುವ ನ್ಯಾಯಾಲಯವು ಎಲ್ಲಾ ಠಾಣೆಯ ಅಧಿಕಾರಿಗಳಿಗೆ ಸುಪ್ರೀಂ ಕೋರ್ಟ್‌ ತೀರ್ಪನ್ನು ಕಳುಹಿಸಿಕೊಂಡುವಂತೆ ಪೊಲೀಸ್‌ ಮಹಾನಿರ್ದೇಶಕರಿಗೆ ನಿರ್ದೇಶಿಸಿದೆ.

“ಲಲಿತಾ ಕುಮಾರಿ ಪ್ರಕರಣದಲ್ಲಿನ 120ನೇ ಪ್ಯಾರಾದೊಂದಿಗೆ ಪೊಲೀಸ್‌ ಮಹಾನಿರ್ದೇಶಕರು ಎಲ್ಲಾ ಠಾಣೆಗಳ ಪೊಲೀಸ್‌ ಅಧಿಕಾರಿಗೆ ಅಗತ್ಯ ಸುತ್ತೋಲೆಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಕಳುಹಿಸಬೇಕು. ಸುತ್ತೋಲೆಯು ಕನ್ನಡ ಮತ್ತು ಇಂಗ್ಲಿಷ್‌ ಭಾಷೆಯಲ್ಲಿರಬೇಕು. ಲಲಿತಾ ಕುಮಾರಿ ಪ್ರಕರಣದ 120ನೇ ಪ್ಯಾರಾದ ಕನ್ನಡ ಅನುವಾದವನ್ನು ಅದರಲ್ಲಿ ಸೇರಿಸಬೇಕು. ಅದನ್ನು ಪಾಲಿಸದಿದ್ದರೆ ಕೈಗೊಳ್ಳಲಾಗುವ ಶಿಸ್ತುಕ್ರಮದ ಸ್ವರೂಪವನ್ನೂಉಲ್ಲೇಖಿಸಬೇಕು” ಎಂದು ಆದೇಶದಲ್ಲಿ ಹೇಳಲಾಗಿದೆ.

“ಲಲಿತಾ ಕುಮಾರಿ ಪ್ರಕರಣದ ತೀರ್ಪನ್ನು ಕನ್ನಡಕ್ಕೆ ಅನುವಾದಿಸಿ ಅದನ್ನು ಎಲ್ಲಾ ಪೊಲೀಸ್‌ ಠಾಣಾ ಮುಖ್ಯಸ್ಥರಿಗೆ ಕಳುಹಿಸಿಕೊಡಬೇಕು. ಹೀಗೆ ಮಾಡುವುದರಿಂದ ಅವರಿಗೆ ಇಂಗ್ಲಿಷ್‌ ಅರ್ಥವಾಗದಿದ್ದರೆ ಕನ್ನಡದಲ್ಲಿ ಅವರಿಂದ ಏನನ್ನು ನಿರೀಕ್ಷಿಸಲಾಗುತ್ತದೆ ಎಂಬುದನ್ನು ತಿಳಿಸಿದಂತಾಗುತ್ತದೆ” ಎಂದು ನ್ಯಾಯಾಲಯ ಮಾರ್ಮಿಕವಾಗಿ ಹೇಳಿದೆ.

Related Stories

No stories found.
Kannada Bar & Bench
kannada.barandbench.com